ಯಲ್ಲಾಪುರ: ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಪುನರ್‌ನಿರ್ಮಾಣಕ್ಕಾಗಿ ರಾಜೀವ ಗಾಂಧಿ ವಸತಿ ನಿಗಮ ಒದಗಿಸಬೇಕಿದ್ದ ಅನುದಾನದ ಪೂರ್ಣ ಕಂತು ಬಿಡುಗಡೆಯಾಗದೇ ತಾಲ್ಲೂಕಿನಲ್ಲಿ ಅನೇಕ ಮನೆಗಳು ಅರ್ಧದಲ್ಲಿಯೇ ನಿಂತಿವೆ.
2019ರಲ್ಲಿ ರಾಜೀವ ಗಾಂಧಿ ವಸತಿ ನಿಗಮ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಯ ಪುನರ್‌ನಿರ್ಮಾಣಕ್ಕಾಗಿ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಒಟ್ಟು 4 ಕಂತುಗಳಲ್ಲಿ ₹ 5 ಲಕ್ಷ ನೀಡುವುದಾಗಿ ತಿಳಿಸಿತು. ಅದರಂತೆ ಆಯ್ಕೆಯಾದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೊದಲ ಕಂತಾಗಿ ₹ 1 ಲಕ್ಷ ಜಮಾ ಮಾಡಿತು. ₹ 1 ಲಕ್ಷ ಜಮಾ ಆದ ಕಾರಣ ಫಲಾನುಭವಿಗಳು ₹ 5 ಲಕ್ಷ ಜಮಾ ಆಗುತ್ತದೆ ಎನ್ನುವ ಭರವಸೆಯಿಂದ ಮನೆ ಕೆಲಸ ಆರಂಭಿಸಿದರು. ಈ ರೀತಿ ಯಲ್ಲಾಪುರ ಪಟ್ಟಣದಲ್ಲಿ 4 ಹಾಗೂ ಗ್ರಾಮಾಂತರ ಭಾಗದಲ್ಲಿ 8 ಮನೆ ನಿರ‍್ಮಾಣದ ಕೆಲಸ ಆರಂಭವಾಯಿತು. ಆದರೆ ಮಂದಿನ ಕಂತುಗಳು ಬಿಡುಗಡೆ ಆಗದೇ, ಮನೆಗಳು ಮೇಲೆಳದೇ ಫಲಾನುಭವಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ರಾಜೀವ ಗಾಂಧಿ ವಸತಿ ನಿಗಮದ ಯೋಜನೆಯ ಪ್ರಕಾರ ಮೊದಲನೇ ಕಂತಿನ ಹಣ ₹ 1 ಲಕ್ಷ ಬಳಸಿಕೊಂಡು ಮನೆ ನಿರ್ಮಾಣಕ್ಕೆ ಪಾಯ (ಬುನಾದಿ) ಹಾಕಬೇಕು. ನಂತರ ಗ್ರಾಮ ಲೆಕ್ಕಿಗ ಅಥವಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನೆಯ ಅಡಿಪಾಯ ಮುಗಿದ ಕುರಿತು ಮಾಹಿತಿ ನೀಡಬೇಕು. ಅವರು ಜಿಪಿಎಸ್ ಮಾಡಿದ ನಂತರ ಎರಡನೇ ಕಂತು ಬಿಡುಗಡೆ ಆಗುತ್ತದೆ. ಮನೆಯ ಲಿಂಟಲ್ ಕಾಮಗಾರಿ ಮುಗಿದ ನಂತರ 3ನೇ ಕಂತು ಬಿಡುಗಡೆ ಆಗುತ್ತದೆ. ಮನೆಯ ಕೆಲಸ ಪೂರ್ಣಗೊಂಡ ನಂತರ ಕೊನೆಯ ಕಂತಿನ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಹೀಗೆ ನಿಗಮ ಮನೆಯ ನಿರ್ಮಾಣಕ್ಕೆ ಒಟ್ಟೂ ₹ 5 ಲಕ್ಷ ಒದಗಿಸುತ್ತದೆ.
