ADVERTISEMENT

ಶಿರಸಿ: ನಗರ ಸೀಳುವುದೇ ರಾಷ್ಟ್ರೀಯ ಹೆದ್ದಾರಿ?

ನೀಲೇಕಣಿ ಬಳಿ ಬೈಪಾಸ್ ರಸ್ತೆ ನಿರ್ಮಿಸುವ ಪ್ರಸ್ತಾವಕ್ಕೆ ಸಿಗದ ಅನುಮತಿ

ಗಣಪತಿ ಹೆಗಡೆ
Published 31 ಡಿಸೆಂಬರ್ 2021, 8:51 IST
Last Updated 31 ಡಿಸೆಂಬರ್ 2021, 8:51 IST
ವಾಹನ ದಟ್ಟಣೆಯಿಂದ ಕೂಡಿರುವ ಶಿರಸಿಯ ನೀಲೇಕಣಿ ರಸ್ತೆ
ವಾಹನ ದಟ್ಟಣೆಯಿಂದ ಕೂಡಿರುವ ಶಿರಸಿಯ ನೀಲೇಕಣಿ ರಸ್ತೆ   

ಶಿರಸಿ: ಸಾಗರಮಾಲಾ ಯೋಜನೆ ಅಡಿ ಕುಮಟಾದಿಂದ ಶಿರಸಿ ಸಂಪರ್ಕಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ. ಇದರ ಮುಂದುವರಿದ ಭಾಗವಾಗಿ ತಡಸವರೆಗೆ ಹಾದುಹೋಗಲಿರುವ ಹೆದ್ದಾರಿ ನಗರ ವ್ಯಾಪ್ತಿಯಲ್ಲೇ ಹಾದುಹೋಗಲಿದೆಯೇ ಎಂಬ ಚರ್ಚೆ ಈಗ ಅಧಿಕಾರಿಗಳ ವಲಯದಲ್ಲಿ ನಡೆದಿದೆ.

ಶಿರಸಿ ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಹಾದುಹೋಗುವುದನ್ನು ತಪ್ಪಿಸುವ ಸಲುವಾಗಿ ಸುಮಾರು ನಾಲ್ಕು ವರ್ಷಗಳ ಹಿಂದೆ ಸಲ್ಲಿಕೆಯಾಗಿದ್ದ ಬೈಪಾಸ್ ಪ್ರಸ್ತಾವನೆಗೆ ಕೇಂದ್ರ ಭೂಸಾರಿಗೆ ಇಲಾಖೆ ಅನುಮೋದಿಸಿಲ್ಲ ಎಂಬ ಮಾಹಿತಿ ಅಧಿಕಾರಿಗಳ ವಲಯದಿಂದ ಖಚಿತಗೊಂಡಿದೆ. ಹೀಗಾಗಿ, ಈ ಚರ್ಚೆ ಆರಂಭಗೊಂಡಿದೆ.

ರಾಜ್ಯ ಹೆದ್ದಾರಿ ಸಾಗಿದಲ್ಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ ನಗರದ ಜನಜೀವನ, ಉದ್ಯಮ ವಲಯಕ್ಕೆ ಪೆಟ್ಟು ಬೀಳಬಹುದು ಎಂಬುದು ಸಾರ್ವಜನಿಕರ ಆತಂಕ.

ADVERTISEMENT

ತಡಸದಿಂದ ಕುಮಟಾ ಸಂಪರ್ಕಿಸುವಂತೆ ರಸ್ತೆ ನಿರ್ಮಿಸುವದು ಯೋಜನೆಯ ಭಾಗವಾಗಿದೆ. ಈ ಪೈಕಿ ₹440 ಕೋಟಿ ವೆಚ್ಚದಲ್ಲಿ ಕುಮಟಾ ತಾಲ್ಲೂಕಿನ ದೀವಗಿ ಕ್ರಾಸ್‍ನಿಂದ ಶಿರಸಿಯ ನೀಲೇಕಣಿವರೆಗೆ 60 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸುವ ಮೊದಲ ಹಂತದ ಕೆಲಸ ಪ್ರಗತಿಯಲ್ಲಿದೆ.

