ADVERTISEMENT

ನೌಕಾಪಡೆ ದಿನಾಚರಣೆ: ನೌಕಾನೆಲೆಯಲ್ಲಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 13:50 IST
Last Updated 4 ಡಿಸೆಂಬರ್ 2022, 13:50 IST
ಐ.ಎನ್.ಎಸ್ ಕದಂಬ ನೌಕಾನೆಲೆಯಲ್ಲಿ ಭಾನುವಾರ, ಭಾರತೀಯ ನೌಕಾ ದಿನಾಚರಣೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಭಾಗವಹಿಸಿದ್ದರು
ಐ.ಎನ್.ಎಸ್ ಕದಂಬ ನೌಕಾನೆಲೆಯಲ್ಲಿ ಭಾನುವಾರ, ಭಾರತೀಯ ನೌಕಾ ದಿನಾಚರಣೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಭಾಗವಹಿಸಿದ್ದರು   

ಕಾರವಾರ: ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆಯಲ್ಲಿ ಭಾನುವಾರ, ಭಾರತೀಯ ನೌಕಾ ದಿನಾಚರಣೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಭಾಗವಹಿಸಿದ್ದರು.

ಸೂರ್ಯಾಸ್ತಕ್ಕೂ ಮೊದಲು ನೌಕಾಪಡೆಯ ಬ್ಯಾಂಡ್ ಸಿಬ್ಬಂದಿ ವಾದ್ಯ ಪರಿಕರಗಳಲ್ಲಿ ನುಡಿಸಿದ ವಿವಿಧ ದೇಶಭಕ್ತಿ ಗೀತೆಗಳು ಸೇರಿದ್ದವರ ರೋಮಾಂಚನಗೊಳಿಸಿದವು. ಬ್ಯಾಂಡ್ ಸಿಬ್ಬಂದಿ ಬೀಟಿಂಗ್ ರಿಟ್ರೀಟ್ ಮೂಲಕ ದೇಶದ ನೌಕಾಪಡೆಯ ಸಿಬ್ಬಂದಿಯ ತ್ಯಾಗ, ಬಲಿದಾನ ಮತ್ತು ಸಾಮರ್ಥ್ಯವನ್ನು ಸ್ಮರಿಸಿದರು. ನಂತರ ನೌಕಾಪಡೆಯ ಧ್ವಜದ ಅವರೋಹಣ ಮಾಡಲಾಯಿತು.

ಸಂಭ್ರಮಾಚರಣೆಯ ಭಾಗವಾಗಿ ನೌಕಾಪಡೆಯ ನೌಕೆಗಳಾದ ಐ.ಎನ್.ಎಸ್ ಸುವರ್ಣಾ, ಐ.ಎನ್.ಎಸ್ ತಿಲ್ಲಾಂ ಚಾಂಗ್ ಮತ್ತು ಐ.ಎನ್.ಎಸ್ ಕೋಸ್ವಾರಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೌಕೆಗಳಿಂದ ಸುಡುಮದ್ದುಗಳ ಚಿತ್ತಾರವು ಆಗಸವನ್ನು ವರ್ಣಮಯಗೊಳಿಸಿತು.

ADVERTISEMENT

1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ (ಆಪರೇಷನ್ ಟ್ರೈಡೆಂಟ್) ಭಾರತದ ಜಯಭೇರಿಯಲ್ಲಿ ನೌಕಾಪಡೆಯ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಡಿ.4ರಂದು ಕರಾಚಿಯ ಬಂದರಿನ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ಜಂಘಾಬಲವನ್ನೇ ಉಡುಗಿಸಿತ್ತು. ಬಳಿಕ ಭಾರತವು ವಿಜಯ ಸಾಧಿಸಿತು.

ಕರ್ನಾಟಕ ನೌಕಾವಲಯದ ನೇವಿ ವೈವ್ಸ್ ಸಂಘದ ಅಧ್ಯಕ್ಷೆ ಗುಲ್‌ರುಖ್ ಆನಂದ್, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ರಿಯರ್ ಅಡ್ಮಿರಲ್ ಡಿ.ಕೆ.ಗೋಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.