ADVERTISEMENT

ಅಭಯಾರಣ್ಯಕ್ಕೆ ಸೇರ್ಪಡೆ: ಹೆಚ್ಚಿದ ವಿರೋಧ

ಪರಿಸರ ಕಾರ್ಯಕರ್ತರಿಂದ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 13:22 IST
Last Updated 11 ಜೂನ್ 2019, 13:22 IST
ಶಿರಸಿಯಲ್ಲಿ ಪರಿಸರ ಕಾರ್ಯಕರ್ತರು ಸಿಸಿಎಫ್ ಬಿ.ವಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು
ಶಿರಸಿಯಲ್ಲಿ ಪರಿಸರ ಕಾರ್ಯಕರ್ತರು ಸಿಸಿಎಫ್ ಬಿ.ವಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು   

ಶಿರಸಿ: ಶರಾವತಿ ಅಭಯಾರಣ್ಯಕ್ಕೆ ಕೆನರಾ ವೃತ್ತದ ಅಘನಾಶಿನಿ ಕಣಿವೆಯ ಅರಣ್ಯ ಭೂಮಿಯನ್ನು ಸೇರ್ಪಡೆ ಮಾಡದೆ, ಅಘನಾಶಿನಿ ಸಿಂಗಳೀಕ ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದೇ ಮುಂದುವರಿಸಬೇಕು ಎಂದು ಒತ್ತಾಯಿಸಿ, ವೃಕ್ಷಲಕ್ಷ ಆಂದೋಲನ ಸಂಘಟನೆ ಅಡಿಯಲ್ಲಿ ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು, ಪರಿಸರವಾದಿಗಳು, ತಜ್ಞರು ಮಂಗಳವಾರ ಇಲ್ಲಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜನವರಿಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಶರಾವತಿ ಅಭಯಾರಣ್ಯ ವಿಸ್ತರಣೆ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ. 43ಸಾವಿರ ಹೆಕ್ಟೇರ್ ಹೆಚ್ಚುವರಿ ಪ್ರದೇಶ ಸೇರ್ಪಡೆಗೆ ಅನುಮತಿ ನೀಡಲಾಗಿದೆ. ಇದರಲ್ಲಿ ಅಘನಾಶಿನಿ ಕಣಿವೆಯ 30ಸಾವಿರ ಹೆಕ್ಟೇರ್ ಪ್ರದೇಶ ಸೇರಿದೆ ಎಂಬ ಸಂಗತಿ ತಿಳಿದು ಆಶ್ಚರ್ಯವಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿರುವ ವಿಷಯ ತಿಳಿದಿದೆ. ಯಾವ ಕಾರಣಕ್ಕಾಗಿ ಈ ಸೇರ್ಪಡೆ ಮಾಡಲಾಗುತ್ತಿದೆ. 2012ರಲ್ಲೇ ಅಘನಾಶಿನಿ ಸಿಂಗಳೀಕ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗಿದೆ. ಹಲವು ಗೊಂದಲ, ಗದ್ದಲ, ಅರಣ್ಯ ನಾಶಕ್ಕೆ ಒಳಗಾದ ಶರಾವತಿ ಅಭಯಾರಣ್ಯಕ್ಕೆ ಶಾಂತ, ಸುರಕ್ಷಿತವಾದ ಅಘನಾಶಿನಿ ಕಣಿವೆ ಸೇರ್ಪಡೆ ಯಾಕೆ ಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಪ್ರಶ್ನಿಸಿದರು.

ಶಾಸಕರು, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ, ಪರಿಸರ ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸದೇ, ಏಕಪಕ್ಷೀಯವಾಗಿ ಈ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಪರಿಸರ ಜಾಗೃತಿ, ಹೋರಾಟಕ್ಕೆ ಹೆಸರಾದ ಜಿಲ್ಲೆ. ಅಘನಾಶಿನಿ, ಬೇಡ್ತಿ ಕಣಿವೆಗಳನ್ನು ಜನರೇ ಮುಂದಾಗಿ ರಕ್ಷಿಸಿದ್ದಾರೆ. ಹೀಗಿರುವಾಗ ಇಲ್ಲಿನ ಜನತೆಗೆ ಏನೂ ಹೇಳದೇ, ಶರಾವತಿ ಅಭಯಾರಣ್ಯಕ್ಕೆ ಕೆನರಾ ವೃತ್ತದ ಈ ಕಣಿವೆ ಸೇರ್ಪಡೆ ತಪ್ಪು ನಿರ್ಧಾರ. ಅರಣ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ್, ‍ಪ್ರಮುಖರಾದ ನಾರಾಯಣ ಗಡೀಕೈ, ಗಣೇಶ ಹೇರೂರು, ಗೋಪಾಲಕೃಷ್ಣ ತಂಗಾರಮನೆ, ಉಮಾಪತಿ ಕೆ.ವಿ, ಎನ್.ಆರ್.ಹೆಗಡೆ, ವಿಶ್ವನಾಥ ಬುಗಡಿಮನೆ, ಈಶಣ್ಣ ನೀರ್ನಳ್ಳಿ, ಶ್ರೀಧರ ಭಟ್ಟ, ಆರ್.ಪಿ.ಹೆಗಡೆ, ಜಿ.ಆರ್.ಹೆಗಡೆ, ಚಂದ್ರಶೇಖರ ಭಟ್ಟ, ವಿ.ಆರ್.ಭಟ್ಟ, ಗಣಪತಿ ಬಿಸಲಕೊಪ್ಪ ಇದ್ದರು. ಡಿಸಿಎಫ್‌ಗಳಾದ ಎಸ್.ಜಿ.ಹೆಗಡೆ, ಗಣಪತಿ, ಆರ್.ಜಿ.ಭಟ್ಟ ಉಪಸ್ಥಿತರಿದ್ದರು.

