ADVERTISEMENT

ಉತ್ತರ ಕನ್ನಡ | ಪೆಟ್ರೋಲ್ ದುಬಾರಿ: ಗೋವಾಕ್ಕೆ ಸವಾರಿ

ಪ್ರತಿ ಲೀ ಪೆಟ್ರೋಲ್ ಬೆಲೆ ₹9.40ರಷ್ಟು ವ್ಯತ್ಯಾಸ:ಕಾರವಾರದಲ್ಲಿ ವಹಿವಾಟು ಕುಸಿತ

ಗಣಪತಿ ಹೆಗಡೆ
Published 18 ಜೂನ್ 2024, 5:32 IST
Last Updated 18 ಜೂನ್ 2024, 5:32 IST
ಕಾರವಾರದ ಪೆಟ್ರೋಲ್ ಬಂಕ್‍ವೊಂದರಲ್ಲಿ ಬೆರಳೆಣಿಕೆಯಷ್ಟು ಗ್ರಾಹಕರು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದರು
ಕಾರವಾರದ ಪೆಟ್ರೋಲ್ ಬಂಕ್‍ವೊಂದರಲ್ಲಿ ಬೆರಳೆಣಿಕೆಯಷ್ಟು ಗ್ರಾಹಕರು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದರು   

ಕಾರವಾರ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಳ ಮಾಡಿದ ಬಳಿಕ ನಗರದ ಪೆಟ್ರೋಲ್ ಬಂಕ್‍ಗಳಲ್ಲಿ ವಹಿವಾಟು ಕುಸಿತ ಕಾಣತೊಡಗಿದೆ. ಪ್ರತಿ ಲೀಟರ್‌ಗೆ ಸರಾಸರಿ ₹9.40ರಷ್ಟು ಕಡಿಮೆ ದರ ಹೊಂದಿರುವ ಕಾರಣಕ್ಕೆ ನೆರೆಯ ಗೋವಾ ಗಡಿಭಾಗದಲ್ಲಿ ವಹಿವಾಟು ಜಿಗಿತ ಕಂಡಿದೆ.

ಸದ್ಯ ಕಾರವಾರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‍‍ನ ಚಿಲ್ಲರೆ ಮಾರಾಟ ಬೆಲೆ ₹104.70, ಡೀಸೆಲ್ ಬೆಲೆ ₹90.57 ಇದೆ. ಇಲ್ಲಿಂದ ಕೇವಲ 12 ಕಿ.ಮೀ ದೂರದಲ್ಲಿರುವ, ನೆರೆಯ ಗೋವಾ ರಾಜ್ಯದ ಗಡಿಭಾಗ ಪೊಳೆಮ್‍ನ ಪೆಟ್ರೋಲ್ ಬಂಕ್‍ಗಳಲ್ಲಿ ಪೆಟ್ರೋಲ್ ದರವು ಪ್ರತಿ ಲೀ.ಗೆ ₹95.30, ಡೀಸೆಲ್ ಬೆಲೆ ₹88.20 ಇದೆ.

ಕಾರವಾರಕ್ಕಿಂತ ಗೋವಾದ ಪೊಳೆಮ್‍ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹9.40 ಮತ್ತು ಡೀಸೆಲ್ ದರ ₹2.37 ಕಡಿಮೆ ಇದೆ. ಹೀಗಾಗಿ ಅಲ್ಲಿ ಕಾರವಾರಕ್ಕಿಂತ ಹೆಚ್ಚು ವಹಿವಾಟು ನಡೆಯತೊಡಗಿದೆ.

ADVERTISEMENT

ನಗರದಲ್ಲಿ ನಾಲ್ಕು ಪೆಟ್ರೋಲ್ ಬಂಕ್‍ಗಳಿದ್ದು, ನಿತ್ಯ ಸರಾಸರಿ 22 ಸಾವಿರ ಲೀಟರಗಿಂತಲೂ ಹೆಚ್ಚು ಪೆಟ್ರೋಲ್, ಡೀಸೆಲ್ ಮಾರಾಟವಾಗುತ್ತಿದ್ದವು. ರಾಜ್ಯದಲ್ಲಿ ತೈಲ ಬೆಲೆ ಪರಿಷ್ಕರಿಸಿದ ಬಳಿಕ ಮಾರಾಟ ಪ್ರಮಾಣದಲ್ಲಿ ತೀವ್ರ ಕುಸಿತ ಕಾಣುತ್ತಿದೆ. ಇದು ಪೆಟ್ರೋಲ್ ಬಂಕ್ ಮಾಲೀಕರನ್ನು ಚಿಂತೆಗೆ ತಳ್ಳಿದೆ.

