ಕಾರವಾರ: ಕೊರೊನಾ ಹಾಗೂ ಲಾಕ್‌ಡೌನ್ ಬಳಿಕ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಈವರೆಗೆ ಖಾಸಗಿ ಶಾಲೆಗಳ 556 ವಿದ್ಯಾರ್ಥಿಗಳು ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 312 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಪ‍್ರವೇಶ ಪಡೆದುಕೊಂಡಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಹೊಸ ದಾಖಲಾತಿಯ ಅವಧಿ ಮುಕ್ತಾಯವಾಗಿದೆ. ಆದರೆ, ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳನ್ನು ಅವರ ಪಾಲಕರು ವರ್ಗಾವಣೆ ಪ್ರಮಾಣ ಪತ್ರ ಪಡೆದುಕೊಂಡು ತಮ್ಮ ಮನೆಯ ಹತ್ತಿರದ ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಎಲ್.ಕೆ.ಜಿ ಓದಿದ ಖಾಸಗಿ ಶಾಲೆಯಲ್ಲೇ ಮುಂದುವರಿಯಲು ಅವಕಾಶವಿದ್ದ ವಿದ್ಯಾರ್ಥಿಗಳೂ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಗೆ ಸೇರುತ್ತಿರುವುದು ಗಮನಾರ್ಹ.
ಕೆಲವು ಪಾಲಕರಿಗೆ ಮಕ್ಕಳನ್ನು ಖಾಸಗಿ ಶಾಲೆಗಳಿಗೇ ಕಳುಹಿಸಬೇಕು ಎಂಬ ಹಂಬಲವಿದೆ. ಆದರೆ, ಹಣಕಾಸಿನ ಕೊರತೆಯಿಂದಾಗಿ ದುಬಾರಿ ಡೊನೇಷನ್ ಹಾಗೂ ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಶಾಲಾ ವಾಹನಕ್ಕೂ ಸಾವಿರಾರು ರೂಪಾಯಿ ನೀಡುವುದು ಅಸಾಧ್ಯ ಎಂಬಂತಾಗಿದೆ. ಅಲ್ಲದೇ ತರಗತಿಗಳೇ ಆರಂಭವಾಗದೇ ನಾವೇಕೆ ಶುಲ್ಕ ಪಾವತಿಸಬೇಕು ಎಂಬ ವಾದವೂ ಪಾಲಕರದ್ದಾಗಿದೆ.
ಮತ್ತೆ ಕೆಲವರಿಗೆ ಮಕ್ಕಳನ್ನು ಮೊದಲಿನಂತೆ ಖಾಸಗಿ ಶಾಲೆಗೆ ಕಳುಹಿಸುವುದೇ ಅಥವಾ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡಿಸುವುದೇ ಎಂಬ ಗೊಂದಲವಿದೆ. ಅಂಥ ಪಾಲಕರ ಮಾಹಿತಿ ಸಿಕ್ಕಿದ ಕೂಡಲೇ ಸರ್ಕಾರಿ ಶಾಲೆಗಳ ಶಿಕ್ಷಕರು ಸಂಪರ್ಕಿಸುತ್ತಿದ್ದಾರೆ. ‘ಮಕ್ಕಳನ್ನು ಯಾವುದಾದರೂ ಶಾಲೆಗೆ ಸೇರಿಸಲೇಬೇಕು. ಇಲ್ಲದಿದ್ದರೆ ಕಡ್ಡಾಯ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗುತ್ತದೆ’ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
‘ನನ್ನ ಮಗಳು ಸಿಂಧು ಮೂರನೇ ತರಗತಿವರೆಗೆ ಖಾಸಗಿ ಶಾಲೆಗೆ ಹೋದವಳು. ಆದರೆ, ಕೊರೊನಾ ಕಾಲದಲ್ಲಿ ಆನ್‌ಲೈನ್ ಕ್ಲಾಸ್ ಮಾಡಿದ್ರು. ಮೊಬೈಲ್ ತೆಗೆದುಕೊಳ್ಳುವಷ್ಟು ನಮ್ಮತ್ರ ದುಡ್ಡಿರಲಿಲ್ಲ. ಸರ್ಕಾರಿ ಶಾಲೆ ಮನೆಯ ಸಮೀಪವೇ ಇದೆ. ಇಂಗ್ಲಿಷ್ ಕೂಡ ಚೊಲೊ ಹೇಳ್ಕೊಡ್ತಾರೆ. ಹಾಗಾಗಿ ಹಿರೇಗುತ್ತಿಯ ಶಾಲೆಗೆ ಸೇರ್ಸಿದೇವೆ’ ಎನ್ನುತ್ತಾರೆ ಹಿರೇಗುತ್ತಿಯ ಸುಜಾತಾ ಉದಯ ನಾಯ್ಕ.
