ವಿಶ್ವೇಶ್ವರ ಗಾಂವ್ಕರ್
ಯಲ್ಲಾಪುರ: ತಾಲ್ಲೂಕು ಕೇಂದ್ರದಿಂದ 36 ಕಿ.ಮೀ. ದೂರದಲ್ಲಿರುವ ಮಾವಿನಮನೆ ಗ್ರಾಮ ಪಂಚಾಯ್ತಿ ಸಾರಿಗೆ ಸಂಪರ್ಕದ ಸಮಸ್ಯೆ ಎದುರಿಸುತ್ತಿದೆ.
ಮಾವಿನಮನೆ, ಬೇಣದಗುಳೆ, ಕಾನೂರು, ಮರಳ್ಳಿ, ಬಾರೆ ಎಂಬ ಐದು ಗ್ರಾಮಗಳನ್ನು ಒಳಗೊಂಡ ಈ ಗ್ರಾಮ ಪಂಚಾಯ್ತಿಗೆ ಮಲವಳ್ಳಿ ವ್ಯವಹಾರದ ಕೇಂದ್ರ. ಮಲವಳ್ಳಿಗೆ ದಿನಕ್ಕೆ ಮೂರು ಬಾರಿ ಬಸ್ ಬರುತ್ತಿದೆಯಾದರೂ ಇಲ್ಲಿನ ಅನೇಕ ಮಜರೆಗಳಿಗೆ ಬಸ್ ಸಂಚಾರವಿಲ್ಲ.
ಕಾರವಾರ–ಅಂಕೋಲಾ ತಾಲ್ಲೂಕಿನ ಗಡಿ ಭಾಗದಲ್ಲಿರುವ ಮರಳ್ಳಿ ಗ್ರಾಮ ಈವರೆಗೂ ಬಸ್ ಸಂಪರ್ಕ ಕಂಡಿಲ್ಲ. ಇಲ್ಲಿನ ಹರೂರು, ಬಂಕೊಳ್ಳಿ ಮಜರೆಗಳೂ ಬಸ್ ಸಂಪರ್ಕದಿಂದ ವಂಚಿತವಾಗಿವೆ.
ಐದು ಸಾವಿರ ಜನಸಂಖ್ಯೆ ಹೊಂದಿರುವ ಮಾವಿನಮನೆ ಗ್ರಾಮ ಪಂಚಾಯ್ತಿ ಅಂದಾಜು 25 ಕಿ.ಮೀ ಸುತ್ತ ವ್ಯಾಪಿಸಿದೆ. ಸುಮಾರು ಒಂದೂವರೆ ಸಾವಿರದಷ್ಟು ಮನೆಗಳಿವೆ. ಅಡಿಕೆ ಪ್ರಮುಖ ಬೆಳೆಯಾಗಿದ್ದು ಹವ್ಯಕ, ಕುಣಬಿ, ಒಕ್ಕಲಿಗ, ಮರಾಠಿ ಸಮುದಾಯದವರೇ ಹೆಚ್ಚಾಗಿ ವಾಸವಾಗಿದ್ದಾರೆ.
‘ಸಮೀಪದ ಶೀಗೇಕೇರಿಯವರೆಗೆ ಮಾತ್ರ ಬಸ್ ಬರುತ್ತಿದ್ದು ನಾವು ಸಣ್ಣಪುಟ್ಟ ಕೆಲಸಗಳಿಗೂ ಎಂಟು ಕಿ.ಮೀ. ನಡೆದು ಬಸ್ ಹತ್ತ ಬೇಕಿದೆ. ಇಲ್ಲಿಂದ 42 ವಿದ್ಯಾರ್ಥಿಗಳು ಮಲವಳ್ಳಿಯ ಪ್ರಾಥಮಿಕ, ಪ್ರೌಢಶಾಲೆಗೆ ಹೋಗುತ್ತಿದ್ದಾರೆ. ಕೈಗಾ ಅಣು ವಿದ್ಯುತ್ ಕೇಂದ್ರದವರು ವಿದ್ಯಾರ್ಥಿಗಳ ಪ್ರಯಾಣಕ್ಕೆ ವಾಹನ ವ್ಯವಸ್ಥೆ ಮಾಡಿದ್ದರು. ಆದರೆ ಈಗ ಅದು ಸ್ಥಗಿತಗೊಂಡಿದೆ. ಬಸ್ ಸಂಚಾರ ಕಲ್ಪಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಗ್ರಾಮದ ಪ್ರಮುಖ ರಸ್ಮಾ ಕುಣಬಿ.
