ವಿಶ್ವೇಶ್ವರ ಗಾಂವ್ಕರ್
ಯಲ್ಲಾಪುರ: ಗಂಗಾವಳಿ ನದಿಗೆ ಅಡ್ಡಲಾಗಿ ಕಾಂಕ್ರೀಟ್ ಪೈಪುಗಳನ್ನು ಬಳಸಿ ನಿರ್ಮಿಸಿದ ಪಣಸಗುಳಿ ಸೇತುವೆ ಮಳೆ ಹೆಚ್ಚಿದರೆ ಮುಳುಗಡೆಯಾಗುವುದು ಪ್ರತಿ ವರ್ಷ ಸಾಮಾನ್ಯವಾಗಿದೆ. ಇದರಿಂದ ಮಳೆಗಾಲದ ಬಹುಪಾಲು ದಿನ ಸೇತುವೆ ಇದ್ದರೂ ಸಂಪರ್ಕ ಕಡಿತಗೊಳ್ಳುತ್ತಿದೆ.
ನದಿಯಲ್ಲಿ ತೇಲಿ ಬರುವ ಕಸಕಡ್ಡಿ, ಮರದ ದಿಮ್ಮಿ, ಕಟ್ಟಿಗೆಗಳು ಪೈಪ್‍ಗಳಿಗೆ ಅಡ್ಡಲಾಗಿ ಸಿಲುಕುವ ಕಾರಣದಿಂದ ನದಿಯ ನೀರು ಸೇತುವೆ ಮೇಲೆ ಹರಿಯುತ್ತಿದೆ. ಗಂಗಾವಳಿ ನದಿಪಾತ್ರದ ಪ್ರದೇಶದಲ್ಲಿ ಸತತ ಒಂದೆರಡು ದಿನ ಮಳೆಯಾದರೂ ಸೇತುವೆ ಮುಳುಗುವುದು ಸಾಮಾನ್ಯವಾಗುವಂತಾಗುತ್ತಿದೆ.
ಅಂಕೋಲಾ ತಾಲ್ಲೂಕಿನ ಶೇವ್ಕಾರ, ಕೈಗಡಿ, ಹೆಗ್ಗಾರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಪಣಸಗುಳಿಯಲ್ಲಿ ಲೋಕೋಪಯೋಗಿ ಇಲಾಖೆ ಈ ಸೇತುವೆ ನಿರ್ಮಿಸಿದೆ. ಗಂಗಾವಳಿ ನದಿಗೆ ಅಡ್ಡಲಾಗಿ 3 ಹಾಗೂ 2.5 ಅಡಿ ಅಳತೆಯ ಒಟ್ಟು ತಲಾ 70 ಪೈಪುಗಳನ್ನು ಎರಡು ಸಾಲುಗಳಲ್ಲಿ ಅಳವಡಿಸಿ, ಅದರ ಮೇಲೆ ಕಾಂಕ್ರೀಟ್ ಹಾಕಿ ರಸ್ತೆ ಮಾಡಲಾಗಿದೆ.
ಪಣಸಗುಳಿಯಲ್ಲಿ ₹1.20 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ನದಿ ದಾಟುವ ದಾರಿ ನಿರ್ಮಿಸಲಾಗಿದೆ. ಅದನ್ನು ಗ್ರಾಮ ಪಂಚಾಯತಿ ನಿರ್ವಹಿಸುತ್ತಿದೆ. ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಹಣ ಬೇಕು.ವಿ.ಎಂ.ಭಟ್ಟ, ಲೋಕೋಪಯೋಗಿ ಇಲಾಖೆ ಎಇಇ
‘ಪಣಸಗುಳಿ ಸೇತುವೆಯ ಪೈಪುಗಳು ಮಳೆಗಾಲದಲ್ಲಿ ಪದೇ ಪದೇ ಕಸಕಡ್ಡಿ, ಮರದ ದಿಮ್ಮಿಗಳಿಂದ ಕಟ್ಟಿಕೊಳ್ಳುತ್ತವೆ. ಇದರಿಂದಾಗಿ ನೀರು ಸೇತುವೆಯ ಮೇಲೆಯೇ ಹರಿಯುವ ಕಾರಣ ಸಂಚಾರಕ್ಕೂ ಅಡಚಣೆಯಾಗುತ್ತದೆ. ಸದ್ಯ ಇಲ್ಲಿಂದ 8–10 ಕಿ.ಮೀ ವ್ಯಾಪ್ತಿಯಲ್ಲಿ ಬೇರೆ ಯಾವುದೇ ಸೇತುವೆ ಇರದ ಕಾರಣ ತುರ್ತು ಓಡಾಟಕ್ಕೆ ಈ ಸೇತುವೆ ಅನಿವಾರ್ಯ. ಹೀಗಾಗಿ ಮಳೆಗಾಲದಲ್ಲಿ ಪ್ರತಿ ವರ್ಷವೂ ಆಗಾಗ ಪೈಪನ್ನು ಶುಚಿಗೊಳಿಸಿ ನದಿ ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಲಾಗುತ್ತದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ನಾರಾಯಣ ಭಟ್ಟ.
‘ಪಣಸಗುಳಿ ಸೇತುವೆ ತಗ್ಗಿನಲ್ಲಿರುವ ಕಾರಣ ಹೆಚ್ಚಿನ ಉಪಯೋಗ ಸಾಧ್ಯವಾಗುತ್ತಿಲ್ಲ. ಸೇತುವೆಯನ್ನು ಇನ್ನೂ 10–20 ಅಡಿ ಎತ್ತರದಲ್ಲಿದ್ದರೆ ಈ ಭಾಗದ ಜನ ಯಲ್ಲಾಪುರಕ್ಕೆ ಹೋಗಲು ಈ ಸೇತುವೆಯನ್ನು ಮತ್ತು ಅಂಕೋಲಾಕ್ಕೆ ಹೋಗಲು ರಾಮನಗುಳಿ ಸೇತುವೆಯನ್ನು ಬಳಸಿಕೊಳ್ಳಬಹುದಿತ್ತು’ ಎನ್ನುತ್ತಾರೆ ಹೆಗ್ಗಾರ ಗ್ರಾಮದ ನಿವಾಸಿ ಪ್ರಸನ್ನ ಭಟ್ಟ ಗುಡ್ಡೆಮನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.