ADVERTISEMENT

ಕುಮಟಾ: ಕಾಲೇಜು ಸ್ಥಗಿತಗೊಳ್ಳುವ ಆತಂಕ

ಬಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇವಲ 14 ವಿದ್ಯಾರ್ಥಿಗಳು

ಎಂ.ಜಿ.ನಾಯ್ಕ
Published 15 ಡಿಸೆಂಬರ್ 2023, 5:56 IST
Last Updated 15 ಡಿಸೆಂಬರ್ 2023, 5:56 IST
ಕುಮಟಾ ತಾಲ್ಲೂಕಿನ ಬಾಡ ಸರ್ಕಾರಿ ಪದವಿ ಕಾಲೇಜು ಕಟ್ಟಡ
ಕುಮಟಾ ತಾಲ್ಲೂಕಿನ ಬಾಡ ಸರ್ಕಾರಿ ಪದವಿ ಕಾಲೇಜು ಕಟ್ಟಡ    

ಕುಮಟಾ: ತಾಲ್ಲೂಕಿನ ಬಾಡ ಗ್ರಾಮದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಕಾಲೇಜು ಸ್ಥಗಿತಗೊಳ್ಳಬಹುದು ಎಂಬ ಚಿಂತೆ ಸ್ಥಳೀಯರನ್ನು ಕಾಡತೊಡಗಿದೆ.

200ರಲ್ಲಿ ಕುಮಟಾ ಪಟ್ಟಣದ ಮೂರೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜು ಹಾಗೂ ಬಾಡ ಸರ್ಕಾರಿ ಪದವಿ ಕಾಲೇಜು ಒಟ್ಟಿಗೆ ಆರಂಭವಾಗಿದ್ದವು. ಆರಂಭದ ಕೆಲ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದರೂ ಈಚಿನ ಕೆಲ ವರ್ಷದಿಂದ ಸಂಖ್ಯೆ ಕ್ಷೀಣಿಸುತ್ತಿದೆ. ಕಲೆ ಹಾಗೂ ವಾಣಿಜ್ಯ ತರಗತಿಗಳಿರುವ ಬಾಡ ಸರ್ಕಾರಿ ಪದವಿ ಕಾಲೇಜಿನ ಈ ವರ್ಷದ ಒಟ್ಟೂ ವಿದ್ಯಾರ್ಥಿಗಳ ಸಂಖ್ಯೆ ಕೇವಲ 14 ಇದೆ.

‘ಪದವಿ ಕಾಲೇಜಿನ ಒಂದು ತರಗತಿಯಲ್ಲಿ ಕನಿಷ್ಠ 15 ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಒಟ್ಟೂ ವಿದ್ಯಾರ್ಥಿಗಳ ಸಂಖ್ಯೆ ನೂರಕ್ಕಿಂತ ಹೆಚ್ಚು ಇರಬೇಕು ಎಂಬ ನಿಯಮವಿದೆ. ಕಾಲೇಜಿನಲ್ಲಿ ತರಗತಿ ನಡೆಸಲು ಕೊಠಡಿಗಳ ಕೊರತೆಯೂ ಇದೆ. ಪಕ್ಕದ ಖಾಸಗಿ ಹೊಟೇಲಿನ ಮಹಡಿಯ ಮೇಲಿನ ಬಾಡಿಗೆ ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿದೆ’ ಎಂದು ಕಾಲೇಜಿನ ಪ್ರಾಚಾರ್ಯ ರೆಹಮಾನ್ ಸಾಬ್ ಹೇಳಿದರು.

ADVERTISEMENT

‘ಪದವಿ ಕಾಲೇಜು ಕಟ್ಟದಲ್ಲಿಯೇ ಸರ್ಕಾರಿ ಪದವಿ ಪೂರ್ವ ಕಾಲೇಜು ಕೂಡ ಇದೆ. ಪಿಯುಸಿ ಪಾಸಾದ ನಂತರ ವಿದ್ಯಾರ್ಥಿ ಇಲ್ಲೇ ಪದವಿ ಮುಂದುವರಿಸಲು ಮನವಿ ಮಾಡುತ್ತೇವೆ. ಆದರೆ ಅವರೆಲ್ಲ ಬೇರೆ ಬೇರೆ ತರಬೇತಿಗಳಿಗೆ ಸೇರಿಕೊಳುತ್ತಿದ್ದಾರೆ. ಸುತ್ತಲೂ ಬೇರೆ ಪದವಿ ಪೂರ್ವ ಕಾಲೇಜು ಇಲ್ಲದಿರುವುದು ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಲು ಇನ್ನೊಂದು ಕಾರಣವಾಗಿದೆ’ ಎಂದು ಸಮಸ್ಯೆ ವಿವರಿಸಿದರು.

‘ಪದವಿ ತರಗತಿ ವಿದ್ಯಾರ್ಥಿಗಳೂ ಬೇರೆ ಕಾಲೇಜಿಗೆ ಹೋಗತೊಡಗಿದಾಗ ಅವರನ್ನು ಆಕರ್ಷಿಸಲು ಅವರ ಶುಲ್ಕ ಸಹ ಅಧ್ಯಾಪಕರೇ ಭರಿಸಿ ಕಾಲೇಜಿಗೆ ಪ್ರವೇಶಾತಿ ಮಾಡಿಸಿಕೊಂಡ ಉದಾಹರಣೆಗಳಿವೆ. ಉನ್ನತ ಶಿಕ್ಷಣ ಆಯುಕ್ತರಿಗೆ ಪತ್ರ ಬರೆದು ಮಾಹಿತಿ ಕೇಳಿದಾಗ ಅವರು ಈ ಶೈಕ್ಷಣಿಕ ವರ್ಷ ಮುಗಿಯಲಿ ಮುಂದೆ ನೋಡೋಣ ಎಂದಿದ್ದಾರೆ’ ಎಂದರು.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಕಾಲೇಜನ್ನು ಸರ್ಕಾರಿ ಕಾಲೇಜು ಇಲ್ಲದ ಹಿರೇಗುತ್ತಿ ಅಥವಾ ಗೋಕರ್ಣಕ್ಕೆ ಸ್ಥಳಾಂತರಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ
ದಿನಕರ ಶೆಟ್ಟಿ, ಶಾಸಕ
ಕಾಲೇಜು ಉಳಿಸಿಕೊಳ್ಳುವ ಪ್ರಯತ್ನವಾಗಲಿ
‘ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕೆ ಕಾಲೇಜನ್ನು ಬಾಡ ಗ್ರಾಮದಿಂದ ಸ್ಥಳಾಂತರಿಸುವ ಬದಲು ಇಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕಿದೆ. ಕಾಲೇಜಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನಗಳು ನಡೆಯಬೇಕು. ಕಾಲೇಜಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸವೂ ಆಗಬೇಕು. ಕಾಲೇಜು ಉಳಿಸಿಕೊಳ್ಳಲು ಗ್ರಾಮಸ್ಥರು ಒಗ್ಗಟ್ಟಾಗಿ ಹೋರಾಟ ನಡೆಸಬೇಕು’ ಎಂದು ಸ್ಥಳೀಯ ಪ್ರಮುಖರಾದ ವಕೀಲ ಆರ್.ಜಿ.ನಾಯ್ಕ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.