**

ಸಂರಕ್ಷಿತ ಪ್ರದೇಶದ ಹೆಸರಿನಲ್ಲಿ ಸಿಂಗಳೀಕಗಳು ರಕ್ಷಣೆ ಪಡೆದಿವೆ. ಇದು ಮೂಲತಃ ಸೌಮ್ಯಪ್ರಾಣಿ. ಅಭಯಾರಣ್ಯದ ಹೆಸರಿನಲ್ಲಿ ಅತಿ ಕಟ್ಟುಪಾಡು ಮಾಡಿ, ಜನಸಂಪರ್ಕವೇ ಇಲ್ಲದಂತೆ ಆದರೆ, ಅವು ವಿನಾಶದ ಅಂಚಿಗೆ ತಲುಪುವ ಅಪಾಯವಿದೆ.

– ಶ್ರೀಧರ ಭಟ್ಟ, ಅರಣ್ಯ ಕಾಲೇಜಿನ ಪ್ರಾಧ್ಯಾಪಕ

**

ಜನರನ್ನು ಕತ್ತಲಿನಲ್ಲಿಟ್ಟು ಸರ್ಕಾರ ಮಾಡಿರುವ ಈ ನಿರ್ಧಾರ ತಪ್ಪು. ಜನಸ್ನೇಹಿಯಾಗಿರುವ ಸಂರಕ್ಷಿತ ಪ್ರದೇಶ ಬಿಟ್ಟು, ಅಭಯಾರಣ್ಯಕ್ಕೆ ಸೇರ್ಪಡೆಯಾದರೆ, ಇರುವುದನ್ನೂ ಕಳೆದುಕೊಳ್ಳುವ ಸಂದರ್ಭ ಬರಬಹುದು.

– ಡಾ. ಕೇಶವ ಕೊರ್ಸೆ, ಪರಿಸರ ತಜ್ಞ

**

ಸಿಂಗಳೀಕ ಸಂರಕ್ಷಿತ ಪ್ರದೇಶದಲ್ಲಿ ಈಗಾಗಲೇ ಜನಜಾಗೃತಿ ನಡೆದಿದೆ. ಅಭಯಾರಣ್ಯಕ್ಕೆ ಸೇರಿಸಿ, ಸುತ್ತಲಿನ ಜನರಲ್ಲಿ ಹೊಸದಾಗಿ ಜಾಗೃತಿ ಮೂಡಿಸುವ ಅಗತ್ಯವಿಲ್ಲ.

– ಪ್ರಭಾಕರ ಭಟ್ಟ, ವಿಜ್ಞಾನಿ

**

ಕೆನರಾ ಮತ್ತು ಶಿವಮೊಗ್ಗದ ಆಡಳಿತಾತ್ಮಕ ವ್ಯವಸ್ಥೆ ಬೇರೆಯೇ ಇದೆ. ಸಂರಕ್ಷಿತ ಪ್ರದೇಶ ಸಂರಕ್ಷಣೆ ಆಗಿಲ್ಲವೆಂದಾದರೆ ಬೇರೆಡೆ ಸೇರಿಸಬಹುದಿತ್ತು. ಆದರೆ, ಇಲ್ಲಿ ಜನರ ಸಹಭಾಗಿತ್ವದಲ್ಲಿ ಸಂರಕ್ಷಿತ ಪ್ರದೇಶ ಉತ್ತಮವಾಗಿ ಸಂರಕ್ಷಣೆಯಾಗುತ್ತಿರುವಾಗ ಬೇರೆಡೆ ಸೇರ್ಪಡೆ ಯಾಕೆ ?

– ಬಾಲಚಂದ್ರ ಸಾಯಿಮನೆ, ವನ್ಯಜೀವಿ ತಜ್ಞ

**

ಸರ್ಕಾರದ ನಿಲುವು, ಅರ್ಥವಿಲ್ಲದ ಹೆಜ್ಜೆಯಾಗಿದೆ. ಈ ನಿಲುವನ್ನು ಸರ್ಕಾರ ಕೈಬಿಡಬೇಕು

– ಎಂ.ಆರ್.ಹೆಗಡೆ ಹೊಲನಗದ್ದೆ, ಪರಿಸರ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.