ADVERTISEMENT

ಉತ್ತರ ಕನ್ನಡ | ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಇಲ್ಲದ ಅಧಿಕಾರಿ ಬಾರದ ಮಾಸಾಶನ

ಜವಾಬ್ದಾರಿ ವಹಿಸಿಕೊಳ್ಳಲು ಹಿಂದೇಟು?

ಗಣಪತಿ ಹೆಗಡೆ
Published 13 ಜುಲೈ 2024, 5:30 IST
Last Updated 13 ಜುಲೈ 2024, 5:30 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಇರುವ ಜಿಲ್ಲಾ ರಂಗ ಮಂದಿರ ಕಟ್ಟಡ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಇರುವ ಜಿಲ್ಲಾ ರಂಗ ಮಂದಿರ ಕಟ್ಟಡ   

ಕಾರವಾರ: ಯಕ್ಷಗಾನ, ಜನಪದ ಕಲಾ ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಕಲಾವಿದರನ್ನು ನೀಡಿದ ಜಿಲ್ಲೆಯಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಮುನ್ನಡೆಸಲು ಅಧಿಕಾರಿಗಳು ಮುಂದೆ ಬರುತ್ತಿಲ್ಲ. ಇದರಿಂದ ಹಲವು ತಿಂಗಳುಗಳಿಂದ ಹಿರಿಯ ಕಲಾವಿದರು ಮಾಶಾಸನ ಪಡೆಯಲಾಗದ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ.

102 ಮಂದಿ ಹಿರಿಯ ಕಲಾವಿದರು ಮತ್ತು ನಾಲ್ಕು ಮಂದಿ ವಿಧವೆಯರು (ಮೃತ ಕಲಾವಿದರ ಪತ್ನಿ) ಸದ್ಯ ಜಿಲ್ಲೆಯಲ್ಲಿ ಮಾಶಾಸನ ಪಡೆಯಲು ಅರ್ಹತೆ ಪಡೆದಿದ್ದಾರೆ. ಇಲಾಖೆಯಿಂದ ಕಲಾವಿದರಿಗೆ ₹2 ಸಾವಿರ ಮಾಶಾಸನ ಮತ್ತು ವಿಧವೆಯರಿಗೆ ₹500 ಪಿಂಚಣಿ ಮೊತ್ತವನ್ನು ಮಾಸಿಕವಾಗಿ ನೀಡಲಾಗುತ್ತಿದೆ. ಇಲಾಖೆಯ ಜವಾಬ್ದಾರಿ ನಿರ್ವಹಿಸುವ ಸಹಾಯಕ ನಿರ್ದೇಶಕ ಹುದ್ದೆ ಕಳೆದ ನಾಲ್ಕೈದು ತಿಂಗಳುಗಳಿಂದ ಖಾಲಿ ಇರುವ ಕಾರಣಕ್ಕೆ ಮಾಶಾಸನ ಪಾವತಿಯಾಗದೆ ಸ್ಥಗಿತಗೊಂಡಿದೆ.

‘ಕಲಾಕ್ಷೇತ್ರಗಳಲ್ಲಿ ಹಲವು ವರ್ಷಗಳ ಕಾಲ ದುಡಿದ ಕಲಾವಿದರು ಇಳಿ ವಯಸ್ಸಿನಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ಕಲಾವಿದರಿಗೆ ಸರ್ಕಾರದಿಂದ ಬರುವ ಮಾಶಾಸನ ಸಾಕಷ್ಟು ನೆರವಾಗುತ್ತದೆ. ಜಿಲ್ಲೆಯ ಕಲಾವಿದರಿಗೆ ಕಳೆದ ನಾಲ್ಕು ತಿಂಗಳುಗಳಿಂದಲೂ ಮಾಸಾಶನ ಬಿಡುಗಡೆಯಾಗುತ್ತಿಲ್ಲ ಎಂಬ ದೂರುಗಳಿವೆ. ಪ್ರತಿ ತಿಂಗಳು ಮಾಶಾಸನದ ಬಿಲ್ ನಿರ್ವಹಿಸಿ ಖಜಾನೆ ಇಲಾಖೆಗೆ ಕಳುಹಿಸಿ ಮೊತ್ತ ಬಟವಡೆಯಾಗುವಂತೆ ನೋಡಿಕೊಳ್ಳಬೇಕಿದ್ದ ಅಧಿಕಾರಿಯೇ ಇಲ್ಲದಿರುವುದು ಈ ಸಮಸ್ಯೆಗೆ ಕಾರಣ’ ಎನ್ನುತ್ತಾರೆ ರಂಗಭೂಮಿ ಕಲಾವಿದ ಗಜಾನನ ನಾಯ್ಕ.

