ಕಾರವಾರ: ಇಲ್ಲಿನ ಕೋಡಿಬಾಗದಲ್ಲಿ ಕುಸಿದು ಬಿದ್ದಿರುವ ಕಾಳಿ ನದಿಯ ಹಳೆಯ ಸೇತುವೆಯ ಅವಶೇಷ ತೆರವುಗೊಳಿಸಲು ಮುಂಬೈನಿಂದ ಆಗಮಿಸಲಿರುವ ಬೃಹತ್ ಗಾತ್ರದ ಬಾರ್ಜ್ ನಿಲುಗಡೆಗೆ ಕಾಳಿನದಿ ದಡದಲ್ಲಿ ಹೊಸ ಜೆಟ್ಟಿ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.
ಕೋಡಿಬಾಗದ ಕಾಳಿ ಹೊಸ ಸೇತುವೆಯ ಕೆಳಭಾಗದಲ್ಲಿನ ನದಿ ದಡದಲ್ಲಿ ಸುಮಾರು 75 ಮೀಟರ್ ಉದ್ದದ ಜೆಟ್ಟಿ ನಿರ್ಮಿಸಲು ಐ.ಆರ್.ಇ ಕಂಪನಿ ಕಾಮಗಾರಿ ಕೈಗೊಂಡಿದೆ. ನದಿ ದಡ ಕೊನೆಗೊಳ್ಳುವುದಕ್ಕಿಂತ ಎರಡು ಅಡಿ ಮುಂದಕ್ಕೆ ದಪ್ಪ ಗಾತ್ರದ ಕಾಂಕ್ರೀಟ್ ಹಲಗೆಗಳನ್ನು ಜೋಡಿಸಿ, ಅದರ ನಡುವೆ ಕಲ್ಲು, ಮಣ್ಣು ಭರಣ ಮಾಡಲಾಗುತ್ತಿದೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರ ನಿರ್ಮಾಣ ನಡೆಸುತ್ತಿರುವ ಐ.ಆರ್.ಬಿ ಕಂಪನಿಯೇ ಕಾಳಿ ಸೇತುವೆಯ ಅವಶೇಷ ತೆರವುಗೊಳಿಸುವ ಹೊಣೆ ನಿಭಾಯಿಸಬೇಕಾಗಿದೆ. ತೆರವುಗೊಳಿಸುವ ಪ್ರಕ್ರಿಯೆ ಆರಂಭಗೊಂಡು ಸುಮಾರು 20 ದಿನ ಕಳೆದಿದ್ದು ಅಲ್ಪ ಭಾಗ ಮಾತ್ರ ಅವಶೇಷ ತೆರವುಗೊಂಡಿದೆ.
‘ನದಿಯಲ್ಲಿ ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸುವ ಜತೆಗೆ, ಕುಸಿಯದೆ ಉಳಿದುಕೊಂಡಿರುವ ಹಳೆಯ ಸೇತುವೆಯ ಸುಮಾರು 330 ಮೀ ಭಾಗವನ್ನು ಒಡೆದು ತೆರವುಗೊಳಿಸಬೇಕಾಗಿದೆ. ಇದಕ್ಕಾಗಿ ಕ್ರೇನ್, ಕಾಂಕ್ರೀಟ್ ಒಡೆಯುವ ಯಂತ್ರೋಪಕರಣ ಒಳಗೊಂಡಿರುವ ಬೃಹತ್ ಗಾತ್ರದ ಬಾರ್ಜ್ ತರಿಸಬೇಕಾಗಿದೆ. ಮುಂಬೈನಿಂದ ಬಾರ್ಜ್ ಹೊರಡಲು ಸಿದ್ಧತೆ ನಡೆದಿದೆ. ಅದು ಕಾರವಾರ ತಲುಪಿದರೆ ನಿಲುಗಡೆಯಾಗಲು ಜೆಟ್ಟಿಯ ಅಗತ್ಯವಿದ್ದು, ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಕಂಪನಿಯ ಹಿರಿಯ ಎಂಜಿನಿಯರ್ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅವಶೇಷ ತೆರವುಗೊಳಿಸಲು ಹೊಸ ಸೇತುವೆಯನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಲಾಗದು. ನದಿಯಿಂದಲೇ ಕಾರ್ಯಾಚರಣೆ ನಡೆಸಬೇಕಿದ್ದು, ಬಾರ್ಜ್ ಇದೇ ಪ್ರದೇಶದಲ್ಲಿ ನಿಲುಗಡೆಯಾಗಬೇಕಿದೆ. ಬಾರ್ಜ್ ಜತೆಗೆ ಇನ್ನೂ ಹಲವು ದೋಣಿಗಳು, ಯಂತ್ರೋಪಕರಣಗಳು ಬರಲಿವೆ. ಅವೆಲ್ಲವುಗಳನ್ನು ಸುರಕ್ಷಿತವಾಗಿ ನಿಲುಗಡೆ ಮಾಡಲು ಜಟ್ಟಿಯ ಅಗತ್ಯವಿದೆ. ತಾತ್ಕಾಲಿಕವಾಗಿ ಜಟ್ಟಿ ನಿರ್ಮಿಸದೆ ಹಲವು ಕಾಲ ಬಾಳಿಕೆ ಬರುವ ಜಟ್ಟಿಯನ್ನೇ ನಿರ್ಮಿಸಲಿದ್ದೇವೆ’ ಎಂದೂ ವಿವರಿಸಿದರು.
75 ಮೀಟರ್ ಉದ್ದದ ಜೆಟ್ಟಿ ನಿರ್ಮಾಣ 4–5 ದಿನದೊಳಗೆ ಮುಂಬೈನಿಂದ ಬಾರ್ಜ್ ಆಗಮನದ ಸಾಧ್ಯತೆ ಕಾರ್ಯಾಚರಣೆಗೆ ಹೊಸ ಸೇತುವೆ ಬಳಕೆ ಇಲ್ಲ
ಸೇತುವೆ ಅವಶೇಷ ತೆರವುಗೊಳಿಸುವ ಉದ್ದೇಶಕ್ಕೆ ಕೋಡಿಬಾಗದಲ್ಲಿನ ಬಂದರು ಇಲಾಖೆಗೆ ಸೇರಿದ ಜಾಗವನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳಲು ಐ.ಆರ್.ಬಿ ಕಂಪನಿಗೆ ಅವಕಾಶ ನೀಡಲಾಗಿದೆ. ಅಲ್ಲಿ ಅವರು ತಾತ್ಕಾಲಿಕ ಜಟ್ಟಿ ನಿರ್ಮಿಸಿಕೊಳ್ಳುತ್ತಿದ್ದಾರೆಕ್ಯಾಪ್ಟನ್ ಸಿ.ಸ್ವಾಮಿ ಬಂದರು ಮತ್ತು ಜಲಸಾರಿಗೆ ಮಂಡಳಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.