ADVERTISEMENT

ಗಾಳಿ–ಮಳೆಗೆ ಗದ್ದೆಯಲ್ಲಿ ಒರಗಿದ ಭತ್ತದ ಪೈರು: ಅನ್ನದಾತರಿಗೆ ಸವಾಲಾದ ಬೆಳೆ ರಕ್ಷಣೆ

ರಾಜೇಂದ್ರ ಹೆಗಡೆ
Published 17 ಅಕ್ಟೋಬರ್ 2024, 5:19 IST
Last Updated 17 ಅಕ್ಟೋಬರ್ 2024, 5:19 IST
ಶಿರಸಿ ತಾಲ್ಲೂಕಿನ ಬದನಗೋಡ ಭಾಗದಲ್ಲಿ ಮಳೆಗೆ ಭತ್ತದ ಪೈರು ನೆಲಕಚ್ಚಿದೆ
ಶಿರಸಿ ತಾಲ್ಲೂಕಿನ ಬದನಗೋಡ ಭಾಗದಲ್ಲಿ ಮಳೆಗೆ ಭತ್ತದ ಪೈರು ನೆಲಕಚ್ಚಿದೆ   

ಶಿರಸಿ: ಅತಿವೃಷ್ಟಿ, ಬೆಂಕಿ ರೋಗ, ಬಿಳಿ ಜಿಗಿಹುಳು ಬಾಧೆಯಿಂದ ಇಳುವರಿ ಕಳೆದುಕೊಂಡಿದ್ದ ಬನವಾಸಿ ಭಾಗದ ಭತ್ತ ಬೆಳೆಗಾರರಿಗೆ ಕಟಾವಿನ ಹಂತದಲ್ಲಿ ಎದುರಾದ ಗಾಳಿ, ಮಳೆಯು ಇನ್ನಷ್ಟು ಕಷ್ಟಕ್ಕೆ ನೂಕಿದೆ. ಮಳೆಗೆ ಸಿಲುಕಿ ಭತ್ತದ ತೆನೆಗಳು ನೆಲಕಚ್ಚಿವೆ. 

ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ನಡೆದಿತ್ತು. ದಾಸನಕೊಪ್ಪ, ಬದನಗೋಡ, ವದ್ದಲ, ಬನವಾಸಿ ಸೇರಿ ಹಲವೆಡೆ 110 ದಿನಗಳಿಗೆ ಕಟಾವಿಗೆ ಬರುವ ಭತ್ತದ ತಳಿ ನಾಟಿ ಮಾಡಲಾಗಿತ್ತು. ಈಗ ಬಹುತೇಕ ಗದ್ದೆಗಳಲ್ಲಿ ಭತ್ತದ ಕಟಾವಿನ ಸಮಯ ಬಂದಿದೆ. ರೈತರು ಮಳೆಯ ಕಾರಣಕ್ಕೆ ಕಟಾವಿಗೆ ಆಸಕ್ತಿ ವಹಿಸುತ್ತಿಲ್ಲ. ಆದರೆ ಭತ್ತದ ತೆನೆಗಳು ಗಾಳಿಮಳೆಯ ರಭಸಕ್ಕೆ ನೆಲಕಚ್ಚುತ್ತಿರುವುದು ಅನಿವಾರ್ಯವಾಗಿ ಕಟಾವು ಮಾಡುವ ಸನ್ನಿವೇಶ ಎದುರಾಗಿದೆ. 

‘ಗಾಳಿಯ ಜತೆ ಸುರಿದ ಭಾರಿ ಮಳೆಗೆ ಕಟಾವಿನಂಚಿನಲ್ಲಿದ್ದ ಭತ್ತದ ಸಸಿಗಳು ನೆಲಕಚ್ಚುತ್ತಿವೆ. ಆದರೆ ಕಟಾವು ಮಾಡಲು ಮಳೆ ಬಿಡುತ್ತಿಲ್ಲ. ಭತ್ತ ಬಲಿತಿರುವ ಕಾರಣ ನೀರಲ್ಲಿ ನೆನೆದರೆ ಮೊಳಕೆ ಬರುವ ಸಾಧ್ಯತೆಯಿರುವ ಕಾರಣ ಬೆಳೆ ರಕ್ಷಣೆ ಸವಾಲಿನ ಕೆಲಸವಾಗಿದೆ' ಎನ್ನುತ್ತಾರೆ ಭತ್ತ ಬೆಳೆಗಾರರು. 