‘ಚಾವಡಿ ಮತ್ತು ಸಾತಿಮನೆಗೆ ಕಾಂಕ್ರೀಟ್ ರಸ್ತೆ ಇದೆಯಾದರೂ ಬಸ್ ಸಂಪರ್ಕ ಇಲ್ಲ. ಕೈಗಾ ಅಣುಸ್ಥಾವರದಿಂದ 26 ಕಿ.ಮೀ ದೂರದಲ್ಲಿರುವ ಮಲವಳ್ಳಿಗೆ ಕೈಗಾ ಅಣು ವಿದ್ಯುತ್ ಕೇಂದ್ರ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿಕೊಟ್ಟಿದೆ. ಆದರೆ ಇಲ್ಲಿ ಕಾಯಂ ವೈದ್ಯರು, ಔಷಧಾಲಯ ಸಿಬ್ಬಂದಿ ಇಲ್ಲ. ಎರಡು ಎಎನ್‌ಎಂ ಹಾಗೂ ಆಶಾ ಕಾರ್ಯಕರ್ತೆಯ ಹುದ್ದೆಯೂ ಖಾಲಿ ಇದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಮಾಚಣ್ಣ ಹಲ್ಗುಮನೆ.
‘ಎಂಟು ಕಿ.ಮೀ ಉದ್ದದ ಪದ್ಮಾಪುರ -ಹೆಗ್ಗಾರ ರಸ್ತೆಯನ್ನು ಅಭಿವೃದ್ಧಿಪಡಿಸಿ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಬೇಕು. ಆಗ ಕೈಗಾ ಬಂಕಾಪುರ ರಸ್ತೆ ಭೂಕುಸಿತದಿಂದ ಸಂಪರ್ಕ ಕಡಿತಗೊಂಡರೂ ಪದ್ಮಾಪುರ-ಹೆಗ್ಗಾರ ರಸ್ತೆ ಮೂಲಕ ಸಂಪರ್ಕ ಸಾಧ್ಯವಾಗುತ್ತದೆ’ ಎಂಬುದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ ಸಲಹೆ.
‘ಬೆಳಕು ಯೋಜನೆಯಲ್ಲಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿಹಾಕಿದ ಬಿಪಿಎಲ್ ಕಾರ್ಡ ಹೊಂದಿದ 50 ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ದೊರೆತಿಲ್ಲ. ಗ್ರಾಮ ಪಂಚಾಯ್ತಿಯನ್ನು ಬಯಲು ಶೌಚ ಮುಕ್ತ ಗ್ರಾಮವಾಗಿ ಮಾಡಲು 100 ಶೌಚಾಲಯಗಳ ಅಗತ್ಯವಿದೆ. ಮಲವಳ್ಳಿ ಹೈಸ್ಕೂಲ್‌ನಲ್ಲಿ 125 ವಿದ್ಯಾರ್ಥಿಗಳು ಓದುತ್ತಿದ್ದು ಕಟ್ಟಡ ಶಿಥಿಲವಾಗಿದೆ. ನೂತನ ಕಟ್ಟಡ ಮತ್ತು ಹೆಚ್ಚುವರಿ ಕೋಣೆ ಆಗಬೇಕಿದೆ. ಕುಣಬಿಕೇರಿಯ ಯಳಮನೆ ಹಳ್ಳ ಗೌಡ್ರಕೇರಿಯ ಮುಂಡಗಿಮನೆ ಹಳ್ಳ ಸೇರಿದಂತೆ ಸುಮಾರು 60 ಕಾಲು ಸಂಕಗಳ ಅಗತ್ಯವಿದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಮಾಚಣ್ಣ ಹಲ್ಗುಮನೆ.
‘ಗ್ರಾಮಸ್ಥರ ನಡಿಗೆ ಗ್ರಾಮ ಪಂಚಾಯ್ತಿ ಕಡೆಗೆ' ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಇಲ್ಲಿಯೇ ಕರೆಸಿ ಗ್ರಾಮಸ್ಥರ ಸಮಸ್ಯೆಯನ್ನು ಸ್ಥಳೀಯವಾಗಿಯೇ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ.-ಸುಬ್ಬಣ್ಣ ಕುಂಟೆಕಳಿ ಮಾವಿನಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.