ADVERTISEMENT

ಶಿರಸಿ: ₹122.32 ಕೋಟಿ ವೆಚ್ಚದ ಬಜೆಟ್ ಮಂಡನೆ

ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 16:31 IST
Last Updated 30 ಮಾರ್ಚ್ 2022, 16:31 IST
ಶಿರಸಿ ನಗರಸಭೆಯ 2022–23ನೇ ಸಾಲಿನ ವಾರ್ಷಿಕ ಆಯವ್ಯಯವನ್ನು ಮಂಡಿಸುವ ಮುನ್ನ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಪ್ರತಿಯನ್ನು ಪ್ರದರ್ಶಿಸಿದರು. ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ಪೌರಾಯುಕ್ತ ಕೇಶವ ಚೌಗುಲೆ ಇದ್ದರು
ಶಿರಸಿ ನಗರಸಭೆಯ 2022–23ನೇ ಸಾಲಿನ ವಾರ್ಷಿಕ ಆಯವ್ಯಯವನ್ನು ಮಂಡಿಸುವ ಮುನ್ನ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಪ್ರತಿಯನ್ನು ಪ್ರದರ್ಶಿಸಿದರು. ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ಪೌರಾಯುಕ್ತ ಕೇಶವ ಚೌಗುಲೆ ಇದ್ದರು   

ಶಿರಸಿ: ನಗರಸಭೆಯ 2022- 23ನೇ ಸಾಲಿಗೆ ₹ 81.86 ಲಕ್ಷ ಮೊತ್ತದ ಉಳಿತಾಯ ಬಜೆಟ್‍ನ್ನು ಅಧ್ಯಕ್ಷ ಗಣಪತಿ ನಾಯ್ಕ ಬುಧವಾರ ಮಂಡಿಸಿದರು.

‘ನಗರಸಭೆಗೆ ರಾಜಸ್ವ ಸ್ವೀಕೃತಿಯಿಂದ ₹21.77 ಕೋಟಿ, ಬಂಡವಾಳ ಸ್ವೀಕೃತಿಯಿಂದ ₹ 100.87 ಕೋಟಿ, ಇತರ ಮೂಲಗಳಿಂದ ₹48.50 ಲಕ್ಷ ಸೇರಿದಂತೆ ಒಟ್ಟು ₹123.13 ಕೋಟಿ ಆದಾಯ ಸಂಗ್ರಹಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ನೀರು ಸರಬರಾಜು ವ್ಯವಸ್ಥೆ ಉನ್ನತೀಕರಣಕ್ಕೆ ₹48 ಕೋಟಿ, ಚರಂಡಿ ನಿರ್ಮಾಣಕ್ಕೆ ₹6.75 ಕೋಟಿ, ನಗರಸಭೆ ಆಡಳಿತ ಕಚೇರಿ ಹೊಸ ಕಟ್ಟಡಕ್ಕೆ ₹2 ಕೋಟಿ, ಲಿಫ್ಟ್ ಅಳವಡಿಕೆಗೆ ₹75 ಲಕ್ಷ, ಹಸಿರು ಶಿರಸಿ ಯೋಜನೆಗೆ ₹25 ಲಕ್ಷ ಸೇರಿದಂತೆ ಆಡಳಿತ ನಿರ್ವಹಣೆ, ವಿವಿಧ ಯೋಜನೆಗೆ ₹122.32 ಕೋಟಿ ಮೀಸಲಿಟ್ಟುಕೊಳ್ಳಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಕಳೆದ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದ ಯೋಜನೆಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಕಾರ್ಯಗತಗೊಂಡಿಲ್ಲ. ಆದಾಯ ಸಂಗ್ರಹವೂನಿರೀಕ್ಷಿತ ಪ್ರಮಾಣದಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಲ್ಲ’ ಎಂದು ಸದಸ್ಯ ಶ್ರೀಕಾಂತ ತಾರಿಬಾಗಿಲ ಆಕ್ಷೇಪಿಸಿದರು.

‘ಹೊಸ ಕಟ್ಟಡಕ್ಕೆ ಅನುದಾನ ಮೀಸಲಿಡಲಾಗಿದೆ. ಈಗಿರುವ ಕಟ್ಟಡಕ್ಕೆ ಲಿಫ್ಟ್ ಸೌಲಭ್ಯಕ್ಕೂ ಅನುದಾನ ತೋರಿಸಲಾಗಿದೆ. ಇಂತಹ ದುಂದುವೆಚ್ಚದ ಕೆಲಸ ಆಗಬಾರದು’ ಎಂದು ಸದಸ್ಯ ಪ್ರದೀಪ ಶೆಟ್ಟಿ ಹೇಳಿದರು.

‘ಹೊಸ ಕಟ್ಟಡ ನಿರ್ಮಾಣಗೊಂಡ ಬಳಿಕ ಅಲ್ಲಿಯೇ ಲಿಫ್ಟ್ ಸೌಲಭ್ಯ ಕಲ್ಪಿಸಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ’ ಎಂದು ಗಣಪತಿ ನಾಯ್ಕ ಸ್ಪಷ್ಟಪಡಿಸಿದರು.

ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ಪೌರಾಯುಕ್ತ ಕೇಶವ ಚೌಗುಲೆ ಇದ್ದರು.

ಕೋಣನಬಿಡಕಿ ಮಳಿಗೆಗೆ ಅವಕಾಶವಿಲ್ಲ:ಬಿಡಕಿಬೈಲ್ ಮಳಿಗೆಗಳನ್ನು ಹರಾಜು ಮೂಲಕ ನೀಡಬೇಕು ಎಂದು ಸದಸ್ಯ ಮಧುಕರ ಬಿಲ್ಲವ ಹೇಳಿದರು. ಇದಕ್ಕೆ ಸದಸ್ಯೆ ಶರ್ಮಿಳಾ ಮಾಡನಗೇರಿ, ನಾಮನಿರ್ದೇಶಿತ ಸದಸ್ಯ ವಿನಾಯಕ ನಾಯ್ಕ ಧ್ವನಿಗೂಡಿಸಿದರು. ಹಲವು ಸದಸ್ಯರು ಬೆಂಬಲಿಸಲಿಲ್ಲ. ಪ್ರತಿ ವರ್ಷದಂತೆ ಶೇ 10ರಷ್ಟು ದರ ಏರಿಕೆ ಮಾಡಿ ಗುತ್ತಿಗೆ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

‘ಬಸ್ ನಿಲ್ದಾಣ ವಿಸ್ತರಣೆ ಹಿನ್ನೆಲೆಯಲ್ಲಿ ಕೋಣನಬಿಡಕಿ ಪ್ರದೇಶದಲ್ಲಿ ಮಳಿಗೆ ಸ್ಥಾಪನೆಗೆ ಸದ್ಯಕ್ಕೆ ಅವಕಾಶ ನೀಡುತ್ತಿಲ್ಲ. ವಿಧಾನಸಭಾ ಅಧ್ಯಕ್ಷರ ಜತೆ ಸಭೆ ನಡೆಸಿ ಈ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಜಾಗ ಖಾಲಿ ಇರಲಿದೆ’ ಎಂದು ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.