ಶಿರಸಿ: ಕಪ್ ಕೇಕ್, ಬಾಕಾಹು ಸ್ಪೆಶಲ್ ಕೇಕ್, ನಿಪ್ಪಟ್ಟು, ಹೋಳಿಗೆ, ಪಂಚಾಮೃತ ಬೂಂದಿ ಲಡ್ಡು, ದೋಸೆ, ಕುರುಕಲು ತಿನಿಸು. ಹೀಗೆ ನೂರಾರು ಬಗೆಯ ತಿನಿಸುಗಳ ಜನರ ಬಾಯಲ್ಲಿ ನೀರು ತರಿಸಿದವು. ಬಾಳೆಕಾಯಿ ಹುಡಿಯಿಂದ ತಯಾರಿಸಲ್ಪಟ್ಟ ಈ ತಿನಿಸುಗಳು ಖಾದ್ಯಪ್ರಿಯರನ್ನು ಹೊಸ ಲೋಕಕ್ಕೆ ಕೊಂಡೊಯ್ದವು.
ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ, ಉತ್ತರ ಕನ್ನಡ ಸಾವಯವ ಕೃಷಿ ಒಕ್ಕೂಟ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಟಿ.ಆರ್.ಸಿ. ಸಭಾಭವನದಲ್ಲಿ ಬುಧವಾರ ನಡೆದ ‘ಬಾ.ಕಾ.ಹು. ಖಾದ್ಯ ವೈವಿಧ್ಯ ಹಾಗೂ ಬಾಳೆಕಾಯಿ ಹುಡಿಯ ಮೌಲ್ಯವರ್ಧಿತ ಕಾರ್ಯಾಗಾರ’ ಹೊಸತನಕ್ಕೆ ನಾಂದಿಯಾಯಿತು. ಹಾಸ್ಯನಟ ಸಿಹಿಕಹಿ ಚಂದ್ರು ಕಾರ್ಯಾಗಾರದಲ್ಲಿ ಪಾಲ್ಗೊಂಡು ಹುರಿದುಂಬಿಸಿದ್ದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 56 ಮಂದಿ ಮಹಿಳೆಯರು 120ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಪರಿಚಯಿಸಿದರು. ಬಾಕಾಹು ಬಳಸಿ ಸಿದ್ಧಪಡಿಸಿದ್ದ ಕುರ್ ಕುರೆ, ಬಿಸ್ಕತ್, ಹಲ್ವಾ, ಮುದ್ದೆ, ಜಿಲೇಬಿ ಗಮನಸೆಳೆದವು.
ಸಾಂಪ್ರದಾಯಿಕ ಆಹಾರ ಪದ್ಧತಿ ಅಗತ್ಯ: ಕಾರ್ಯಾಗಾರ ಉದ್ಘಾಟಿಸಿದ ಕೃಷಿ ವಿಜ್ಞಾನ ಕೇಂದ್ರದ ದಕ್ಷಿಣ ಭಾರತ ವಲಯ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣ್ಯನ್, ‘ಪಾಶ್ಚಾತ್ಯ ಶೈಲಿಯ ಆಹಾರ ಪದ್ಧತಿಗೆ ವಾಲಿರುವ ಜನರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕ ಅದರಲ್ಲೂ ಸಾವಯವ ತರಕಾರಿ, ಹಣ್ಣಿನಿಂದ ತಯಾರಿತ ಆಹಾರ ಪದ್ಧತಿ ಅಳವಡಿಕೆ ಅಗತ್ಯವಾಗಿದೆ’ ಎಂದರು.
‘ಬಾಳೆಯಲ್ಲಿ ಔಷಧೀಯ ಗುಣ ಸಾಕಷ್ಟಿದೆ. ಇದನ್ನು ಅರಿಯುವ ಜತೆಗೆ ಬಾಳೆಯ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಆಹಾರವಾಗಿ ಬಳಸಬೇಕು’ ಎಂದರು.
ನಟ ಸಿಹಿಕಹಿ ಚಂದ್ರು ಮಾತನಾಡಿ, ‘ಬಾಕಾಹು ಖಾದ್ಯ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅದರಿಂದ ಸಿದ್ಧಪಡಿಸಿದ ತಿನಿಸುಗಳಿಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳಬೇಕಿದೆ’ ಎಂದರು.
ಕೃಷಿ ವಿಶ್ವವಿದ್ಯಾಲಯದ ಶ್ರೀಪಾದ ಕುಲಕರ್ಣಿ, ತೋಟಗಾರಿಕಾ ವಿಶ್ವವಿದ್ಯಾಲಯದ ನಿರ್ದೇಶಕ ಲಕ್ಷ್ಮೀನಾರಾಯಣ ಹೆಗಡೆ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಉತ್ತರ ಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ.ಜೆ.ಮಂಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.