ADVERTISEMENT

ಗೋಕರ್ಣ: ಜನಾಕರ್ಷಿಸುವ ಪೆಟ್ಲೆ ಕದನ

ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಗೋಕರ್ಣದಲ್ಲಿ ವಿಶಿಷ್ಟ ಆಚರಣೆ

ರವಿ ಸೂರಿ
Published 25 ಆಗಸ್ಟ್ 2024, 4:44 IST
Last Updated 25 ಆಗಸ್ಟ್ 2024, 4:44 IST
ಗೋಕರ್ಣದಲ್ಲಿ ಭಜನಾ ಸಪ್ತಾಹದ ಅಂಗವಾಗಿ ವೆಂಕಟರಮಣ ದೇವಸ್ಥಾನದ ಭಜನೆ ಮಾಡುತ್ತಿರುವ ಭಕ್ತರು
ಗೋಕರ್ಣದಲ್ಲಿ ಭಜನಾ ಸಪ್ತಾಹದ ಅಂಗವಾಗಿ ವೆಂಕಟರಮಣ ದೇವಸ್ಥಾನದ ಭಜನೆ ಮಾಡುತ್ತಿರುವ ಭಕ್ತರು   

ಗೋಕರ್ಣ: ಧಾರ್ಮಿಕ, ಪ್ರವಾಸಿ ಕ್ಷೇತ್ರ ಗೋಕರ್ಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಅದ್ದೂರಿಯಾಗಿ ನಡೆಯುತ್ತದೆ. ಈ ಹಬ್ಬಕ್ಕೆ ಗ್ರಾಮೀಣ ಸಂಸ್ಕೃತಿಯ ಸಂಕೇತವಾದ ಪೆಟ್ಲೆ ಹೊಡೆಯುವ ಆಚರಣೆ ಮತ್ತಷ್ಟು ಮೆರಗು ನೀಡುತ್ತಿದೆ.‌

ಕೃಷ್ಣ ಜನ್ಮಾಷ್ಟಮಿಯ ದಿನ ಗೋಕರ್ಣದ ಹಲವು ಬೀದಿಗಳಲ್ಲಿ ಪೆಟ್ಲೆ ಹಬ್ಬ ನಡೆಯುತ್ತದೆ. ಬಿದಿರಿನ ಕೋಲನ್ನು ಪೈಪ್‍ ಮಾದರಿಯಲ್ಲಿ ಕತ್ತರಿಸಿ, ಅದಕ್ಕೆ ಒಂದು ಬದಿಯಿಂದ ಕಡ್ಡಿ ಸಹಿತ ಮುಚ್ಚಳ ಅಳವಡಿಸಲಾಗುತ್ತದೆ. ಇದಕ್ಕೆ ಪೆಟ್ಲೆ ಎಂಬ ಹೆಸರಿದೆ. ಪೆಟ್ಲೆಯ ಒಳಗೆ ಜುಮ್ಮನ ಕಾಳನ್ನು ತುಂಬಿ ಎದುರಿಗಿದ್ದವರತ್ತ ಜೋರಾಗಿ ಹೊಡೆಯುವುದು ಪೆಟ್ಲೆ ಹಬ್ಬದ ಆಚರಣೆಯ ಭಾಗ.

ಪೆಟ್ಲೆ ಹಬ್ಬದಲ್ಲಿ ಹೊಡೆತ ನೀಡಿದವರು ಸಂಭ್ರಮಿಸಿದರೆ, ಹೊಡೆತ ತಿಂದವನಿಗೆ ಉರಿಯ ಅನುಭವ ಆಗುತ್ತದೆ. ಪರಸ್ಪರ ಪೆಟ್ಲೆ ಮೂಲಕ ಕದನ ನಡೆಸುವುದು ನೋಡುಗರಿಗೆ ಮನರಂಜನೆ ನೀಡುತ್ತದೆ. ಹೀಗಾಗಿಯೇ ಜನ್ಮಾಷ್ಟಮಿಯ ದಿನ ಪೆಟ್ಲೆ ಕದನಕ್ಕೆ ಗೋಕರ್ಣದ ಜನರು ಕಾಯುತ್ತಿರುತ್ತಾರೆ.