ಮೊದಲ ಕಂತಿನ ಹಣ ₹ ಲಕ್ಷ ಪಡೆದು ಮನೆ ಆರಂಭಿಸಿದವರಿಗೆ ಎರಡನೇ ಕಂತಿನ ಹಣ ಬಿಡುಗಡೆಗೆ ವಿವಿಧ ತಾಂತ್ರಿಕ ಅಡಚಣೆ ಉಂಟಾಯಿತು. ಮೊದಲ ಕಂತಿನ ಅನುದಾನದ ಬಿಡುಗಡೆ ತಹಶೀಲ್ದಾರರ ಹಂತದಲ್ಲೇ ಅಂತಿಮವಾಗುತ್ತಿತ್ತು. ಆದರೆ ಎರಡನೇ ಕಂತಿನ ಹಣ ಬಿಡುಗಡೆಗೆ ವಿವಿಧ ನಿಯಮ ವಿಧಿಸಲಾಯಿತು. ಮನೆ ಕಟ್ಟಲಾಗುತ್ತಿರುವ ಸ್ಥಳ ಫಲಾನುಭವಿಗಳ ಹೆಸರಿನಲ್ಲಿ ಅಧಿಕೃತವಾಗಿ ಇಲ್ಲ, ಮನೆಯ ಜಾಗ ಅತಿಕ್ರಮಣದ ಸ್ಥಳದಲ್ಲಿದೆ.. ಮುಂತಾದ ಕಾರಣ ನೀಡಿ ಮುಂದಿನ ಕಂತಿನ ಅನುದಾನ ಬಿಡುಗಡೆ ಮಾಡಲಿಲ್ಲ.
2019ರಲ್ಲಿಯೇ ಆರಂಭಗೊಂಡ ಮನೆ ನಿರ್ಮಾಣದ ಕಾಮಗಾರಿ ನಾಲ್ಕು ವರ್ಷಗಳಾದರೂ ಹಣಕಾಸಿನ ಕೊರತೆಯಿಂದ ಇದುವರೆಗೂ ಪೂರ್ಣಗೊಂಡಿಲ್ಲ. ಕೆಲವರು ಅಲ್ಲಿ ಇಲ್ಲಿ ಸಾಲ ಮಾಡಿ ತಾತ್ಪೂರ್ತಿಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೆಲವರು ಕೆಲಸ ಮುಂದುವರಿಸಲಾಗದೇ ಏನು ಮಾಡಬೇಕೆಂದು ತಿಳಿಯದೆ ಕೈ ಚೆಲ್ಲಿ ಕುಳಿತಿದ್ದಾರೆ. ನಿಗಮ ಆದಷ್ಟು ಬೇಗ ಪೂರ್ಣ ಹಣ ಒದಗಿಸುವ ಮೂಲಕ ಬಡವರ ಮನೆ ನಿರ್ಮಾಣದ ಕನಸಿಗೆ ನೆರವಾಗಬೇಕು ಎನ್ನುವುದು ಫಲಾನುಭವಿಗಳ ಬೇಡಿಕೆ.
ಮನೆ ಹೇಗೆ ಮುಗಿಸಬೇಕೆಂದು ತಿಳಿಯುತ್ತಿಲ್ಲ ಕಂತು ಬಿಡುಗಡೆಯಾಗದೇ ಮನೆಯ ಕೆಲಸ ನಿಂತು ಸಮಸ್ಯೆಯಾಗಿದೆ. ಈಗ ಈ ಮನೆಯೂ ಪೂರ್ಣವಾಗಿಲ್ಲ. ಈ ಯೋಜನೆಯ ಫಲಾನುಭವಿಯಾದ್ದರಿಂದ ಆಶ್ರಯ ಮನೆ ಬಸವ ಮನೆ ಯೋಜನೆಯಲ್ಲಿ ಅರ್ಜಿ ಹಾಕಲು ಅವಕಾಶ ಇಲ್ಲ. ಒಟ್ಟಿನಲ್ಲಿ ಮನೆ ಹೇಗೆ ಮುಗಿಸಬೇಕು ಎನ್ನುವುದೇ ತಿಳಿಯದಾಗಿದೆ.-ಗುಲಾಬಿ ಮುರಳೀಧರ ಕೋಡ್ಕಣಿ ಫಲಾನುಭವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.