ADVERTISEMENT

ನಕಲಿ ನಂಬರ್: ಗ್ರಾ ಪಂ ಅಧ್ಯಕ್ಷೆಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 14:33 IST
Last Updated 6 ಸೆಪ್ಟೆಂಬರ್ 2024, 14:33 IST

ಯಲ್ಲಾಪುರ: ಬೆಂಗಳೂರಿನ ಯುವಕನೊಬ್ಬ ತನ್ನ ಬೈಕಿಗೆ ಡುಪ್ಲಿಕೇಟ್ ನಂಬರ್ ಪ್ಲೇಟ್ ಅಳವಡಿಸಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು, ನೋಂದಣಿ ಸಂಖ್ಯೆಯ ಆಧಾರದ ಮೇಲೆ ಬೆಂಗಳೂರು ಪೊಲೀಸರು ತಾಲ್ಲೂಕಿನ ಆನಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಭಟ್ಟ ಕೆಳಗಿನಪಾಲ ಅವರಿಗೆ ದಂಡ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ.

ಮೀನಾಕ್ಷಿ ಭಟ್ಟ ಅವರು ಅವರು KA31W654 ಸಂಖ್ಯೆಯ ಸ್ಕೂಟಿಯನ್ನು ಹೊಂದಿದ್ದಾರೆ. ಬೆಂಗಳೂರಿನ ಯುವಕನೊಬ್ಬ ಇದೇ ಸಂಖ್ಯೆಯ ನಂಬರ್ ಪ್ಲೇಟ್‌ ಅನ್ನು ತನ್ನ ಬೈಕಿಗೆ ಅಳವಡಿಸಿಕೊಂಡು ಸಂಚರಿಸಿದ್ದಾನೆ. ಸಾಲದ್ದಕ್ಕೆ 3ಕ್ಕೂ ಅಧಿಕ ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾನೆ. ಮೀನಾಕ್ಷಿ ಭಟ್ಟ ಅವರ ಹೆಸರಿನಲ್ಲಿರುವ ವಾಹನ ಸಂಖ್ಯೆಯನ್ನು ನಕಲು ಮಾಡಿ ಬೇರೆ ಬೈಕಿಗೆ ಅಳವಡಿಸಿರುವುದನ್ನು ತಿಳಿಯದ ಬೆಂಗಳೂರು ಪೊಲೀಸರು ನೋಂದಣಿ ಸಂಖ್ಯೆಯ ಆಧಾರದಲ್ಲಿ ಮೀನಾಕ್ಷಿ ಭಟ್ಟ ಅವರಿಗೆ ₹ 1500 ದಂಡ ಪಾವತಿಸುವಂತೆ ನೋಟಿಸ್ ಹೊರಡಿಸಿದ್ದಾರೆ.

ಮೀನಾಕ್ಷಿ ಭಟ್ಟ ಆನಗೋಡು-ಬಿಸಗೋಡು ಹೊರತುಪಡಿಸಿ ಬೇರೆಡೆ ತಮ್ಮ ಸ್ಕೂಟಿಯಲ್ಲಿ ಸಂಚರಿಸಿಲ್ಲ.
ಹೀಗಿರುವಾಗ ಬೆಂಗಳೂರಿನಿಂದ ನೋಟಿಸ್ ಬಂದದ್ದು ಅವರ ತಲೆಬಿಸಿಗೆ ಕಾರಣವಾಯಿತು. ತಮ್ಮ ಪ್ರಭಾವ ಬಳಸಿ ಬೆಂಗಳೂರಿನಲ್ಲಿ ತಮ್ಮದೇ ವಾಹನ ಸಂಖ್ಯೆ ನಕಲು ಆಗಿರುವುದನ್ನು ಮೀನಾಕ್ಷಿ ಭಟ್ಟ ಕಂಡು ಹಿಡಿದರು. ತಂತ್ರಜ್ಞಾನದ ಸಹಾಯದಿಂದ ವಾಹನ ನಿಯಮ ಉಲ್ಲಂಘಿಸಿದ ಫೊಟೋಗಳನ್ನು ಸಂಗ್ರಹಿಸಿದರು. ಇದರೊಂದಿಗೆ ತಮ್ಮ ಸ್ವಂತ ವಾಹನದ ಫೋಟೋವನ್ನು ಲಗತ್ತಿಸಿ ಆ ದುಷ್ಕರ್ಮಿಯ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಬೆಂಗಳೂರು ಪೊಲೀಸರಿಗೆ ಪತ್ರ ಬರೆದರು.

ADVERTISEMENT

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಈ ಪತ್ರ ರವಾನಿಸಿರುವ ಅವರು `ನನಗೂ ಆ ಬೈಕಿಗೂ ಯಾವುದೇ ಸಂಬಂಧವಿಲ್ಲ. ನನ್ನದಲ್ಲದ ತಪ್ಪಿಗೆ ದಂಡ ಪಾವತಿಸುವುದಿಲ್ಲ' ಎಂದು ಲಿಖಿತವಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.