ADVERTISEMENT

‘ಮಾಶಾಸನ ದೊರೆಯದೇ ಮೂರು ತಿಂಗಳು ಕಳೆಯಿತು. ಬರುವ ಖರ್ಚುಗಳಿಗೆ ಮಾಶಾಸನ ಅವಲಂಭಿಸಕೊಂಡಿರುವುದರಿಂದ ಆರ್ಥಿಕ ಅಡಚಣೆ ಎದುರಿಸುತ್ತಿದ್ದೇವೆ’ ಎಂದು ಯಕ್ಷಗಾನ ಹಿರಿಯ ಕಲಾವಿದ ಜಿ.ಎಂ.ಭಟ್ಟ ಕೆ.ವಿ ಅಳಲು ತೋಡಿಕೊಂಡರು.

‘ಉತ್ತರ ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಪ್ರಭಾರ ವಹಿಸಿಕೊಳ್ಳಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಇದಕ್ಕೆ ಏನು ಕಾರಣ ಎಂಬುದು ತಿಳಿದಿಲ್ಲ. ಬೇರೆ ಇಲಾಖೆಯ ಅಧಿಕಾರಿಗಳನ್ನು ಪ್ರಭಾರಿಯಾಗಿ ನೇಮಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕದ ಕೆ.ಎಚ್.ಚೆನ್ನೂರ್ ಹೇಳಿದರು.

Cut-off box - ಆದೇಶವಾದರೂ ಬಾರದ ಅಧಿಕಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉತ್ತರ ಕನ್ನಡ ಜಿಲ್ಲಾ ಸಹಾಯಕ ನಿರ್ದೇಶಕ ಹುದ್ದೆಗೆ ರಾಯಚೂರಿನಲ್ಲಿದ್ದ ಮಂಗಳಾ ನಾಯಕ ಎಂಬುವವರನ್ನು ವರ್ಗಾಯಿಸಿ ಜುಲೈ 10 ರಂದು ಆದೇಶವಾಗಿದೆ. ಆದರೆ ಅವರು ಈ ಹುದ್ದೆಗೆ ಬರಲು ಹಿಂದೇಟು ಹಾಕಿದ್ದಾರೆ ಎಂಬುದಾಗಿ ಇಲಾಖೆಯ ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಗೆ ಮುನ್ನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ಇದೇ ಹುದ್ದೆಯ ಪ್ರಭಾರ ವಹಿಸಲಾಗಿತ್ತು. ನೀತಿ ಸಂಹಿತೆ ಜಾರಿಯಾದ ಬಳಿಕ ಗದಗದಿಂದ ಅಧಿಕಾರಿಯೊಬ್ಬರು ನೇಮಕಗೊಂಡಿದ್ದರು. ಚುನಾವಣೆ ಪ್ರಕ್ರಿಯೆ ಮುಗಿದ ತಕ್ಷಣವೇ ಅವರು ಗದಗಕ್ಕೆ ಮರಳಿದ್ದಾರೆ. ಈ ಹಿಂದೆ ಪ್ರಭಾರ ವಹಿಸಿಕೊಂಡಿದ್ದ ಅಧಿಕಾರಿಯೂ ಪುನಃ ಅಧಿಕಾರ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.