ADVERTISEMENT

ಶಿರಸಿ: ಒತ್ತಡದ ದಿನಚರಿಯಿಂದ ರಿಲ್ಯಾಕ್ಸ್ ಮೂಡ್'ನತ್ತ ಕಾಗೇರಿ

​ಪ್ರಜಾವಾಣಿ ವಾರ್ತೆ
Published 8 ಮೇ 2024, 6:25 IST
Last Updated 8 ಮೇ 2024, 6:25 IST
   

ಶಿರಸಿ: ಚುನಾವಣೆಗೆ ಸ್ಪರ್ಧಿಸಿ ಪ್ರಚಾರಕ್ಕಾಗಿ ಬಿಡುವಿಲ್ಲದೆ ಓಡಾಟ ನಡೆಸಿ ಒತ್ತಡದ ದಿನಚರಿಗೆ ಅಂಟಿಕೊಂಡಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತದಾನ ಮುಕ್ತಾಯದ ಮಾರನೆ ದಿನ ಮನೆಯ ತೋಟ ಪಟ್ಟಿಯಲ್ಲಿ ಓಡಾಡಿದರು. ದನಕರುಗಳಿಗೆ ಮೇವು ನೀಡುವ ಜತೆ ಹೂವಿನ ಗಿಡಗಳಿಗೆ ನೀರೆರೆದು ರಿಲ್ಯಾಕ್ಸ್ ಮೂಡ್ ಅನುಭವಿಸಿದರು.

ಶಿರಸಿ ತಾಲ್ಲೂಕಿನ ಕಾಗೇರಿ ಗ್ರಾಮದ ತಮ್ಮ ನಿವಾಸದಲ್ಲಿ ಇರುವ ವಿಶ್ವೇಶ್ವರ ಹೆಗಡೆ, ಬುಧವಾರ ಚುನಾವಣಾ ಸಂದರ್ಭದ ಒತ್ತಡದ ದಿನಚರಿಯಿಂದ ದೂರಾಗಿ ಮನೆಯಂಗಳದಲ್ಲಿನ ಗಿಳಿ ಸೇರಿದಂತೆ ವಿವಿಧ ಪಕ್ಷಿಗಳಿಗೆ ಆಹಾರ ವಿತರಿಸಿದರು. ನಂತರ ಸುತ್ತಮುತ್ತಲ ಹೂವಿನ ಗಿಡಗಳಿಗೆ ನೀರೆರೆದರು. ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರಿಗೆ ಹಸಿ ಮೇವು ಹಾಕಿ ಖುಷಿಪಟ್ಟರು. ನಂತರ ಅಡಿಕೆ ತೋಟಕ್ಕೆ ತೆರಳಿ ತೋಟ ನಿರ್ವಹಣೆ ವೀಕ್ಷಿಸಿದರು.

ಪ್ರಜಾಪ್ರಭುತ್ವದ ಹಬ್ಬದಲ್ಲಿ ತಿಂಗಳುಗಳಿಂದ ಕ್ಷೇತ್ರದ ತುಂಬಾ ಓಡಾಡಿ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದರು. ಕಾರ್ಯಕರ್ತರು, ಮತದಾರರ ಭೇಟಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಸೇರಿ ಹಲವು ಸಭೆ ಸಮಾರಂಭಗಳನ್ನು ಆಯೋಜಿಸಿದ್ದ ಕಾರಣ ಮನೆ ಕಡೆ ಮುಖ ಮಾಡಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಮತದಾರರ ನಿರ್ಧಾರ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಈ ಬಿಡುವಿನ ಸಮಯದಲ್ಲಿ ಮನೆಯಲ್ಲಿ ಓಡಾಟ ಮಾಡಿ, ಆಗುಹೋಗು ನೋಡುತ್ತಾ, ವಿಶ್ರಾಂತಿ ಪಡೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.