ಕಾರವಾರ: ನೈಸರ್ಗಿಕ ತಾಣಗಳ ಮೂಲಕ ಗಮನ ಸೆಳೆಯುವ ತಾಲ್ಲೂಕಿನಲ್ಲಿ ಪ್ರವಾಸಿಗರನ್ನು ಸೆಳೆಯುವಲ್ಲಿ ಅಗ್ರ ಸ್ಥಾನ ಪಡೆಯುವ ಸ್ಥಳಗಳ ಪಟ್ಟಿಗೆ ಚೆಂಡಿಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ‘ನಾಗರಮಡಿ ಜಲಪಾತ’ ಸೇರುತ್ತದೆ.
ದಟ್ಟ ಅಡವಿಯ ನಡುವೆ ಬಂಡೆಕಲ್ಲುಗಳಿಂದ ನೀರು ಧುಮ್ಮಿಕ್ಕುತ್ತ ಸೃಷ್ಟಿಯಾದ ತಾಣ ಚಾರಣಿಗರಿಗೆ, ಈಜುಪಟುಗಳಿಗೆ ಆಸಕ್ತಿ ಹೆಚ್ಚಿಸುತ್ತಿದೆ. ಈ ಕಾರಣಕ್ಕಾಗಿಯೇ ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವೃದ್ಧಿಯಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ–66 ರಲ್ಲಿ ಚೆಂಡಿಯಾ ಗ್ರಾಮದ 6ನೇ ಮೈಲಿ ಸಮೀಪದಿಂದ ಅರ್ಧ ಕಿ.ಮೀ ದೂರದವರೆಗೆ ಒಳಕ್ಕೆ ಸಾಗಿ, ಅಲ್ಲಿಂದ ಒಂದೂವರೆ ಕಿ.ಮೀ ಕಡಿದಾದ ರಸ್ತೆಯಲ್ಲಿ ಗುಡ್ಡ ಏರಿ ಸಾಗಿದರೆ ಜಲಪಾತ ತಲುಪಬಹುದಾಗಿದೆ.
ಬಂಡೆಕಲ್ಲುಗಳಿಂದ ಸುಮಾರು 10 ಅಡಿ ಎತ್ತರದಿಂದ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತದೆ. ಹೆಚ್ಚು ಎತ್ತರದಿಂದ ನೀರು ಧುಮ್ಮಿಕ್ಕುವ ತಾಣ ಇದಲ್ಲ. ಆದರೆ, ಧುಮ್ಮಿಕ್ಕಿದ ನೀರು ದೊಡ್ಡ ಗಾತ್ರದ ಬಂಡೆಕಲ್ಲಿನ ಅಡಿಯಿಂದ ಹರಿದು ಬರುವ ಸ್ಥಳ ಈಜುಬಲ್ಲವರಿಗೆ ಮೋಜಿಗೆ ಅನುಕೂಲವಾಗಿದೆ. ಹೀಗಾಗಿಯೆ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ.
‘ನಾಗರಮಡಿ ಜಲಪಾತ ಎತ್ತರದ ಜಲಪಾತವೇನೂ ಅಲ್ಲ. ಆದರೆ ಪರಿಶುದ್ಧ ನೀರು ಇಲ್ಲಿ ಹರಿಯುತ್ತದೆ. ತಿಳಿ ನೀಲಿ ಬಣ್ಣದ ನೀರಿನಲ್ಲಿ ಈಜಲು ಪ್ರವಾಸಿಗರು ಹಾತೊರೆಯುತ್ತಾರೆ. ಜಲಪಾತದಿಂದ ಅಡಿಯಿಂದ ಬಂಡೆಕಲ್ಲುಗಳ ಕೆಳಗೆ ನುಸುಳಿಕೊಂಡು ಈಜುತ್ತ ಸಾಗುವುದು ರೋಮಾಂಚನಕಾರಿಯಾಗಿರುತ್ತದೆ. ಇಂಥ ರೋಮಾಂಚನಕಾರಿ ತಾಣ ಸ್ಥಳೀಯವಾಗಿ ಇನ್ನೆಲ್ಲೂ ಇಲ್ಲ’ ಎನ್ನುತ್ತಾರೆ ಚೆಂಡಿಯಾ ಗ್ರಾಮಸ್ಥ ದೀಪಕ ನಾಯ್ಕ.
‘ಚೆಂಡಿಯಾ ಜಲಪಾತ ಎಂಬ ಹೆಸರು ಈ ತಾಣಕ್ಕೆ ಇದೆ. ಆದರೆ, ನಾಗರಮಡಿ ಎಂಬ ಹೆಸರಿನಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದೆ. ಜೂನ್‍ನಿಂದ ಡಿಸೆಂಬರ್ ಅಂತ್ಯದವರೆಗೆ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಈಜು ಬಲ್ಲವರು ಮಾತ್ರ ನೀರಿಗೆ ಇಳಿಯಬಹುದು. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟಬುತ್ತಿ. ಹುಚ್ಚು ಸಾಹಸಕ್ಕೆ ಮುಂದಾಗಿ ಕೆಲವರು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ’ ಎಂದೂ ಹೇಳಿದರು.
‘ನಾಗರಮಡಿ ಜಲಪಾತ ತೀರಾ ಈಚಿನ ವರ್ಷಗಳವರೆಗೆ ಯಾವುದೇ ಸೌಕರ್ಯ ಹೊಂದಿರಲಿಲ್ಲ. ಈ ಹಿಂದಿನ ವಲಯ ಅರಣ್ಯಾಧಿಕಾರಿ ಅವಧಿಯಲ್ಲಿ ಇಲ್ಲಿ ಆಕರ್ಷಕ ಪ್ರವೇಶದ್ವಾರ ಪ್ರವಾಸಿಗರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಯಿತು. ಅಲ್ಲಲ್ಲಿ ಸೂಚನಾ ಫಲಕಗಳನ್ನೂ ಅಳವಡಿಸಲಾಗಿದೆ. ವಾರಾಂತ್ಯದಲ್ಲಿ ಭದ್ರತೆ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಕಣ್ಗಾವಲು ಇಡುತ್ತಾರೆ’ ಎನ್ನುತ್ತಾರೆ ಚೆಂಡಿಯಾ ಗ್ರಾಮಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.