ADVERTISEMENT

ಕಾರವಾರ: ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಮೊಬೈಲ್

ಪೋಷಣ್‌ ತಂತ್ರಾಂಶದಲ್ಲಿ ಕಡ್ಡಾಯ ಮಾಹಿತಿ ದಾಖಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 13:00 IST
Last Updated 14 ಜೂನ್ 2024, 13:00 IST
ಕಾರವಾರದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಮೊಬೈಲ್‍ ವಿತರಿಸಿದರು
ಕಾರವಾರದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಮೊಬೈಲ್‍ ವಿತರಿಸಿದರು   

ಕಾರವಾರ: ಪೋಷಣ್‌ ಅಭಿಯಾನದ ಮೂಲಕ ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರದ ಕುರಿತ ವರದಿಯನ್ನು ತಂತ್ರಾಂಶದಲ್ಲಿ ದಾಖಲಿಸುವ ಜತೆಗೆ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಚಟುವಟಿಕೆಗೆ ಅನುಕೂಲ ಮಾಡಿಕೊಡಲು ಹೊಸ ಮೊಬೈಲ್‍ಗಳನ್ನು ವಿತರಿಸಲಾಗುತ್ತಿದೆ.

ಸುಧಾರಿತ ಆ್ಯಂಡ್ರಾಯ್ಡ್ ತಂತ್ರಜ್ಞಾನದ ಮೊಬೈಲ್‍ ಅನ್ನು ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ವಿತರಿಸುವ ಕಾರ್ಯಕ್ಕೆ ಈಚೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಂಕೇತಿಕವಾಗಿ ಕೆಲ ಕಾರ್ಯಕರ್ತೆಯರಿಗೆ ಮೊಬೈಲ್ ನೀಡುವ ಜತೆಗೆ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸದ್ಯ 3,009 ಜನರಿಗೆ ಮೊಬೈಲ್ ವಿತರಣೆ ಮಾಡಲಾಗುತ್ತಿದೆ. ಅಂಕೋಲಾ ತಾಲ್ಲೂಕಿನ 236 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ, ಭಟ್ಕಳದ 235, ಹಳಿಯಾಳದ 256, ಹೊನ್ನಾವರದ 341, ಜೊಯಿಡಾದ 220, ಕಾರವಾರದ 253, ಕುಮಟಾದ 293, ಮುಂಡಗೋಡದ 201, ಸಿದ್ದಾಪುರದ 237, ಶಿರಸಿಯ 389, ಯಲ್ಲಾಪುರದ 205 ಸೇರಿದಂತೆ ಒಟ್ಟು 2,782 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 84 ಮೇಲ್ವಿಚಾರಕರಿಗೆ ಮೊಬೈಲ್ ವಿತರಿಸಲಾಗುತ್ತದೆ.

ADVERTISEMENT

‘ಮೊಬೈಲ್‌ಗಳಿಗೆ ಇಲಾಖೆಯ ಮೂಲಕವೇ ಪ್ರತಿ ತಿಂಗಳು ನಿಗದಿತ ಮೊತ್ತದ ಕರೆನ್ಸಿಯನ್ನು ರೀಚಾರ್ಜ್ ಮಾಡಲಾಗುತ್ತದೆ. ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ಮಕ್ಕಳ ಮಾಹಿತಿ ದಾಖಲು ಮಾಡುವುದರ ಮೂಲಕ ಮಕ್ಕಳಲ್ಲಿ ಕಂಡು ಬರುವ ಅಪೌಷ್ಟಿಕತೆಗೆ ಸಕಾಲದಲ್ಲಿ ಸೂಕ್ತ ನೆರವು ನೀಡಿ, ಅವರು ಆರೋಗ್ಯವಂತರಾಗಿ ಬೆಳವಣಿಗೆ ಹೊಂದಲು ಬೇಕಾದ ಎಲ್ಲಾ ಅಗತ್ಯ ಪೂರಕ ವ್ಯವಸ್ಥೆಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಜತೆಗೆ ಅಂಗನವಾಡಿಯಲ್ಲಿ ಪ್ರತಿದಿನ ನಡೆಯುವ ಚಟುವಟಿಕೆಗಳನ್ನು ಕೂಡಾ ಈ ಮೊಬೈಲ್ ಮೂಲಕ ದಾಖಲಿಸಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್.ಕುಕನೂರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.