ADVERTISEMENT

ಮುಂಡಗೋಡ: ಮೂಲಸೌಲಭ್ಯ ವಂಚಿತ ‘ನ್ಯಾಸರ್ಗಿ’ ಗ್ರಾಮ

​ಶಾಂತೇಶ ಬೆನಕನಕೊಪ್ಪ
Published 23 ಅಕ್ಟೋಬರ್ 2024, 5:22 IST
Last Updated 23 ಅಕ್ಟೋಬರ್ 2024, 5:22 IST
<div class="paragraphs"><p>ಮುಂಡಗೋಡ ಪಟ್ಟಣದಿಂದ ಕೇವಲ ಎರಡು ಕಿ.ಮೀ. ಅಂತರದಲ್ಲಿರುವ ಬಾಚಣಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ಯಾಸರ್ಗಿ ಗ್ರಾಮದ ಚಿತ್ರಣ</p></div>

ಮುಂಡಗೋಡ ಪಟ್ಟಣದಿಂದ ಕೇವಲ ಎರಡು ಕಿ.ಮೀ. ಅಂತರದಲ್ಲಿರುವ ಬಾಚಣಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ಯಾಸರ್ಗಿ ಗ್ರಾಮದ ಚಿತ್ರಣ

   

ಮುಂಡಗೋಡ: ಪಟ್ಟಣದಿಂದ ಕೇವಲ ಎರಡು ಕಿ.ಮೀ. ಅಂತರದಲ್ಲಿದ್ದರೂ ಮೂಲ ಸೌಕರ್ಯಗಳನ್ನು ಪಡೆಯುವಲ್ಲಿ ಈ ಗ್ರಾಮವು ಇನ್ನೂ ಪರದಾಡುತ್ತಿದೆ. ಹಳೆಯ ಊರು, ಮಲಬಾರ ಕಾಲೊನಿ ಹಾಗೂ ಪ್ಲಾಟ್‌ ಹೀಗೆ ಮೂರು ಕ್ಷೇತ್ರಗಳಲ್ಲಿ ಊರು ವ್ಯಾಪಿಸಿದ್ದು, ಒಂದು ಕಡೆ ಇರುವ ಸೌಕರ್ಯ ಮತ್ತೊಂದು ಕಡೆ ಇಲ್ಲದಿರುವುದು ವಿಶೇಷ.

ತಾಲ್ಲೂಕಿನ ಬಾಚಣಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ಯಾಸರ್ಗಿ ಗ್ರಾಮದಲ್ಲಿ ಬೇಡಿಕೆಗಳ ಪಟ್ಟಿ ದೊಡ್ಡದಿದೆ. 300ಕ್ಕೂ ಹೆಚ್ಚು ಕುಟುಂಬಗಳನ್ನು ಹೊಂದಿರುವ ಈ ಗ್ರಾಮದಲ್ಲಿ, ಬೇಡಿಕೆಗಳನ್ನು ಈಡೇರಿಸುವ ಇಚ್ಚಾಶಕ್ತಿಯ ಕೊರತೆ ಕಾಡುತ್ತಿದೆ. ಕಾಂಕ್ರೀಟ್‌ ರಸ್ತೆಗಳು ಊರ ತುಂಬ ಕಾಣುತ್ತಿವೆ. ಅಷ್ಟೇ ಪ್ರಮಾಣದಲ್ಲಿ ಬಿರುಕು ಬಿಟ್ಟಿರುವುದು ಸಹ ಗೋಚರಿಸುತ್ತವೆ. ಒಂದೇ ಓಣಿಯ ಒಂದು ಬದಿಗೆ ಪಕ್ಕಾ ಗಟಾರ ಇದ್ದರೆ, ಮತ್ತೊಂದು ಬದಿಗೆ ಕಚ್ಚಾ ಗಟಾರಿನಲ್ಲಿಯೇ ನೀರು ಹರಿಯಬೇಕಾಗಿದೆ. ಕೆಲವೆಡೆ ರಸ್ತೆಗಳು ಕಿತ್ತು ಹೋಗಿವೆ. ಪಟ್ಟಣದ ಸೆರಗಿನಂಚಿನಲ್ಲಿಯೇ ಇದೆ ಎಂದು ಹೇಳಿಕೊಂಡರೂ, ಪಟ್ಟಣದಲ್ಲಿ ಕಾಣುವ ಬೆಳಕು ಇಲ್ಲಿ ಬೆಳಗುವುದಿಲ್ಲ.

ADVERTISEMENT

ಗ್ರಾಮದಲ್ಲಿ ಸರ್ಕಾರಿ ಐಟಿಐ ಕಾಲೇಜು ಇದೆ ಎಂಬ ಕಾರಣಕ್ಕೆ, ಸರ್ಕಾರಿ ಬಸ್ಸೊಂದು ದಿನಕ್ಕೆ ಎರಡು ಬಾರಿ ಗ್ರಾಮದಲ್ಲಿ ಸಂಚರಿಸುತ್ತದೆ. ಇಲ್ಲವಾದರೆ, ಆ ಬಸ್‌ ಸಹ ಇತ್ತ ಸುಳಿಯುತ್ತಿರಲಿಲ್ಲ. ಸರ್ಕಾರಿ ಬಸ್‌ ಬರುವುದಿಲ್ಲ ಎಂದ ಮೇಲೆ ನಿಲ್ದಾಣದ ಅಗತ್ಯವೂ ಸಹ ಇಲ್ಲ ಎಂಬಂತೆ ಈ ಊರಿನ ಯಾವ ಕಡೆಗೂ ಒಂದು ಬಸ್‌ ನಿಲ್ದಾಣ ಇಲ್ಲ.