ADVERTISEMENT

‘ಪೆಟ್ಲೆ ಹಬ್ಬ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂತಸ, ಸಡಗರ. ಮೊದಲು ಒಂದೊಂದೆ ಕಾಳನ್ನು ಹಾಕಿ ಹೊಡೆಯುತ್ತಿದ್ದರು. ಕಾಲಕ್ರಮೇಣ ಅದರಲ್ಲಿಯೇ ಬದಲಾವಣೆ ಆಗುತ್ತಾ , ಬಿದಿರಿನ ಬದಲು ಕಬ್ಬಿಣದ ಪೆಟ್ಲೆ ತಯಾರಿಕೆ ಪರಿಚಯವಾಯಿತು. ಬಿದಿರಿನ ಕೋಲಿನ ಮೇಲೆ ಚಿಕ್ಕ ಡಬ್ಬಿ ಜೋಡಿಸಿಕೊಂಡು ಅದರಲ್ಲಿ ನೂರಾರು ಜುಮ್ಮನ ಕಾಳುಗಳನ್ನು ಹಾಕಿ ಹೊಡೆಯುವ ಪದ್ದತಿ ಪ್ರಾರಂಭವಾಯಿತು. ಪೆಟ್ಲೆಯಿಂದ ಹೊರಹೊಮ್ಮುವ ಶಬ್ದ ಮತ್ತು ಇಬ್ಬರು ಮೋಜಿಗೆ ಬಡಿದಾಡುವನ್ನು ನೋಡುವುದು ರೋಮಾಂಚನ ಉಂಟುಮಾಡುತ್ತದೆ’ ಎನ್ನುತ್ತಾರೆ ಪೆಟ್ಲೆ ತಯಾರಕ ಕೃಷ್ಣ ಗಿರಿ.

‘ಈಚಿನ ವರ್ಷಗಳಲ್ಲಿ ಟಿವಿ, ಮೊಬೈಲ್ ಗೀಳಿನಿಂದ ಮಕ್ಕಳ ನಿರಾಸಕ್ತಿಯೂ ಹಬ್ಬದ ಮೆರುಗು ಮಾಯವಾಗಲು ಕಾರಣವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ವರ್ಷಕ್ಕೊಮ್ಮೆ ಬಿದಿರಿನ ಅಂಡೆಯಲ್ಲಿ ಜುಮ್ಮನಕಾಳನ್ನು ಹಾಕಿ, ರಭಸದಿಂದ ಆಕಾಶದೆತ್ತರಕ್ಕೆ ಹೊರಹಾಕುವುದು ವಾತಾವರಣದ ಶುದ್ಧೀಕರಣಕ್ಕೂ ಸಹಾಯ. ಜುಮ್ಮನಕಾಳಿನ ಪದಾರ್ಥ ಸೇವಿಸುವುದೂ ಉತ್ತಮ ಆರೋಗ್ಯಕ್ಕೆ ಪೂರಕ. ಅದಕ್ಕಾಗಿಯೇ ವರ್ಷಕ್ಕೊಮ್ಮೆ ನಮ್ಮ ಪೂರ್ವಜರು ಪೆಟ್ಲೆ ಹಬ್ಬವನ್ನು ತಪ್ಪದೇ ಆಚರಿಸುತ್ತಾ ಬಂದಿದ್ದಾರೆ’ ಎಂದು ಹಿರಿಯರಾದ 85 ವರ್ಷದ ಗಣಪತಿ ಗೋಪಿ ಹೇಳುತ್ತಾರೆ.

