ADVERTISEMENT

ಕಾರವಾರ | ನಿರ್ವಹಣೆಗೆ ನಿರ್ಲಕ್ಷ: ಉದ್ಯಾನದ ಪರಿಕರಗಳಿಗೆ ಗರ

ಗಣಪತಿ ಹೆಗಡೆ
Published 7 ಅಕ್ಟೋಬರ್ 2024, 7:06 IST
Last Updated 7 ಅಕ್ಟೋಬರ್ 2024, 7:06 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿನ ಮಕ್ಕಳ ಉದ್ಯಾನದಲ್ಲಿ ಮಕ್ಕಳು ಆಡಿ ನಲಿಯಲು ಅಳವಡಿಸಿದ್ದ ಜಾರುಬಂಡಿಯು ಮುರಿದು ಬಿದ್ದಿದೆ
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿನ ಮಕ್ಕಳ ಉದ್ಯಾನದಲ್ಲಿ ಮಕ್ಕಳು ಆಡಿ ನಲಿಯಲು ಅಳವಡಿಸಿದ್ದ ಜಾರುಬಂಡಿಯು ಮುರಿದು ಬಿದ್ದಿದೆ   

ಕಾರವಾರ: ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿನ ಉದ್ಯಾನಗಳಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದರೂ ಅಲ್ಲಿನ ಸೌಲಭ್ಯಗಳು ಕಳೆಗುಂದಿವೆ.

ಉದ್ಯಾನಗಳಲ್ಲಿನ ವಾಕಿಂಗ್ ಪಾತ್ ಮೇಲೆ ಹುಲ್ಲು, ಗಿಡಗಂಟಿ ಬೆಳೆದು ಓಡಾಟ ನಡೆಸಲಾಗದ ಸ್ಥಿತ ಕೆಲವೆಡೆ ಇದ್ದರೆ, ಮಕ್ಕಳು ಆಡಿ ನಲಿಯಲು ಮತ್ತು ವಯಸ್ಕರು ದೈಹಿಕ ಕಸರತ್ತು ನಡೆಸಲು ಇದ್ದ ಪರಿಕರಗಳು ದುಸ್ಥಿತಿಗೆ ತಲುಪಿವೆ.

ಜಿಲ್ಲಾಕೇಂದ್ರ ಕಾರವಾರ ನಗರದ ಕೆಲ ಉದ್ಯಾನಗಳ ನಿರ್ವಹಣೆ ಉತ್ತಮವಾಗಿದ್ದರೆ, ನಗರಸಭೆ ಪಕ್ಕದಲ್ಲೇ ಇರುವ ಗಾಂಧಿ ಉದ್ಯಾನ, ಹಬ್ಬುವಾಡಾ, ಕೆ.ಎಚ್.ಬಿ ಕಾಲೊನಿಯ ಉದ್ಯಾನಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಆರೋಪವಿದೆ. ಕಡಲತೀರದಲ್ಲಿನ ಉದ್ಯಾನದಲ್ಲಿನ ಮಕ್ಕಳ ಆಟಿಕೆಗಳು ಮುರಿದು ಬಿದ್ದು ವರ್ಷ ಕಳೆದರೂ ಅದನ್ನು ಸರಿಪಡಿಸುವ ಕೆಲಸ ನಡೆದಿಲ್ಲ.

ADVERTISEMENT

‘ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಅನುದಾನ ಪಡೆದು ಉದ್ಯಾನ ನಿರ್ವಹಣೆಗೆ ಪ್ರಯತ್ನಿಸಲಾಗುವುದು’ ಎಂಬುದಾಗಿ ಪೌರಾಯುಕ್ತ ಜಗದೀಶ ಹುಲಗೆಜ್ಜಿ ಹೇಳುತ್ತಾರೆ.

ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ, ಪಟ್ಟಣ ಪಂಚಾಯಿತಿ ಆವರಣದ ಉದ್ಯಾನಗಳಲ್ಲಿನ ಸಣ್ಣ ಮಕ್ಕಳ ಪರಿಕರಗಳ ನಿರ್ವಹಣೆಯಲ್ಲಿ ಕೊರತೆ ಎದ್ದು ಕಾಣುತ್ತಿದೆ. ಜೋಕಾಲಿ, ಇಳಿಜಾರು ಬಂಡಿಯಂತ ಪರಿಕರಗಳು ಸುರಕ್ಷಿತವಾಗಿಲ್ಲ ಎಂಬ ಭಾವನೆ ವ್ಯಕ್ತವಾಗುತ್ತಿದೆ.

‘ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಮಳೆಗಾಲದಲ್ಲಿ ಕಾಲಿಡಲು ಆಗದಂತ ಪರಿಸ್ಥಿತಿಯಿತ್ತು. ವಾಕಿಂಗ್‌ ಪಾತ್‌ ಮುಚ್ಚಿಹೋಗುವಷ್ಟರ ಮಟ್ಟಿಗೆ ಕಳೆ ಬೆಳೆದು ನಿಂತಿತ್ತು. ಆಟದ ಪರಿಕರಗಳೂ ಸಹ ಹುಲ್ಲುಗಾವಲಿನಲ್ಲಿ ಮುಚ್ಚಿಹೋಗಿದ್ದವು. ಸಾರ್ವಜನಿಕರು ಪ್ಲಾಸ್ಟಿಕ್‌ ಸಹಿತ ತ್ಯಾಜ್ಯವನ್ನು ಉದ್ಯಾನದಲ್ಲಿ ಎಸೆಯುತ್ತಿರುವುದು ಉದ್ಯಾನದ ಅಂದಕ್ಕೆ ಹಿನ್ನಡೆಯಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಪ್ರಮೋದ ರಾವ್‌ ಹೇಳುತ್ತಾರೆ.

ಕುಮಟಾ ಪಟ್ಟಣದ ವಿವೇಕನಗರ ಉದ್ಯಾನವನ ಹಾಗೂ ರಾಷ್ಟ್ರೀಯ ಹೆದ್ದಾರಿ ಎದುರಿನ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನಗಳನ್ನು ಪುರಸಭೆ ನಿರ್ವಹಿಸುತ್ತಿದೆ. ವಿವೇಕನಗರ ಉದ್ಯಾನವನದಲ್ಲಿ ಸ್ಥಳೀಯರು ಆಸಕ್ತಿಯಿಂದ ಗಿಡಗಳಿಗೆ ನೀರು ಹಾಕಿ ನಿರ್ವಹಣೆ ನಡೆಸುತ್ತಿದ್ದಾರೆ.

ಸಿದ್ದಾಪುರ ಪಟ್ಟಣದ ಹೃದಯಭಾಗದಲ್ಲಿರುವ ಉದ್ಯಾನದಲ್ಲಿರುವ ಕಾರಂಜಿ ದುರಸ್ತಿಗೆ ಕಾದಿದೆ. ಯಲ್ಲಾಪುರ ಪಟ್ಟಣದ ಜೋಡುಕೆರೆ ಪಕ್ಕದ ಉದ್ಯಾನವನ ನಿರ್ವಹಣೆ ಇಲ್ಲದೇ ಪಾಳುಬಿದ್ದ ಸ್ಮಶಾನದಂತಾಗಿದೆ. ಅರಣ್ಯ ಇಲಾಖೆಗೆ ಸೇರಿದ ಈ ಉದ್ಯಾನವನದಲ್ಲಿ ಈ ಹಿಂದೆ ರಂಗಮಂದಿರ, ನೀರಿನ ಕಾರಂಜಿ, ವಾಕಿಂಗ್ ಪಾತ್ ಇತ್ತು. ಈಗ ಅವೆಲ್ಲ ನಿರ್ವಹಣೆ ಇಲ್ಲದೇ ಪಾಳುಬಿದ್ದವೆ.

