ಕಾರವಾರ: ಅನಾರೋಗ್ಯಕ್ಕೆ ಒಳಗಾಗುವ ಜಾನುವಾರಗಳಿಗೆ ಮನೆ ಬಾಗಿಲಲ್ಲೇ ಚಿಕಿತ್ಸೆ ಒದಗಿಸಲು ಸರ್ಕಾರ ಆರಂಭಿಸಿದ್ದ ‘ಪಶು ಸಂಜೀವಿನಿ ಆಂಬುಲೆನ್ಸ್’ಗೆ ಕರೆ ಮಾಡಿ ಮಾಡಿ ಹೈನುಗಾರರು ಹೈರಾಣಾಗುತ್ತಿದ್ದಾರೆಯೇ ವಿನಃ ಸಕಾಲಕ್ಕೆ ಆಂಬುಲೆನ್ಸ್ ಮನೆಗಳಿಗೆ ತಲುಪುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ.
ಜಿಲ್ಲೆಗೆ ಕಳೆದ ವರ್ಷ ಪಶು ಸಂಜೀವಿನಿ ಯೋಜನೆ ಅಡಿಯಲ್ಲಿ 13 ಆಂಬುಲೆನ್ಸ್‌ಗಳನ್ನು ಸರ್ಕಾರ ಪೂರೈಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ನಡೆಯುವ ಯೋಜನೆಯ ನಿರ್ವಹಣೆಗೆ ವೈದ್ಯರು, ಸಹಾಯಕ, ತಂತ್ರಜ್ಞ, ಚಾಲಕ ಸೇರಿದಂತೆ ಅಗತ್ಯ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ. ವಾಹನಗಳು ಸುಸ್ಥಿತಿಯಲ್ಲಿದ್ದರೂ ಅವುಗಳ ಬಳಕೆ ಮಾತ್ರ ಕಡಿಮೆಯಾಗಿದೆ!
ಹಸು ಅಥವಾ ಸಾಕು ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾದರೆ ಅವುಗಳನ್ನು ಗ್ರಾಮೀಣ ಪ್ರದೇಶದಿಂದ ನಗರ, ಪಟ್ಟಣಗಳ ಪಶು ಚಿಕಿತ್ಸಾಲಯಕ್ಕೆ ಕರೆತರುವುದು ಸವಾಲು ಹೀಗಾಗಿ ಹೈನುಗಾರರು ‘1962’ ಸಂಖ್ಯೆಗೆ ಕರೆ ಮಾಡಿದರೆ ಆಂಬುಲೆನ್ಸ್ ಅವರ ಮನೆ ಬಾಗಿಲಿಗೆ ಕಳಿಸುವ ವ್ಯವಸ್ಥೆಯನ್ನು ರೂಪಿಸಿ, ಪಶು ಸಂಜೀವಿನಿ ಯೋಜನೆ ರೂಪಿಸಲಾಗಿತ್ತು. ಪುಣೆ ಮೂಲದ ಎಜು ಸ್ಪಾರ್ಕ್ ಇಂಟರನ್ಯಾಶನಲ್ ಸಂಸ್ಥೆಯು ಕರೆ ಮತ್ತು ವಾಹನ ನಿರ್ವಹಣೆಯ ಗುತ್ತಿಗೆ ಪಡೆದಿದೆ.
‘ಯೋಜನೆ ಆರಂಭಗೊಂಡಾಗಿನಿಂದಲೂ ಅಂತಹ ಸ್ಪಂದನೆ ಸಿಕ್ಕಿಲ್ಲ. ಹಲವು ಬಾರಿ ಸಹಾಯವಾಣಿ 1962 ಸಂಖ್ಯೆಗೆ ಕರೆ ಮಾಡಿದರೆ ಕರೆಯೇ ತಲುಪುತ್ತಿರಲಿಲ್ಲ ಅಥವಾ ಈ ಮಾರ್ಗ ಬ್ಯೂಸಿ ಎಂಬ ಸೂಚನೆ ಕೇಳಿಸುತ್ತಿತ್ತು. ದಿನಕ್ಕೆ ಹತ್ತಾರು ಬಾರಿ ಕರೆ ಮಾಡಿಯೂ ಸ್ಪಂದನೆ ಸಿಗದೆ ಖಾಸಗಿ ಪಶು ವೈದ್ಯರನ್ನು ಮನೆಗೆ ಕರೆಯಿಸಿ ಹಸುವಿಗೆ ಚಿಕಿತ್ಸೆ ಕೊಡಿಸಬೇಕಾಗಿ ಬಂತು’ ಎಂದು ಸಿದ್ದಾಪುರ ತಾಲ್ಲೂಕು ಕೋಡ್ಸರದ ಮಹಾಬಲೇಶ್ವರ ಹೇಳಿದರು.
‘ಪಶು ಸಂಜೀವಿನಿ ವಾಹನ ಓಡಾಡಿದ್ದನ್ನು ಕಂಡಿದ್ದೇ ಅಪರೂಪ. ಜಾನುವಾರುಗಳ ಚಿಕಿತ್ಸೆಗೆ ಮನೆ ಬಾಗಿಲಿಗೆ ವಾಹನ ಬರುತ್ತದೆ ಎಂಬ ಪ್ರಚಾರ ನಬಿ ಕರೆ ಮಾಡಿದರೆ ಒಂದು ದಿನವೂ ಕರೆ ಸ್ವೀಕರಿಸಲಿಲ್ಲ’ ಎಂದು ತಾಲ್ಲೂಕಿನ ನೈತಿಸಾವರದ ರೂಪೇಶ ನಾಯ್ಕ ಹೇಳಿದರು.
ಪಶು ಸಂಜೀವಿನಿ ಯೋಜನೆ ಕುರಿತು ಇಲಾಖೆಯಿಂದ ವ್ಯಾಪಕ ಪ್ರಚಾರ ಮಾಡಲಾಗಿದೆ. ಆದರೆ ತುರ್ತು ಕರೆಗಳನ್ನು ಸ್ವೀಕರಿಸದ ಬಗ್ಗೆ ಹೈನುಗಾರರಿಂದ ದೂರುಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದ್ದು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆಡಾ.ಮೋಹನ ಕುಮಾರ್ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.