ಕಾರವಾರ: ‘ಗೋಕರ್ಣದ ಅಶೋಕೆಯಲ್ಲಿರುವವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ, ಸದ್ಯದಲ್ಲೇ ದೇಶದ ಪ್ರಥಮ ಪರಂಪರಾ ವಿಶ್ವವಿದ್ಯಾಲಯ ಸ್ಥಾಪನೆಗೆ ಯೋಜಿಸಲಾಗಿದೆ. ವಿದ್ಯಾಪೀಠದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪರಂಪರಾ ಗುರುಕುಲ ಆರಂಭಿಸಲಾಗುವುದು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಅಶೋಕೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದ ಭವಿಷ್ಯದ ಶೈಕ್ಷಣಿಕ ಕೇಂದ್ರವಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಮಠವು ಅಭಿವೃದ್ಧಿ ಪಡಿಸುತ್ತಿದೆ. ಪರಂಪರಾ ಗುರುಕುಲವು ಸಣ್ಣ ಪ್ರಮಾಣದಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿದೆ. ಮುಂದಿನ ವರ್ಷದಿಂದ ಇದು ಬೃಹತ್ ಸ್ವರೂಪ ಪಡೆಯಲಿದೆ. ಆ ಬಳಿಕ ಇದೇ ಆಧಾರದಲ್ಲಿ ಪರಂಪರಾ ವಿಶ್ವವಿದ್ಯಾಲಯ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಳಿದ ಪ್ರಕ್ರಿಯೆಗಳು ಸರ್ಕಾರದ ಹಂತದಲ್ಲಿವೆ’ ಎಂದು ಮಾಹಿತಿ ನೀಡಿದರು.
‘ವಿದ್ಯಾಪೀಠದಲ್ಲಿ ಕಾರ್ಯಾರಂಭ ಮಾಡಿರುವ ಗುರುಕುಲಗಳು ಎರಡು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಪರಂಪರಾ ಗುರುಕುಲದಲ್ಲಿ ವಿದ್ಯಾರ್ಥಿಗಳು ಆರು ವರ್ಷಗಳಲ್ಲಿ, 18 ಭಾರತೀಯ ವಿದ್ಯೆಗಳ ಪೂರ್ವಶಿಕ್ಷಣ ಪಡೆಯಲಿದ್ದಾರೆ. ಪರಂಪರಾ ವಿಶ್ವವಿದ್ಯಾಲಯದಲ್ಲಿ ಇವುಗಳ ಉನ್ನತ ಅಧ್ಯಯನಕ್ಕೆ ಅವಕಾಶ ಇರುತ್ತದೆ. ಪಠ್ಯಕ್ರಮ ಸೇರಿದಂತೆ ಸಮಗ್ರ ರೂಪರೇಷೆಗಳನ್ನು ಅಭಿವೃದ್ಧಿಪಡಿಸಿ ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
‘ವಿಶ್ವವಿದ್ಯಾಪೀಠವು 15 ವರ್ಷಗಳ ಯೋಜನೆಯಾಗಿದೆ. ಇದು ಪೂರ್ಣವಾಗಿ ಕಾರ್ಯಗತವಾದಾಗ ಭಾರತೀಯ ಪದ್ಧತಿಯ ಸಮಗ್ರ ಶಿಕ್ಷಣವನ್ನು 25 ಸಾವಿರ ವಿದ್ಯಾರ್ಥಿಗಳು ಕಲಿಯಲು ಅವಕಾಶ ಸಿಗಲಿದೆ. ಈಗಾಗಲೇ ₹ 150 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ’ ಎಂದರು.
ಸೀಮೋಲ್ಲಂಘನ 10ರಂದು:
ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಗುರುಕುಲ ಚಾತುರ್ಮಾಸ್ಯವು ಸೆ.10ರಂದು ಸಂಪನ್ನಗೊಳ್ಳಲಿದೆ. ಗಂಗಾವಳಿ ನದಿಯನ್ನು ದಾಟಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಸೀಮೋಲ್ಲಂಘನೆ ಕೈಗೊಳ್ಳಲಿದ್ದಾರೆ. ಅದರೊಂದಿಗೆ ಚಾತುರ್ಮಾಸ್ಯ ವ್ರತ ಮುಕ್ತಾಯವಾಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಚಾತುರ್ಮಾಸ್ಯ ಪ್ರಶಸ್ತಿ:
ಪ್ರತಿ ಚಾತುರ್ಮಾಸ್ಯ ಸಂಪನ್ನಗೊಳ್ಳುವ ದಿನ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಶಿಷ್ಯ ಭಕ್ತರಿಗೆ ‘ಚಾತುರ್ಮಾಸ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ಈ ಬಾರಿಯ ಪ್ರಶಸ್ತಿಗೆ ನಿವೃತ್ತ ಪೊಲೀಸ್ ಅಧಿಕಾರಿ, ಕುಮಟಾ ತಾಲೂಕಿನ ಹೆಗಡೆ ನಿವಾಸಿ ಕೃಷ್ಣ ಗಣೇಶ ಭಟ್ ಭಾಜನರಾಗಿದ್ದಾರೆ.
ಮಾಧ್ಯಮ ವಿಭಾಗದ ಸಂಯೋಜಕ ಉದಯಶಂಕರ ಭಟ್ ಮಿತ್ತೂರು, ಮಹಾಮಂಡಲ ಸಂಘಟನಾ ಕಾರ್ಯದರ್ಶಿ ಅರವಿಂದ ದರ್ಬೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.