ಭಟ್ಕಳ ಪಟ್ಟಣದ ಬಂದರ ರಸ್ತೆಯಲ್ಲಿರುವ ಸರ್ದಾರ್‌ ವಲ್ಲಭ್‌ಬಾಯಿ ಸಸ್ಯಕಾಶಿ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಂತಾಗಿದ್ದು, ಬೀದಿ ನಾಯಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಇಲ್ಲಿರುವ ಆಟಿಕೆ ಯಂತ್ರಗಳು ಕೆಟ್ಟುಹೋಗಿದೆ. ಸಾಗರ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯಕಾಶಿಯಲ್ಲಿರುವ ಹಲವು ಆಟಿಕೆಗಳು ಶಿಥಿಲಗೊಂಡಿವೆ. ಹುಯಿಲಮಿಡಿಯಲ್ಲಿರುವ ಇಕೋ ಪಾರ್ಕ್ ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆ ತಲುಪಿದೆ.

ಹೊನ್ನಾವರ ಪಟ್ಟಣದಲ್ಲಿ ಹೆಸರಿಗೆ ನಾಲ್ಕು ಉದ್ಯಾನಗಳಿದ್ದರೂ ಅವುಗಳಲ್ಲಿ ಒಂದೆರಡಷ್ಟೇ ಸಾರ್ವಜನಿಕರ ಸೇವೆಗೆ ಲಭ್ಯವಿವೆ. ರಾಯಲ್‌ಕೇರಿಯಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನದಲ್ಲಿ ಕೊರತೆ ಹೆಚ್ಚಿವೆ. ಗಾಂಧಿ ನಗರದಲ್ಲಿ ಉದ್ಯಾನ ನಿರ್ಮಿಸಲು ಜಾಗದ ಸುತ್ತ ಬೇಲಿ ಹಾಕುವ ಕಾರ್ಯ ಮಾತ್ರ ನಡೆದಿದೆ. ಕರ್ನಲ್ ಕಂಬದ ಸಮೀಪ ಕೆಲ ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ರೋಟರಿ ಪಾರ್ಕ್‍ನಲ್ಲಿ ಅಳವಡಿಸಿರುವ ಪರಿಕರಗಳಿಗೆ ತುಕ್ಕು ಹಿಡಿದಿದ್ದು ದುಃಸ್ಥಿತಿಯಲ್ಲಿದೆ.

‘ಅಮೃತ ಯೋಜನೆಯ ಎರಡನೇ ಹಂತದಲ್ಲಿ ಪಟ್ಟಣದ ಉದ್ಯಾನಗಳ ಅಭಿವೃದ್ಧಿಗೆ ₹3 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಏಸು ಬೆಂಗಳೂರ ಹೇಳುತ್ತಾರೆ.

ದಾಂಡೇಲಿಯ ಬಾಂಬೆ ಚಾಳ, ನೆಹರೂ ಉದ್ಯಾನ, ದಿನಕರ ದೇಸಾಯಿ ಉದ್ಯಾನ, ಬಸವೇಶ್ವರ ನಗರ, ನಿರ್ಮಲ ನಗರ ಸೇರಿದಂತೆ ಅನೇಕ ಉದ್ಯಾನಗಳನ್ನು ನಗರಸಭೆ ನಿರ್ವಹಿಸುತ್ತಿದೆ.

‘ನಗರಕ್ಕೆ ಹಸಿರು ಪಟ್ಟಿಯಂತೆ ಇರುವ ಉದ್ಯಾನಗಳ ನಿರ್ವಹಣೆಗೆ ಮಾಲಿಗಳ ಕೊರತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಸರ್ಕಾರ ನೀಡದೆ ಸಮಸ್ಯೆ ಆಗುತ್ತಿದೆ’ ಎಂಬುದಾಗಿ ನಗರಸಭೆ ಅಧಿಕಾರಿಯೊಬ್ಬರು ಹೇಳಿದರು.

ಅಂಕೋಲಾ ಪಟ್ಟಣದ ಸ್ಮಾರಕ ಭವನ ಉದ್ಯಾನದ ವಾಕಿಂಗ್ ಪಾತ್ ಮತ್ತು ಮಕ್ಕಳಿಗಾಗಿ ಅಳವಡಿಸಿದ ಆಟಿಕೆ ಸಾಮಗ್ರಿಗಳು ಉಪಯೋಗಿಸಲಾಗದಷ್ಟು ಹದಗೆಟ್ಟಿವೆ.

