ಮುಂಡಗೋಡ: ಕಳೆದ ಒಂದು ವಾರದಲ್ಲಿ ವಾಡಿಕೆಗಿಂತ ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ, ಕೊಯ್ಲಿಗೆ ಬಂದಿದ್ದ ಭತ್ತ ಹಾಗೂ ಗೋವಿನಜೋಳ ಬೆಳೆದಿದ್ದ ರೈತರು ಹೆಚ್ಚಿನ ಹಾನಿ ಅನುಭವಿಸಿದ್ದಾರೆ. ಹತ್ತಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಧರೆಗೆ ಒರಗಿದ್ದು, ಕಾಳುಗಳು ನೀರಿನಲ್ಲಿ ನೆನೆಯುತ್ತಿವೆ.
ತಾಲ್ಲೂಕಿನಲ್ಲಿ 7,500 ಹೆಕ್ಟೇರ್ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಇದಲ್ಲದೇ ಅರಣ್ಯ ಅತಿಕ್ರಮಣ ಭೂಮಿಯಲ್ಲಿಯೂ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಗೋವಿನಜೋಳ ಬೆಳೆಯಲಾಗಿದೆ. ಕಾಳಿನ ಖಣಜ ತುಂಬಲು ರೈತರೂ ತಯಾರಿಯಲ್ಲಿದ್ದರು. ಆದರೆ, ಮೂರು ದಿನದ ಮಳೆ, ಗದ್ದೆಯಲ್ಲಿ ಚಿತ್ರಣವನ್ನೇ ಬದಲಿಸಿದ್ದು, ಆಗಸದತ್ತ ಮುಖ ಮಾಡಿದ್ದ ತೆನೆಗಳು, ಧರೆಯತ್ತ ಮಲಗಿವೆ. ಒಣಗಿ ನಿಂತಿದ್ದ ಗದ್ದೆಯಲ್ಲಿ ಕಾಲಿಡಲೂ ಆಗದಷ್ಟು ನೆಲ ಒದ್ದೆಯಾಗಿದೆ.
‘ಬಿಸಿಲಿನ ವಾತಾವರಣ ಮುಂದುವರೆದಿದ್ದರೆ 10–15 ದಿನಗಳಲ್ಲಿ ಕಟಾವು ಆರಂಭವಾಗುತ್ತಿತ್ತು. ಈಗಾಗಲೇ ಭತ್ತ ಕೊಯ್ಲು ಮಾಡುವ ಯಂತ್ರಗಳು ಆಗಮಿಸಿವೆ. ಆದರೆ, ವಿಪರೀತವಾಗಿ ಸುರಿದ ಮಳೆಯು ಕೊಯ್ಲಿನ ಸಡಗರವನ್ನೇ ಹಾಳು ಮಾಡಿದೆ. ಉತ್ತಮ ಫಸಲಿನ ನಿರೀಕ್ಷೆಯು ಬಿರುಸಿನ ಮಳೆಗೆ ಹುಸಿಯಾಗಿದೆ. ಗದ್ದೆಯು ಒಣಗಬೇಕು. ಬಿದ್ದಿರುವ ಕಾಳುಗಳನ್ನು ನೀರಿನಿಂದ ಬೇರ್ಪಡಿಸಬೇಕು. ಗಟ್ಟಿ ಕಾಳುಗಳನ್ನು ಚೀಲದಲ್ಲಿ ತುಂಬಿದಾಗ ಮಾತ್ರ, ಎಷ್ಟು ಕೈಗೆ ಬಂತು ಎಂದು ಗೊತ್ತಾಗುತ್ತದೆ’ ಎಂದು ರೈತ ಬಸವರಾಜ ತಗಡಿನಮನಿ ಹೇಳಿದರು.
‘ಕಳೆದ ಹಲವು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಕೃಷಿಕೆಲಸ ಮಾಡಿಕೊಂಡು ಬರುತ್ತಿದ್ದು, ಈ ಸಲ ಎರಡು ಎಕರೆಯಲ್ಲಿ ಬೆಳೆದಿದ್ದ ಗೋವಿನಜೋಳ ಸಂಪೂರ್ಣ ಹಾಳಾಗಿದೆ. ಹತ್ತರಲ್ಲಿ ಒಂದು ತೆನೆ ಮೊಳಕೆ ಇಲ್ಲದ್ದು ಸಿಕ್ಕರೆ ಅದೇ ಪುಣ್ಯ ಎನ್ನುವಂತಾಗಿದೆ. ಅರಣ್ಯ ಅತಿಕ್ರಮಣ ರೈತರ ಬಗ್ಗೆಯೂ ಸರ್ಕಾರ ಕಣ್ತೆರೆದು ನೋಡಬೇಕು. ಕೃಷಿ ಬಿಟ್ಟರೆ ಬೇರೆನೂ ಗೊತ್ತಿಲ್ಲದಂತ ಹಲವು ಕುಟುಂಬಗಳಿಗೆ ಸರ್ಕಾರ ಸಹಾಯದ ಹಸ್ತ ಚಾಚಬೇಕು’ ಎಂದು ರೈತ ಪುಟ್ಟಪ್ಪ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.