ಕಾರವಾರ: ‘ಇನ್ನು ಮುಂದೆ ವರ್ಷಕ್ಕೊಮ್ಮೆ ಪರೀಕ್ಷೆಯಲ್ಲ. ಪ್ರತಿ ದಿನವೂ ಪರೀಕ್ಷೆಯೇ. ರೋಗಿಯೇ ನಿಮ್ಮ ಪರೀಕ್ಷಕ. ಹಾಗಾಗಿ ಪರೀಕ್ಷೆಯಿಲ್ಲ ಎಂದು ಸಮಾಧಾನವಾಗಿ ಇರುವಂತಿಲ್ಲ. ರೋಗಿಯ ಆರೋಗ್ಯಕ್ಕಾಗಿ ವೃತ್ತಿಯನ್ನು ಮೀಸಲಿಡಿ’ ಎಂದು ನವದೆಹಲಿಯ ಎಂ.ಎ.ಆರ್.ಬಿ ಎನ್.ಎಂ.ಸಿ ಅಧ್ಯಕ್ಷ ಡಾ.ಬಿ.ಎನ್.ಗಂಗಾಧರ್ ಸಲಹೆ ನೀಡಿದರು.
ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬುಧವಾರ, ಎಂ.ಬಿ.ಬಿ.ಎಸ್ ಮೊದಲ ತಂಡದ 143 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇಂದಿನವರೆಗೆ ವಿದ್ಯಾರ್ಥಿಗಳಾಗಿದ್ದವರು, ಈ ಕ್ಷಣದಿಂದ ವೈದ್ಯರಾಗಿದ್ದೀರಿ. ಹೊಸ ಜವಾಬ್ದಾರಿ ನಿಮ್ಮ ಮೇಲಿದೆ. ಸಮಾಜ ಹೊಸ ಸಂಗತಿಗಳನ್ನು ಅಪೇಕ್ಷಿಸುತ್ತಿದೆ. ಐದು ವರ್ಷಗಳಲ್ಲಿ ಶಿಕ್ಷಕರು ಪಠ್ಯದೊಂದಿಗೇ ವೈದ್ಯಕೀಯ ಕೌಶಲವನ್ನು ಹೇಳಿಕೊಟ್ಟಿದ್ದಾರೆ. ಮೊದಲನೆಯದಾಗಿ ಅವರಿಗೆ ಋಣಿಯಾಗಿರಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯದ ಆಧಾರದಲ್ಲಿ ಅವರಿಗೆ ಹೆಸರು ಬರುತ್ತದೆ’ ಎಂದರು.
‘ರೋಗಿಗಳಿಗೆ ಅಕ್ಕರೆ ತೋರಿಸಿ. ಅವರಿದ್ದ ಕಾರಣ ವೈದ್ಯಕೀಯ ಶಿಕ್ಷಣ ಸಿಕ್ಕಿದೆ. ಈ ಶಿಕ್ಷಣದಲ್ಲಿ ರೋಗಿಯೇ ಪ್ರಮುಖನಾಗಿರುತ್ತಾನೆ. ಅವರ ಋಣವನ್ನು ತೀರಿಸುವ ಅವಕಾಶ ಎಂದು ಭಾವಿಸಿ ಕೆಲಸ ಮಾಡಿದರೆ ಸಾರ್ಥಕತೆ ಸಿಗುತ್ತದೆ. ನಾನೊಬ್ಬ ವೈದ್ಯ ಎಂಬುದಕ್ಕಿಂತ ಮೊದಲು ಹೃದಯವಂತ ಎಂಬ ಮನೋಭೂಮಿಕೆಯಿಂದ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ವಿಶಾಲ್ ರವಿ ಮಾತನಾಡಿ, ‘ಇದು ವೃತ್ತಿ ಜೀವನದ ಆರಂಭ. ಮುಂದೆ ಸಾಧಿಸಲು ಬಹಳವಿದೆ. ನಿಮ್ಮ ಆದ್ಯತೆಯನ್ನು ಕೇಂದ್ರೀಕರಿಸಿ ಮುಂದೆ ಹೋದಾಗ ಸಾಧನೆ ಸಾಧ್ಯ’ ಎಂದರು.