‘ಮಳೆಯ ಕಾರಣದಿಂದ ಉದ್ಯಾನದ ಕಡೆ ಗಮನ ಹರಿಸಿಲ್ಲ. ಕೆಲವು ದಿನಗಳಲ್ಲಿ ಹದಗೆಟ್ಟ ಆಟಿಕೆಗಳನ್ನು ದುರಸ್ಥಿ ಮಾಡುತ್ತೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಅಕ್ಷತಾ ಹೇಳುತ್ತಾರೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಮೋಹನ ನಾಯ್ಕ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಮುಂಡಗೋಡದ ಅರಣ್ಯ ಇಲಾಖೆಯ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಬೇಡವಾದ ಕಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿರುವುದರಿಂದ ಆಟದ ಪರಿಕರಗಳು ಮುಚ್ಚಿಹೋಗಿದೆ
ಸಿದ್ದಾಪುರ ಪಟ್ಟಣದಲ್ಲಿ ಸರಿಯಾದ ಉದ್ಯಾನ ಇಲ್ಲದಾಗಿದೆ. ಬಸ್ ನಿಲ್ದಾಣದ ಎದುರಿನಲ್ಲಿರುವ ಉದ್ಯಾನ ಸದಾ ದೂಳು ಮತ್ತು ಗದ್ದಲದಿಂದ ಕೂಡಿದ್ದು ಪ್ರಶಾಂತ ವಾತಾವರಣ ಇಲ್ಲ
ಸರೋಜಾ ಎಸ್ (ಸಿದ್ದಾಪುರ) ಸ್ಥಳೀಯ ನಿವಾಸಿ
ಪಟ್ಟಣ ವ್ಯಾಪ್ತಿ ಉದ್ಯಾನ ನಿರ್ವಹಣೆ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಿದರೆ ನಿರ್ವಹಣೆಯ ಗುಣಮಟ್ಟ ಕಾಯ್ದುಕೊಳ್ಳಬಹುದು
ವಿನಾಯಕ ಮರಾಠೆ (ಯಲ್ಲಾಪುರ) ಸ್ಥಳೀಯ ನಿವಾಸಿ
ಪ್ರಭಾತನಗರದಲ್ಲಿ ಅತಿಕ್ರಮಣ ತಡೆಗಟ್ಟುವ ಪ್ರಯತ್ನವಾಗಿ ಅರಣ್ಯ ಇಲಾಖೆ ಉದ್ಯಾನ ನಿರ್ಮಿಸಿದೆ. ಉದ್ಯಾನಕ್ಕೆ ಭೇಟಿ ನೀಡುವ ಜನರಿಗೆ ತಕ್ಕ ಮಟ್ಟಿಗೆ ನೆಮ್ಮದಿ ನೀಡುವಂತಿದೆ
ಸಂತೋಷ ಮೆಣಸಗಿ (ಹೊನ್ನಾವರ)
ಆಟಿಕೆ ಆಸನಗಳ ಶುದ್ಧೀಕರಣ
ಶಿರಸಿ: ಮಳೆ ಪ್ರಮಾಣ ಕಡಿಮೆ ಆಗುತ್ತಿದ್ದಂತೆ ನಗರಸಭೆ ಸ್ವಚ್ಛತೆ ಕಾರ್ಯ ಕೈಗೊಂಡು ನಗರದ ಉದ್ಯಾನಗಳನ್ನು ಶುಚಿಗೊಳಿಸಿದೆ. ಮರಾಠಿಕೊಪ್ಪ ವಿಶಾಲನಗರ ಇಂದಿರಾನಗರದ ಉದ್ಯಾನಗಳಲ್ಲಿ ಬೆಳೆದ ಕಳೆ ಗಿಡಗಂಟಿಗಳನ್ನು ಸ್ವಚ್ಛಮಾಡಲಾಗಿದೆ. ಆಸನಗಳು ಆಟದ ಪರಿಕರಗಳು ವ್ಯಾಯಾಮದ ಉಪಕರಣಗಳನ್ನು ತೊಳೆದು