ADVERTISEMENT

ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ’ ಉಕ್ತಿ ನೆನಪಿಸಿಕೊಂಡ ಕವಿ ಡಾ.ಸಿದ್ಧಲಿಂಗಯ್ಯ

‘ನನ್ನ ಮನೆಯೇ ಬನವಾಸಿ’ ಎಂದ ಹಿರಿಯ ಕವಿ

ಸಂಧ್ಯಾ ಹೆಗಡೆ
Published 11 ಜೂನ್ 2021, 12:59 IST
Last Updated 11 ಜೂನ್ 2021, 12:59 IST
ಸಾಹಿತಿ ಡಾ.ಸಿದ್ಧಲಿಂಗಯ್ಯ ಅವರು ‘ಪ್ರಜಾವಾಣಿ’ ಓದುತ್ತಲೇ ತಮ್ಮ ಅಭಿಪ್ರಾಯ ಹಂಚಿಕೊಂಡರು
ಸಾಹಿತಿ ಡಾ.ಸಿದ್ಧಲಿಂಗಯ್ಯ ಅವರು ‘ಪ್ರಜಾವಾಣಿ’ ಓದುತ್ತಲೇ ತಮ್ಮ ಅಭಿಪ್ರಾಯ ಹಂಚಿಕೊಂಡರು   

ಈ ಲೇಖನ ಫೆಬ್ರುವರಿ 8, 2020 ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು.

ಶಿರಸಿ: ‘ಆದಿಕವಿ ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ’ ಉಕ್ತಿಯಲ್ಲಿ ನಂಬಿಕೆಯಿಟ್ಟವನು. ಸಾವಿರಾರು ವರ್ಷಗಳ ಹಿಂದೆಯೇ ಪಂಪ ನಿಜಕ್ಕೂ ಶ್ರೇಷ್ಠ ಕವಿ. ಮನುಷ್ಯ ಜಾತಿಯಲ್ಲಿ ಸಮಾನತೆ ಬಂದು, ಶೋಷಣೆ ಹೋಗಬೇಕು, ಹೊಸ ಸಮಾಜ ನಿರ್ಮಾಣವಾಗಬೇಕು ಎಂಬ ದಿಸೆಯಲ್ಲಿ ಬರವಣಿಗೆ ನಡೆಸಿದ ನಾನು, ನನ್ನ ಮನೆಗೆ ‘ಬನವಾಸಿ’ ಎಂಬ ಸಣ್ಣ ಫಲಕವೊಂದನ್ನು 15 ವರ್ಷಗಳ ಹಿಂದೆಯೇ ಹಾಕಿದ್ದೆ...’ ಎನ್ನುತ್ತ ಮಾತಿಗಾರಂಭಿಸಿದವರು ಪಂಪ ಪ್ರಶಸ್ತಿ ಪುರಸ್ಕೃತ ಡಾ. ಸಿದ್ಧಲಿಂಗಯ್ಯ.

ಪ್ರತಿಷ್ಠಿತ ಪಂಪ ಪ್ರಶಸ್ತಿ ಸ್ವೀಕರಿಸಲು ಬನವಾಸಿಗೆ ಬಂದಿದ್ದ ಸಂದರ್ಭದಲ್ಲಿ ಕೆಲ ವಿಚಾರಗಳನ್ನು ಅವರು ಹಂಚಿಕೊಂಡರು. ‘ಉತ್ತರ ಕನ್ನಡ ಜಿಲ್ಲೆ, ಬನವಾಸಿ ಬಗ್ಗೆ ವಿಶೇಷ ಅಭಿಮಾನವಿದೆ. ಜಿಲ್ಲೆಯ ಕಡಲು, ಕಾಡು, ಎತ್ತರದ ಮರಗಳು, ವಿಶಾಲ ಸಮುದ್ರದ ಎದುರು ನಿಂತರೆ ಮನುಷ್ಯನ ಕುಬ್ಜತೆಯನ್ನು ಇದು ಸಾಕ್ಷಾತ್ಕರಿಸುತ್ತದೆ. ಅಲ್ಲದೇ ನನ್ನ ಗುರು ದಿವಂಗತ ರಾಮಕೃಷ್ಣ ಹೆಗಡೆ ಅವರ ಜಿಲ್ಲೆಯಲ್ಲಿ ಪ್ರಶಸ್ತಿ ಸ್ವೀಕಾರ ನಿಜಕ್ಕೂ ಖುಷಿ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ADVERTISEMENT

