ಕಾರವಾರ: ‘ಹೊನ್ನಾವರದ ಟೊಂಕಾದಲ್ಲಿ ಬಂದರು ನಿರ್ಮಾಣ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸಲಾಗಿದೆ’ ಎಂಬ ದೂರಿಗೆ ಸಂಬಂಧಿಸಿ, ಅ.28ರಂದು ಖುದ್ದು ಹಾಜರಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸೋಮವಾರ ಸಮನ್ಸ್ ಜಾರಿ ಮಾಡಿದೆ.
ಮೇ 9ರಂದು ವಿಚಾರಣೆ ನಡೆಸಿದ್ದ ಆಯೋಗವು, ಪ್ರಕರಣದಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿತ್ತು. ಈ ಸಂಬಂಧ ಜುಲೈ 19ರಂದು ಜ್ಞಾಪನಾಪತ್ರ ಕಳುಹಿಸಲಾಗಿತ್ತು. ಆದರೆ, ಸಂಬಂಧಿಸಿದ ಅಧಿಕಾರಿಗಳು ವರದಿ ಸಲ್ಲಿಸಲು ವಿಫಲರಾಗಿದ್ದಾರೆ. ಇದೊಂದು ಗಂಭೀರ ವಿಚಾರವಾಗಿದ್ದು, ಇಬ್ಬರೂ ಆಯೋಗದ ಮುಂದೆ ಹಾಜರಾಗಬೇಕು. ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮತ್ತು ಇತರ ವರದಿಗಳನ್ನು ಹಾಜರುಪಡಿಸಬೇಕು ಎಂದು ಸೂಚಿಸಿದೆ.
ಒಂದುವೇಳೆ ಅ.21ರ ಮೊದಲು ಆಯೋಗಕ್ಕೆ ವರದಿಯು ತಲುಪಿದರೆ ಅಧಿಕಾರಿಗಳು ಸ್ವತಃ ಹಾಜರಾಗಬೇಕಿಲ್ಲ ಎಂದು ಆಯೋಗವು ತಿಳಿಸಿದೆ.
ಟೊಂಕಾದಲ್ಲಿ ಬಂದರು ನಿರ್ಮಾಣವನ್ನು ವಿರೋಧಿಸಿ ಈ ವರ್ಷ ಜ.24ರಂದು ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದರು. ಆಗ ಪೊಲೀಸರು ಪ್ರತಿಭಟನಕಾರರ ವಿರುದ್ಧ ಬಲ ಪ್ರಯೋಗಿಸಿ, ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಸ್ವತಂತ್ರವಾಗಿ ತನಿಖೆ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.