ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರ್ಗಲ್ ಗ್ರಾಮದ ಕವಲಮಕ್ಕಿಯಲ್ಲಿ ಬುಧವಾರ ಉಂಟಾದ ಅಗ್ನಿ ಅವಘಡದಲ್ಲಿ ಭತ್ತದ ಹುಲ್ಲಿನ ಬಣವೆ ಭಸ್ಮವಾಗಿದೆ.
ಬರ್ಗಲ್ ಗ್ರಾಮದ ನಾಲ್ವರು ರೈತರು ಒಂದೇ ಗದ್ದೆಯಲ್ಲಿ ಸುಮಾರು 9,000 ಭತ್ತದ ಹುಲ್ಲಿನ ಹೊರೆಯ ಬಣವೆ (ಹುಲ್ಲು ಬೊನೆ) ಸಂಗ್ರಹಿಸಿಟ್ಟಿದ್ದರು. ಮಧ್ಯಾಹ್ನ ಬೀಸಿದ ಗಾಳಿಗೆ ಎರಡು ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶಿಸಿ ಕಿಡಿಗಳು ಕಾಣಿಸಿಕೊಂಡವು. ಅವು ಹುಲ್ಲಿಗೆ ಬಿದ್ದು ಬೆಂಕಿ ಹೊತ್ತಿಕೊಂಡಿತು. ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆಯೂ ಇಲ್ಲಿ ಇಂಥದ್ದೇ ಘಟನೆಯಾಗಿತ್ತು. ಆದರೆ, ಹೆಸ್ಕಾಂ ಅಧಿಕಾರಿಗಳು ಜಾಗ ಪರಿಶೀಲಿಸಿದ್ದರ ಹೊರತಾಗಿ ರೈತರಿಗೆ ಪರಿಹಾರ ನೀಡಲಿಲ್ಲ ಎಂದು ರೈತರು ದೂರಿದ್ದಾರೆ. ಬರ್ಗಲ್ ಗ್ರಾಮದಲ್ಲಿ ಕಳೆದ ವರ್ಷ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಭತ್ತದ ಬೆಳೆಗೆ ಹಾನಿಯಾಗಿತ್ತು.
‘ರೈತರು ಆರ್ಥಿಕ ಸಂಕಷ್ಟಗೆ ಸಿಲುಕಿದ್ದರೂ ಸಾಲ ಮಾಡಿ ವ್ಯವಸಾಯ ಮಾಡಿದ್ದರು. ಹುಲ್ಲಿಗೆ ಬೆಂಕಿ ಬಿದ್ದ ಕಾರಣ ಮತ್ತಷ್ಟು ನಷ್ಟವಾಗಿದೆ. ಆಕಳು ಮೇವಾಗಿರುವ ಒಣ ಹುಲ್ಲನ್ನು ಹಣ ಕೊಟ್ಟು ಖರೀದಿಸಬೇಕಾಗಿದೆ’ ಎಂದು ರೈತ ವಿಶ್ರಾಮ ದತ್ತ ಗುನಗಿ ಅಳಲು ತೋಡಿಕೊಂಡಿದ್ದಾರೆ.
ಈಗ ನಷ್ಟವಾಗಿರುವ ರೈತರಿಗೆ ಹೆಸ್ಕಾಂ ಪರಿಹಾರ ಕೊಡಬೇಕು. ಮುಂದೆ ಇಂಥ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.