ಶುದ್ಧೀಕರಣಗೊಳಿಸಲಾಗಿದೆ. ‘ಶುದ್ಧ ಕುಡಿಯುವ ನೀರಿನ ಲಭ್ಯತೆ ಉದ್ಯಾನದಲ್ಲಿಲ್ಲ. ಈ ವ್ಯವಸ್ಥೆಯನ್ನು ನಗರಸಭೆ ಕಲ್ಪಿಸಿದರೆ ವಾಯುವಿಹಾರ ವ್ಯಾಯಾಮ ಮಾಡಲು ಬರುವವರಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ವಿಶಾಲ ನಗರದ ರಾಮಕೃಷ್ಣ ಹೆಗಡೆ. ‘ಮಳೆಗಾಲ ಮುಗಿದ ತಕ್ಷಣವೇ ಉದ್ಯಾನಗಳ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ’ ಎಂಬುದಾಗಿ ಪೌರಾಯುಕ್ತ ಕಾಂತರಾಜ್ ಹೇಳುತ್ತಾರೆ.
ನಿಸರ್ಗಧಾಮದಲ್ಲಿ ‘ಇಲ್ಲ’ಗಳೇ ಹೆಚ್ಚು
ಹಳಿಯಾಳ ಪಟ್ಟಣದಲ್ಲಿ ಮರಡಿಗುಡ್ಡ ಹಾಗೂ ಕಿಲ್ಲಾ ಕೋಟೆಯ ಬಳಿ ಇರುವ ನಿಸರ್ಗಧಾಮ ನಿರ್ವಹಣೆಯ ಕೊರತೆ ಎದುರಿಸುತ್ತಿವೆ. ಇವೆರಡೂ ಉದ್ಯಾನ ಅರಣ್ಯ ಇಲಾಖೆ ಸುಪರ್ದಿಯಲ್ಲಿವೆ. ಮರಡಿ ಗುಡ್ಡದ ನಿಸರ್ಗಧಾಮದಲ್ಲಿನ ಮಕ್ಕಳ ಆಟಿಕೆ ಸಾಮಗ್ರಿಗಳು ತುಕ್ಕು ಹಿಡಿದಿವೆ. ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿದ್ದ ಕಾರಂಜಿ ಮತ್ತು ಪ್ರತಿಮೆಗಳು ಹಾಳಾಗಿವೆ. ಉದ್ಯಾನವನದ ತುಂಬೆಲ್ಲ ಹುಲ್ಲು ಬೆಳೆದಿದ್ದು ವಾಯುವಿಹಾರದ ದಾರಿ ಮುಚ್ಚಿಹೋಗಿದೆ. ನವಗ್ರಹ ವನಕ್ಕೆ ನಿರ್ಮಿಸಿದ ಕಟ್ಟೆಯು ಒಡೆದು ಹಾಳಾಗಿದೆ. ಪವಿತ್ರವನ ಜಿಂಕೆವನಗಳೂ ಆಕರ್ಷಣೆ ಕಳೆದುಕೊಂಡಿವೆ. ಉದ್ಯಾನಕ್ಕೆ ಹೊಂದಿಕೊಂಡು ನಿರ್ಮಿಸಿದ್ದ ಪುಟ್ಟ ಕ್ಯಾಂಟೀನ್ ಮುಚ್ಚಿದೆ. ‘ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಉದ್ಯಾನಗಳು ನಿರ್ವಹಣೆ ಇಲ್ಲದೆ ಪಾಳು ಬೀಳುತ್ತಿರುವುದು ಸರಿಯಲ್ಲ. ಇದು ಜನರ ತೆರಿಗೆ ಹಣ ಪೋಲು ಮಾಡುವುದರ ಜತೆಗೆ ಮೂಲಸೌಲಭ್ಯವೊಂದನ್ನು ಕಸಿದುಕೊಂಡಂತಾಗುತ್ತಿದೆ’ ಎನ್ನುತ್ತಾರೆ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ವೇದಿಕೆ ಅಧ್ಯಕ್ಷ ಜಿ.ಡಿ ಗಂಗಾಧರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.