‘ಹಳಗನ್ನಡ ಸಾಹಿತ್ಯದ ಬಗ್ಗೆ ಅಧ್ಯಾಪಕರಲ್ಲೇ ಆಸಕ್ತಿ ಕಡಿಮೆಯಾಗುತ್ತಿರುವುದು ದುರದೃಷ್ಟಕರ. ಹಳಗನ್ನಡ ಪಠ್ಯವು ಪಠ್ಯಕ್ರಮದಿಂದ ಹೊರಹೋಗುತ್ತಿದೆ. ಸಾಹಿತ್ಯದ ಸ್ವಾರಸ್ಯ, ಆ ಸಂತೋಷ ಅನುಭವಿಸಲು ಹಳೆಗನ್ನಡ ಸಾಹಿತ್ಯಕ್ಕೆ ಹಿಂದಿರುಗಬೇಕಾಗಿದೆ. ಪ್ರಾಚೀನ ಸಾಹಿತ್ಯದ ಬಗ್ಗೆ ಮಾತನಾಡುವ ವಿದ್ವಾಂಸರನ್ನು ಗುರುತಿಸಬೇಕು. ಗಮಕಿಗಳ ನೆರವು ಪಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

ಚಳವಳಿಗಳು ಸಂವಿಧಾನದ ಚೌಕಟ್ಟಿನಲ್ಲಿ, ಪ್ರಜಾಸತ್ತಾತ್ಮಕವಾಗಿ ನಡೆದರೆ ಅದಕ್ಕೆ ಅಡ್ಡಿ ಬರಲಾರದು. ನಿರ್ದಿಷ್ಟು ಗುಂಪು, ಪಕ್ಷ, ಜನಾಂಗ ಇಟ್ಟುಕೊಂಡು ಚಳವಳಿ ವಿರೋಧಿಸುವುದು ಸರಿಯಲ್ಲ. ಕಾಲ ಬದಲಾದಂತೆ ಚಳವಳಿಗಳು ತೀವ್ರವಾಗುತ್ತವೆ. ಚಳವಳಿಗಳ ತೀವ್ರತೆಯನ್ನು ಕಾಲವೇ ನಿರ್ಧರಿಸುತ್ತದೆ ಎಂದು ಇತ್ತೀಚಿನ ಚಳವಳಿಗಳ ಬಗೆಗಿನ ತಮ್ಮ ನಿಲುವು ವ್ಯಕ್ತಪಡಿಸಿದರು.

ಮೀಸಲಾತಿ, ಉದ್ಯೋಗ, ಶಿಕ್ಷಣದ ಕಾರಣದಿಂದ ದಲಿತರಲ್ಲಿ ಹೊಸ ಮಧ್ಯಮ ವರ್ಗ ಸೃಷ್ಟಿಯಾಗುತ್ತಿದೆ. ಆ ಮಧ್ಯಮ ವರ್ಗಕ್ಕೆ ಚಳವಳಿಯ ಅಗತ್ಯ ಇಲ್ಲದಿರಬಹುದು. ಇನ್ನುಳಿದ ಶೇ 90ರಷ್ಟು ಜನರು ಅದೇ ಸ್ಥಿತಿಯಲ್ಲಿದ್ದಾರೆ. ರೈತರು, ಕಾರ್ಮಿಕರು, ಮಹಿಳೆಯರು ಈ ಎಲ್ಲ ಹೋರಾಟಗಳ ಭಾಗವಾಗಿ ದಲಿತ ಹೋರಾಟ ನಡೆಯಬೇಕು. ಎಲ್ಲರ ವಿಮೋಚನೆಯಲ್ಲಿ ದಲಿತ ವಿಮೋಚನೆ ಅಡಗಿದೆ ಎಂದು ದಲಿತ ಚಳವಳಿಯ ಮಾರ್ಗಕ್ಕೆ ಸ್ಪಷ್ಟರೂಪ ನೀಡಬೇಕಾದ ಸಂಗತಿಯನ್ನು ಒತ್ತಿ ಹೇಳಿದರು.

ಕನ್ನಡ ಶಾಲೆ ಉಳಿಸಿಕೊಳ್ಳಲು ಇಂಗ್ಲಿಷ್ ಮಾಧ್ಯಮ ಆರಂಭಿಸುವುದು ಸರಿಯಲ್ಲ. ಕನ್ನಡ ಶಾಲೆ ಗುಣಮಟ್ಟದ ಸುಧಾರಿಸಬೇಕು. ಒಂದು ಭಾಷೆಯಾಗಿ ಇಂಗ್ಲಿಷ್‌ ಅನ್ನು ಸರಿಯಾಗಿ ಕಲಿಸುವಂತಾಗಬೇಕು. ಕನ್ನಡದ ಸಾಹಿತ್ಯ ಬೇರೆ ಭಾಷೆಗಳಿಗೆ ಅನುವಾದವಾಗುವ ಮೂಲಕ ಕನ್ನಡ ಸಾಹಿತ್ಯ ಭಾಷೆಯ ಮಹತ್ವ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

*
ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ಆದೇಶವಾದರೆ, ಸರ್ಕಾರಿ ಶಾಲೆಗಳು ಉಚ್ಛ್ರಾಯಕ್ಕೆ ತಲುಪುತ್ತವೆ. ಶಿಕ್ಷಣ ಸಚಿವರು ಈ ನಿಲುವನ್ನು ತೆಗೆದುಕೊಳ್ಳಬಹುದು.
-ಡಾ.ಸಿದ್ದಲಿಂಗಯ್ಯ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.