ʼಮಲಬಾರ ಕಾಲೊನಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಪಕ್ಕಾ ಗಟಾರ ನಿರ್ಮಾಣ ಮಾಡಿಲ್ಲ. ಜೆಜೆಎಂ ಅಡಿ ಪ್ರತಿ ಮನೆಗೂ ನಲ್ಲಿ ಸಂಪರ್ಕ ಅಳವಡಿಸಿದ್ದಾರೆ. ಆದರೆ, ನೀರು ಬರುವುದು ಬಾಕಿಯಿದೆ. ಕುಡಿಯುವ ನೀರಿನ ಸಮಸ್ಯೆಯಿದೆ. ಜಲಾಶಯದ ನೀರನ್ನು ಕುಡಿಯಲು ಬಿಡುತ್ತಿರುವುದರಿಂದ, ನೀರನ್ನು ಕಾಯಿಸಿ ಕುಡಿಯಲೇಬೇಕು. ಶುದ್ಧ ಕುಡಿಯುವ ನೀರಿಗಾಗಿ ಜನರು, ಕ್ಯಾನ್‌ಗಳನ್ನು ತೆಗೆದುಕೊಂಡು ಪಟ್ಟಣಕ್ಕೆ ಹೋಗಿ ತುಂಬಿಕೊಂಡು ಬರುತ್ತಾರೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದರೂ, ಯಾರೂ ಸ್ಪಂದಿಸುತ್ತಿಲ್ಲʼ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುನೀಲ.

ʼನಿತ್ಯವೂ 2ರಿಂದ 3ಕಿಮೀ ನಡೆದುಕೊಂಡು ಪಟ್ಟಣದ ಹೈಸ್ಕೂಲ್‌ಗೆ ಹೋಗಿಬರುತ್ತವೆ. ಗ್ರಾಮಕ್ಕೆ ನಿತ್ಯ ಬರುವ ಬಸ್‌ ನಮ್ಮ ಸಮಯಕ್ಕೆ ಬರುವುದಿಲ್ಲ. ಮಳೆಗಾಲದಲ್ಲಿ ನಡೆದುಕೊಂಡು ಹೋಗಿಬರುವುದು ಕಷ್ಟವಾಗುತ್ತದೆ. ಕೆಲವೊಮ್ಮೆ ಪರಿಚಯಸ್ಥರ ಬೈಕ್‌ ಮೇಲೆ ಊರು ತಲುಪುತ್ತೇವೆ. ಆದರೆ, ನಿತ್ಯವೂ ಈ ವ್ಯವಸ್ಥೆ ಇರುತ್ತದೆ ಎನ್ನಲಾಗದು. ಗ್ರಾಮಕ್ಕೆ ಬಸ್ಸಿನ ಸೌಕರ್ಯ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆʼ ಎಂದು ವಿದ್ಯಾರ್ಥಿನಿ ಮಧು ಹೇಳಿದರು.

ʼನ್ಯಾಸರ್ಗಿ ಪ್ಲಾಟ್‌ ಹಾಗೂ ಮಲಬಾರ ಕಾಲೊನಿಯಲ್ಲಿ ಇ-ಖಾತಾದ್ದೇ ದೊಡ್ಡ ಸಮಸ್ಯೆಯಾಗಿದೆ. ಕಳೆದ ಐದಾರು ದಶಕಗಳಿಂದ ಇಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೂ ಇ-ಖಾತಾ ಸಿಗುತ್ತಿಲ್ಲ. ಅರಣ್ಯ ಭೂಮಿ ಎಂದು ದಾಖಲಾಗಿರುವುದರಿಂದ ಇಲ್ಲಿನ ನಿವಾಸಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಳೆಗಾಲದ ಸಮಯದಲ್ಲಿ ಪಟ್ಟಣದಲ್ಲಿ ವಿದ್ಯುತ್‌ ಪೂರೈಕೆ ಇರುವುದು ಕಣ್ಣಿಗೆ ಕಾಣುತ್ತದೆ. ಆದರೆ, ನಮ್ಮೂರಲ್ಲಿ ದಿನಗಟ್ಟಲೇ ಕರೆಂಟ್‌ ಕೈ ಕೊಟ್ಟಿರುತ್ತದೆ. ಪಟ್ಟಣದಿಂದ ಕೂಗಳತೆಯ ದೂರದಲ್ಲಿದ್ದರೂ ಈ ಗ್ರಾಮವು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿಲ್ಲʼ ಎಂದು ಯುವಮುಖಂಡ ಅರುಣ ಗೊಂದಳೆ ಹೇಳಿದರು.

ನ್ಯಾಸರ್ಗಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಬಗ್ಗೆ ಸಂಬಂಧಿಸಿದ ಇಲಾಖೆಗೆ ಪ್ರಸ್ತಾವ ಕಳಿಸಲಾಗಿದೆ. ಅನುದಾನದ ಲಭ್ಯತೆ ಮೇಲೆ ಗಟಾರ ನಿರ್ಮಾಣಗೊಳಿಸಲಾಗುವುದು
-ಗುರುಪ್ರಸನ್ನ, ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.