ADVERTISEMENT

‘ಆರಂಭದಲ್ಲಿ ಬೆಂಕಿ ರೋಗ ಕಾಣಿಕೊಂಡಿತ್ತು. ಅದರ ನಿಯಂತ್ರಿಸುವ ಪೂರ್ವ ಬಿಳಿಜಿಗಿ ಹುಳು ಬಾಧೆ ಬೆಳೆಗೆ ನಷ್ಟ ಮಾಡಿತ್ತು. ಈಗ ಭತ್ತದ ಪೈರು ನೆಲಕಚ್ಚಿದೆ. ಕೆಸರಿನಲ್ಲಿ ಮುಳುಗಿದ್ದ ಭತ್ತದ ಹುಲ್ಲನ್ನು ಯಂತ್ರದ ಸಹಾಯದಿಂದ ಕಟಾವು ಬಲು ಕಷ್ಟ. ಹೀಗಾಗಿ ಕೂಲಿ ಕಾರ್ಮಿಕರನ್ನೇ ಅವಲಂಬಿಸುವುದು ಅನಿವಾರ್ಯ. ಆದರೆ ಈಗ ಕೂಲಿಗಳ ಕೊರತೆ ಸಾಕಷ್ಟಿದೆ. ಹಾಗೆಯೇ ಬಿಟ್ಟರೆ ತೆನೆಕಾಳುಗಳು ಮೊಳಕೆ ಒಡೆಯುವ ಸಂಭವ ಇರುತ್ತದೆ. ಕುಟುಂಬ ಸದಸ್ಯರೇ ಸೇರಿ ಕಟಾವು ಮಾಡಲು ಯೋಚಿಸಿದ್ದೇವೆ’ ಎನ್ನುತ್ತಾರೆ ಬನವಾಸಿಯ ರೈತ ಅಕ್ಷಯ ಗೌಡರ್.

‘ಸಾಮಾನ್ಯವಾಗಿ ಪ್ರತಿ ವರ್ಷ 15 ರಿಂದ 20 ಕ್ವಿಂಟಾಲ್‌ ಅಕ್ಕಿಯನ್ನು ಅಕ್ಟೋಬರ್‌ ತಿಂಗಳಲ್ಲಿ ಇಳುವರಿ ಪಡೆಲಾಗುತ್ತಿತ್ತು. ಅದರಲ್ಲಿ 7-8 ಕ್ವಿಂಟಾಲ್‌ ಮಾರುತ್ತಿದ್ದೆ. ಉಳಿದಿದ್ದನ್ನು ಮನೆ ಬಳಕೆಗಾಗಿ ಇರಿಸಿಕೊಳ್ಳುತ್ತಿದ್ದೆ. ಆದರೆ ಈ ವರ್ಷ ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ. ಭತ್ತ ಮಾರಲು ಸಾಧ್ಯವಿಲ್ಲ. ಕೆಸರಿಗೆ ಸಿಲುಕಿ ಭತ್ತದ ಹುಲ್ಲು ಹಸು, ಎಮ್ಮೆಗಳಿಗೆ ಮೇವು ನೀಡಲು ಬಳಕೆಗೆ ಬಾರದು’ ಎನ್ನುತ್ತಾರೆ ಅವರು. 

‘ವಿವಿಧ ರೋಗಬಾಧೆ, ಮಳೆಯ ಕಾರಣಕ್ಕೆ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನೆಲಕಚ್ಚಿದೆ. ಇದರಿಂದ ಕೃಷಿಗಾಗಿ ಮಾಡಿದ ಸಾಲ ತೀರಿಸುವುದು ಕಷ್ಟವಾಗುತ್ತಿದೆ’ ಎಂಬುದಾಗಿ ಬೆಳೆಗಾರರು ನೋವು ತೋಡಿಕೊಳ್ಳುತ್ತಾರೆ.‌

ಭತ್ತ ಕಟಾವನ್ನು ಮಳೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಮುಂದೂಡುವುದು ಉತ್ತಮ. ಇಲ್ಲವೆ ಭತ್ತ ಒಣ ಹಾಕಲು ವ್ಯವಸ್ಥೆ ಮಾಡಿಕೊಂಡು ಕೊಯ್ಲು ಮಾಡಬೇಕು
ಮಧುಕರ ನಾಯ್ಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.