ಶಿರಸಿ: ಕೇಂದ್ರ ಸರ್ಕಾರ ಹಾಗೂ ನಬಾರ್ಡ್‌ನಿಂದ ಬರಬೇಕಾದ ಶೇ 50ರಷ್ಟು ಹಣದಲ್ಲಿ ಶೇ 11ರಷ್ಟು ಮಾತ್ರ ಬಂದಿದೆ. ಇದರಿಂದ ಕೃಷಿಕರಿಗೆ ಸಾಲ ನೀಡಲು ತೊಂದರೆ ಆಗುತ್ತದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ನಗರದ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಶನಿವಾರ ಆಯೋಜಿಸಿದ್ದ ಉತ್ತಮ ಸಹಕಾರಿ ಸಾಧಕರಿಗೆ, ಉತ್ತಮ ಸಹಕಾರಿ ಸಂಘಗಳಿಗೆ ಮತ್ತು ಶಾಖೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಾಲ ನೀಡಲು ಸಹಕಾರ ಹಾಗೂ ಸೌಹಾರ್ದ ಸಹಕಾರಿ ನಡುವಿನ ಪೈಪೋಟಿ ಒಳ್ಳೆಯದಲ್ಲ. ಪ್ರಾಥಮಿಕ ಪತ್ತಿನ ಸಂಘಗಳು ಅಧಿಕ ಬಡ್ಡಿಗೆ ಬೇರೆ ಕಡೆ ಹೂಡಿಕೆ ಇಡದೇ ಕೆಡಿಸಿಸಿ ಬ್ಯಾಂಕ್‌ನಲ್ಲೆ ಹೂಡಿಕೆ ಮಾಡಬೇಕು. ಸಹಕಾರ ಸಂಘ ಗಟ್ಟಿಯಾಗಿದ್ದರೆ ರೈತರಿಗೆ ಆಪತ್ತು ಬಾರದಂತೆ ತಡೆಯಬಹುದು ಎಂದರು.
ಸಹಕಾರ ಕ್ಷೇತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಸಾಕಷ್ಟು ಸಹಕಾರಗಳ ಪರಿಶ್ರಮದಿಂದ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಇಂದು ಇಷ್ಟು ಬಲಿಷ್ಠವಾಗಿದೆ. ಸಹಕಾರ ಕ್ಷೇತ್ರ ಹುಟ್ಟಿದ್ದು ಗದಗದಲ್ಲಾದರೂ ಬೆಳೆದಿದ್ದು ಮಾತ್ರ ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ. ₹1 ಸಾವಿರ ಕೋಟಿ ಬೆಳೆಸಾಲ, ₹5 ಸಾವಿರ ಕೋಟಿ ಮಾಧ್ಯಮಿಕ ಸಾಲವನ್ನು ಕೆಡಿಸಿಸಿ ಬ್ಯಾಂಕ್ ನೀಡಿದೆ. ಸಹಕಾರ ಕ್ಷೇತ್ರದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ನಬಾರ್ಡ್ ಯೋಚನೆ ಮಾಡಬೇಕು. ಇಲ್ಲವಾದಲ್ಲಿ ರೈತರಿಗೆ ತೊಂದರೆಯಾಗುತ್ತದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಜಿ.ಎಸ್.ಹೆಗಡೆ ಅಜ್ಜಿಬಳ ಪ್ರಶಸ್ತಿಯನ್ನು ಸಹಕಾರ ಭಾಸ್ಕರ್ ನಾರ್ವೆಕರ್ ಹಾಗೂ ಸಹಕಾರ ನೌಕರ ಸುಬ್ರಾಯ ಹೆಗಡೆ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ವೇಳೆ ಉತ್ತಮ ಸಹಕಾರ ಸಂಘಕ್ಕೆ ನೀಡುವ ಸುಂದರರಾವ್ ಪಂಡಿತ್ ಪ್ರಶಸ್ತಿಯನ್ನು ತ್ಯಾಗಲಿ ಸೇವಾ ಸಹಕಾರಿ ಸಂಘಕ್ಕೆ ನೀಡಿ ಗೌರವಿಸಲಾಯಿತು.
12 ಸಹಕಾರಿ ಸಂಘಗಳಿಗೆ ತಾಲ್ಲೂಕುಮಟ್ಟದ ಉತ್ತಮ ಪ್ರಾಥಮಿಕ ಸಹಕಾರ ಸಂಘ ಪ್ರಶಸ್ತಿ, ಶೇ 100ರಷ್ಟು ಸಾಲ ವಸೂಲಾತಿ ಮಾಡಿದ ಸಂಘಗಳ ಕಾರ್ಯದರ್ಶಿಗಳಿಗೆ ಸನ್ಮಾನ, ಉತ್ತಮ ಕೃಷಿಯೇತರ ಸಂಘಗಳ ಪ್ರಶಸ್ತಿ, ಉತ್ತಮ ಕೃಷಿ ಪತ್ತಿನ ಸಹಕಾರ ಸಂಘ ಪ್ರಶಸ್ತಿ, ಗ್ರಾಮಾಂತರ ಮಟ್ಟದ ಉತ್ತಮ ಶಾಖೆ ಪ್ರಶಸ್ತಿಯನ್ನು ವಿವಿಧ ಸಹಕಾರಿ ಸಂಘಗಳಿಗೆ ನೀಡಿ ಗೌರವಿಸಲಾಯಿತು.
ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ, ರಾಘವೇಂದ್ರ ಶಾಸ್ತ್ರೀ, ಆರ್.ಎಂ.ಹೆಗಡೆ, ಎಲ್.ಟಿ.ಪಾಟೀಲ್, ರಾಮಕೃಷ್ಣ ಹೆಗಡೆ ಕಡವೆ, ಎಸ್.ಎಲ್. ಘೋಟ್ನೇಕರ್, ಕೃಷ್ಣ ದೇಸಾಯಿ, ಪ್ರಕಾಶ ಗುನಗಿ, ವೀರಣ್ಣ ನಾಯಕ, ಗಜಾನನ ಪೈ, ವಿಶ್ವನಾಥ ಭಟ್ , ಪ್ರಮೋದ ಧವಳೆ, ವೃತ್ತಿಪರ ನಿರ್ದೇಶಕ ತಿಮ್ಮಯ್ಯ ಹೆಗಡೆ ಸೇರಿ ಹಲವರು ಇದ್ದರು. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ ಸ್ವಾಗತಿಸಿದರು. ಅನಿತಾ ಭಟ್ ನಿರೂಪಿಸಿದರು.
ಸಹಕಾರ, ಸೌಹಾರ್ದ ಸಹಕಾರಿ ನಡುವಿನ ಪೈಪೋಟಿ ಒಳ್ಳೆಯದಲ್ಲ ಸಹಕಾರ ಕ್ಷೇತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರ ಸಹಕಾರ ಸಂಘದ ಸಾಧಕರಿಗೆ ಸನ್ಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.