ಭಜನಾ ಸಪ್ತಾಹ:

ಪೆಟ್ಲೆ ಹಬ್ಬಕ್ಕೆ ಪೂರಕವಾಗಿ ಇಲ್ಲಿಯ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದಲ್ಲಿ ಭಜನಾ ಸಪ್ತಾಹ ಆಚರಿಸಲಾಗುತ್ತದೆ. ಶತಮಾನದ ಇತಿಹಾಸವಿರುವ ಈ ಭಜನಾ ಸಪ್ತಾಹ, ಶ್ರಾವಣ ಕೃಷ್ಣ ಪಾಡ್ಯದ ತಿಥಿಯಿಂದ ಪ್ರ್ರಾರಂಭವಾಗಿ ನಿರಂತರವಾಗಿ ನಡೆದು ಕೃಷ್ಣಾಷ್ಟಮಿಯ ದಿನದಂದು ಮುಕ್ತಾಯಗೊಳ್ಳುತ್ತದೆ. ಈ ಭಜನಾ ಸಪ್ತಾಹದಲ್ಲಿ ಎಲ್ಲಾ ಸಮುದಾಯದವರೂ ಪಾಲ್ಗೊಳ್ಳುತ್ತಾರೆ.

ಗೋಕರ್ಣದಲ್ಲಿ ಭಜನಾ ಸಪ್ತಾಹದ ಅಂಗವಾಗಿ ವೆಂಕಟರಮಣ ದೇವಸ್ಥಾನದ ಭಜನೆ ಮಾಡುತ್ತಿರುವ ಭಕ್ತರು.
ಪೆಟ್ಲೆ ಹಬ್ಬದಲ್ಲಿ ಬಳಸುವ ಬಿದಿರಿನ ಪೆಟ್ಲೆ ಮತ್ತು ಜುಮ್ಮನಕಾಳು.  
ಗೋಕರ್ಣದಲ್ಲಿ ಪೆಟ್ಲೆ ಹಬ್ಬದಲ್ಲಿ ತಲ್ಲೀನರಾದ ಮಕ್ಕಳು ( ಸಂಗ್ರಹ ಚಿತ್ರ)
ಗೋಕರ್ಣದಲ್ಲಿ ಪೆಟ್ಲೆ ಹಬ್ಬದಲ್ಲಿ ತಲ್ಲೀನರಾದ ಮಕ್ಕಳು ( ಸಂಗ್ರಹ ಚಿತ್ರ)
ಪೆಟ್ಲೆ ತಯಾರಿಕೆಗೆ ಬೇಕಾಗುವ ಬಿದಿರು ಮತ್ತು ಜುಮ್ಮನಕಾಳಿನ ಅಭಾವ ಪೆಟ್ಲೆ ತಯಾರಕರ ನಿರಾಸಕ್ತಿ ಈಚಿನ ವರ್ಷಗಳಲ್ಲಿ ಹಬ್ಬದ ಮೆರಗು ಮಾಯವಾಗಲು ಕಾರಣವಾಗಿದೆ
–ವೆಂಕಟರಮಣ ಗೌಡ ಸ್ಥಳೀಯ ರೈತ

ಠಾಣೆ ಮೆಟ್ಟಿಲೇರಿದ್ದ ಪೆಟ್ಲೆ ಕದನ ‘

ಕೃಷ್ಣ ಜನ್ಮಾಷ್ಟಮಿಯಂದು ಪೆಟ್ಲೆ ಬಳಸಿ ನಡೆಯುವ ಕದನ ಕೆಲವೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಉದಾಹರಣೆಯೂ ಇದೆ. ಪೆಟ್ಲೆ ಬಳಸಿ ಆಕಾಶದತ್ತ ಮುಖಮಾಡಿ ಜುಮ್ಮನಕಾಳನ್ನು ಹೊಡೆಯುತ್ತಿದ್ದರು. ಕಾಲಕ್ರಮೇಣ ಮನಷ್ಯರನ್ನು ಗುರಿಯಾಗಿಸಿ ಪೆಟ್ಲೆ ಉಪಯೋಗಿಸಲಾಯಿತು. ಮನುಷ್ಯರ ಮೇಲೆ ಪ್ರಯೋಗ ಮಾಡಲು ಹೋಗಿ ಗಂಭೀರ ಗಾಯವಾದ ಘಟನೆಯೂ ಕೆಲ ವರ್ಷಗಳ ಹಿಂದೆ ನಡೆದಿತ್ತು. ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆದ ಅನೇಕ ಘಟನೆಯೂ ನಡೆದಿದೆ’ ಎನ್ನುತ್ತಾರೆ ಗೋಕರ್ಣದ ಕೆಲ ಹಿರಿಯ ನಾಗರಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.