‘ಮನೆಯ ಹತ್ರವೇ ಇರುವ ಕಾರಣ ಯಾರು ಬರ್ತಾರೆ, ಹೋಗ್ತಾರೆ ಅಂತ ಗೊತ್ತಾಗ್ತದೆ. ಮಗುವಿನ ಆರೋಗ್ಯದ ಸುರಕ್ಷತೆಯೂ ಇರ್ತದೆ’ ಎನ್ನುವುದು ಅವರ ಅಭಿಪ್ರಾಯವಾಗಿದೆ.
ಗ್ರಾಮೀಣ ಭಾಗದಲ್ಲಿ ಹೆಚ್ಚು:
‘ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದುಕೊಂಡ ವಿದ್ಯಾರ್ಥಿಗಳಲ್ಲಿ, ಈ ಮೊದಲು ದೂರದ ಹಳ್ಳಿಗಳಿಂದ ಪಟ್ಟಣದ ಖಾಸಗಿ ಶಾಲೆಗಳಿಗೆ ಶಾಲಾ ವಾಹನದಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ನಗರದಲ್ಲಿರುವ ಕೆಲವು ವಿದ್ಯಾರ್ಥಿಗಳೂ ಸೇರಿದ್ದಾರೆ’ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಹರೀಶ ಗಾಂವ್ಕರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
‘ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಇದು ಸರ್ಕಾರಿ ಶಾಲೆಗಳ ಮಟ್ಟಿಗೆ ನಿಜಕ್ಕೂ ಆಶಾದಾಯಕ ಬೆಳವಣಿಗೆ. ಖಾಸಗಿ ಶಾಲೆಗಳಿಂದ ವರ್ಗಾವಣೆಯಾಗಿ ಬರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಿಗೆ (ಸಿ.ಆರ್.ಪಿ) ಸೂಚಿಸಲಾಗಿದೆ. ಸಿ.ಆರ್.ಪಿ ಮಟ್ಟದಿಂದ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಆಂದೋಲನವನ್ನೂ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಶಿರಸಿ ಜಿಲ್ಲೆಯಲ್ಲೂ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ ಎನ್ನುತ್ತಾರೆ ಉಪ ನಿರ್ದೇಶಕ ದಿವಾಕರ ಶೆಟ್ಟಿ. ‘16 ಸಾವಿರ ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ. ನಂತರ ನಿಖರ ಸಂಖ್ಯೆ ತಿಳಿದುಬರಲಿದೆ’ ಎಂದು ಹೇಳಿದ್ದಾರೆ.
***
ಸರ್ಕಾರಿ ಶಾಲೆಗಳಲ್ಲಿ ಹಲವು ಕೊಠಡಿಗಳು ಲಭ್ಯವಿದ್ದು, ಪೀಠೋಪಕರಣಗಳೂ ಇವೆ. ಹಾಗಾಗಿ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದರೂ ಸ್ಥಳದ ಕೊರತೆಯಾಗದು.
- ಹರೀಶ ಗಾಂವ್ಕರ್, ಶಿಕ್ಷಣ ಇಲಾಖೆ ಉಪ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.