ಎರಡನೇ ಹಂತದಲ್ಲಿ ಬಿಸಲಕೊಪ್ಪದಿಂದ ಹಾವೇರಿ ಜಿಲ್ಲೆಯ ನಾಲ್ಕರ ಕ್ರಾಸ್‍ವರೆಗಿನ 75 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗುತ್ತದೆ. ₹286 ಕೋಟಿ ವೆಚ್ಚದ ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಾರ್ಚ್ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಈ ನಡುವೆ ಮೂರನೆ ಹಂತದಲ್ಲಿ ನೀಲೇಕಣಿಯಿಂದ ಬಿಸಲಕೊಪ್ಪವರೆಗೆ ಸಂಪರ್ಕಿಸುವಂತೆ ಹೆದ್ದಾರಿ ನಿರ್ಮಾಣಗೊಳ್ಳಬೇಕಿದೆ. ರಾಷ್ಟ್ರೀಯ ಹೆದ್ದಾರಿ ನಗರದಲ್ಲಿ ಹಾದುಹೋದರೆ ಹಲವು ಮನೆಗಳು, ಅಂಗಡಿ–ಮುಂಗಟ್ಟುಗಳನ್ನು ತೆರವುಗೊಳಿಸುವ ಆತಂಕವಿದೆ. ಈ ಕಾರಣಕ್ಕಾಗಿ ಅದನ್ನು ತಪ್ಪಿಸಲು ನೀಲೇಕಣಿಯಿಂದ ಭೀಮನಗುಡ್ಡ, ಕಲ್ಕುಣಿ, ಕುಳವೆ, ಕರಿಗುಂಡಿ ಮಾರ್ಗವಾಗಿ ನಗರದ ಹೊರವಲಯದಲ್ಲಿ ರಸ್ತೆ ಹಾದುಹೋಗುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

‘ಶಿರಸಿ ನಗರದಿಂದ ಹೊರವಲಯದಲ್ಲಿ ಹೆದ್ದಾರಿ ನಿರ್ಮಿಸುವ ಪ್ರಸ್ತಾವನೆಗೆ ಕೇಂದ್ರ ಮಟ್ಟದಲ್ಲಿ ಒಪ್ಪಿಗೆ ಸಿಕ್ಕಿಲ್ಲ. ಅರಣ್ಯಭೂಮಿಯೂ ಸ್ವಾಧೀನಗೊಳ್ಳುವ ಸಾಧ್ಯತೆ ಇರುವ ಕಾರಣ ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯ ಈ ಪ್ರಸ್ತಾವನೆ ಒಪ್ಪಿಕೊಂಡಿರಲಿಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧಾರವಾಡ ವಿಭಾಗದ ಕಚೇರಿಯ ಎಂಜಿನಿಯರ್ ಒಬ್ಬರು ಖಚಿತಪಡಿಸಿದರು.

ಫ್ಲೈ ಓವರ್ ನಿರ್ಮಾಣಕ್ಕೆ ಒತ್ತಾಯ:ರಾಷ್ಟ್ರೀಯ ಹೆದ್ದಾರಿ ಶಿರಸಿ ನಗರದ ಮಧ್ಯದಲ್ಲೇ ಹಾದುಹೋಗುವ ಪ್ರಮೇಯ ಎದುರಾದರೆ ಫ್ಲೈಓವರ್ ನಿರ್ಮಿಸಬಹುದು. ಇಂತಹ ಒತ್ತಡವನ್ನು ಜನಪ್ರತಿನಿಧಿಗಳು ಕೇಂದ್ರ ಭೂಸಾರಿಗೆ ಸಚಿವಾಲಯದ ಮೇಲೆ ಹೇರಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿದೆ.

‘ಬೈಪಾಸ್ ಮೂಲಕ ರಸ್ತೆ ನಿರ್ಮಾಣ ಸಾಧ್ಯವೇ ಇಲ್ಲ ಎಂದಾದರೆ ಫ್ಲೈಓವರ್ ಮುಂದಿನ ಆಯ್ಕೆಯಾಗಲಿ’ ಎನ್ನುತ್ತಾರೆ ಉದ್ಯಮಿ ಗಣೇಶ ಭಟ್ಟ ಉಪ್ಪೋಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.