ಹುಬ್ಬಳ್ಳಿಯ ‘ಕಿಮ್ಸ್’ ಮಾಜಿ ನಿರ್ದೇಶಕ ಡಾ.ವಿ.ಎನ್.ಬಿರಾದಾರ್ ಮಾತನಾಡಿ, ‘ಬಡ ರೋಗಿಗಳಿಗೆ ಸೇವೆ ನೀಡುವುದನ್ನು ಮರೆಯಬೇಡಿ. ಅವರ ಹಣಕಾಸು ಸ್ಥಿತಿಗತಿ ಗಮನದಲ್ಲಿರಬೇಕು. ಇಂಥ ಸಂಸ್ಥೆಗಳು ಕಾರ್ಯ ನಿರ್ವಹಿಸಲು ಅವರು ತೆರಿಗೆ ಪಾವತಿಸಿದ್ದೇ ಕಾರಣ. ಬಡ ರೋಗಿಗಳ ಸೇವೆಗೇ ವಾರದಲ್ಲಿ ಒಂದು ತಾಸು ಮೀಸಲಿಡಿ’ ಎಂದು ಸಲಹೆ ನೀಡಿದರು.
‘ಕಾಲೇಜಿನ ರಾಯಭಾರಿಗಳು’:‘ಮೊದಲ ತಂಡದ ವೈದ್ಯರಿಗೆ, ಮನೆಯ ಮೊದಲ ಮಗನಿಗೆ ಇರುವಂಥ ಜವಾಬ್ದಾರಿಯಿದೆ. ನೀವೀಗ ಕಾರವಾರ ವೈದ್ಯಕೀಯ ಕಾಲೇಜಿನ ರಾಯಭಾರಿಗಳು. ನಿಮ್ಮ ವರ್ತನೆ, ಕಾರ್ಯ ಶೈಲಿಯ ಮೂಲಕ ಈ ಕಾಲೇಜಿನ ಬ್ರ್ಯಾಂಡ್ ಸೃಷ್ಟಿಯಾಗುತ್ತದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
‘ಗ್ರಾಮೀಣ ಜನರ ಸೇವೆಗೆ ಮುಂದಾಗಿ. ಸ್ವಲ್ಪ ಸಮಯ ಜೀವನಾನುಭವ ಪಡೆದು ಈ ಕಾಲೇಜಿನ ಬ್ರ್ಯಾಂಡ್ ಧ್ವಜವನ್ನು ಎತ್ತಿ ಹಿಡಿಯಿರಿ’ ಎಂದು ಆಹ್ವಾನಿಸಿದರು.
‘ಕ್ರಿಮ್ಸ್’ ನಿರ್ದೇಶಕ ಡಾ.ರಾಮಲಿಂಗಪ್ಪ, ಐ.ಎನ್.ಎಚ್.ಎಸ್ ಪತಂಜಲಿ ಆಸ್ಪತ್ರೆಯ ಕಮಾಂಡಿಂಗ್ ಆಫೀಸರ್ ಸರ್ಜನ್ ಕ್ಯಾಪ್ಟನ್ ಜಸ್ಕಿರಣ್ ಸಿಂಗ್ ರಾಂಧವಾ ಮಾತನಾಡಿದರು.
ಪದವಿ ಪಡೆದ ವಿದ್ಯಾರ್ಥಿಗಳಿಗೆ ವೈದ್ಯಕೀಯ ವೃತ್ತಿಯ ಪ್ರಮಾಣ ವಚನ ಬೋಧಿಸಲಾಯಿತು. ಐದು ವರ್ಷಗಳ ಪದವಿ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ಸ್ವಾಗತಿಸಿದರು. ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್, ಬೋಧಕ ಸಿಬ್ಬಂದಿ, ತಜ್ಞ ವೈದ್ಯರು ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.