‘ರಾಜ್ಯ ಸರ್ಕಾರವು ತೈಲ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಏಕಾಏಕಿ ₹3 ಹೆಚ್ಚಳವಾಗಿದೆ. ರಾಜ್ಯದ ಗಡಿಭಾಗದಲ್ಲಿರುವ ಕಾರವಾರದಲ್ಲಿ ಉಳಿದ ಕಡೆಗಿಂತಲೂ ದರ ಹೆಚ್ಚಿತ್ತು. ಈಗ ಇನ್ನಷ್ಟು ದರ ಏರಿಕೆಯಾಗಿರುವುದರಿಂದ ಕಡಿಮೆ ಬೆಲೆ ಹೊಂದಿರುವ ಗೋವಾದಲ್ಲಿ ಪೆಟ್ರೋಲ್ ಖರೀದಿ ಅನಿವಾರ್ಯವಾಗಿದೆ’ ಎನ್ನುತ್ತಾರೆ ಕೋಡಿಬಾಗದ ದತ್ತಾರಾಮ ಮಾಂಜ್ರೇಕರ.

‘ಕಾರವಾರಕ್ಕೂ, ಗೋವಾದಲ್ಲಿನ ದರಕ್ಕೂ ಸರಾಸರಿ ₹9ಕ್ಕಿಂತ ಹೆಚ್ಚು ವ್ಯತ್ಯಾಸವಿದೆ. ಕಾರುಗಳ ಟ್ಯಾಂಕ್‍ಗೆ ಭರ್ತಿ ಇಂಧನ ತುಂಬಿಸಿದರೆ ಸರಾಸರಿ ₹350ರಿಂದ ₹400ರಷ್ಟು ಉಳಿತಾಯವಾಗುತ್ತಿದೆ. ದ್ವಿಚಕ್ರ ವಾಹನಕ್ಕೆ ಇಂಧನ ತುಂಬಿಸಿದರೆ ಕನಿಷ್ಠ ₹150 ಉಳಿತಾಯವಾಗುತ್ತಿದೆ. ಹೀಗಾಗಿ ಪೊಳೆಮ್‍ನತ್ತ ಕಾರವಾರದಿಂದ ಹೆಚ್ಚು ವಾಹನ ಸಂಚಾರ ಶುರುವಾಗಿದೆ’ ಎನ್ನುತ್ತಾರೆ ಸದಾಶಿವಗಡ ಉದಯ ಪಾವಸ್ಕರ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಸಲು ರಾಜ್ಯ ಸರ್ಕಾರಕ್ಕೆ ಒತ್ತಡ ಹೇರುವಂತೆ ಪೆಟ್ರೋಲ್ ಡೀಸೆಲ್ ಬಂಕ್ ಮಾಲೀಕರ ಅಸೋಸಿಯೇಶನ್ ಬಳಿ ಚರ್ಚಿಸಲು ತೀರ್ಮಾನಿಸಿದ್ದೇವೆ
ಕೃಷ್ಣ ಕೇಳಸ್ಕರ್ ಪೆಟ್ರೋಲ್ ಬಂಕ್ ಮಾಲೀಕ

ಶೇ.25ರಷ್ಟು ವಹಿವಾಟು ಕುಸಿತ ‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದ್ದರಿಂದ ರಾಜ್ಯದಲ್ಲಿ ಅದರಲ್ಲಿಯೂ ಗಡಿಭಾಗ ಕಾರವಾರದಲ್ಲಿ ದರ ಏರಿಕೆಯಾಗಿದೆ. ರಾಜ್ಯದೊಂದಿಗೆ ಗಡಿ ಹಂಚಿಕೊಂಡ ಗೋವಾದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಮೊದಲೇ ಕಡಿಮೆ ಇತ್ತು. ಈಗ ದರ ಅಂತರ ಇನ್ನಷ್ಟು ಹೆಚ್ಚಿದೆ. ಸಹಜವಾಗಿ ಗ್ರಾಹಕರು ಗೋವಾದ ಬಂಕ್‍ಗಳಲ್ಲಿ ಪೆಟ್ರೋಲ್ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಕಾರವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಹಿವಾಟಿನಲ್ಲಿ ಶೇ.25ರಷ್ಟು ಕುಸಿತವಾಗಿದೆ. ಇದು ಬಂಕ್‍ಗಳಿಗೆ ಆರ್ಥಿಕವಾಗಿಯೂ ಹೊಡೆತ ಬಿದ್ದಂತೆ’ ಎನ್ನುತ್ತಾರೆ ಪೆಟ್ರೋಲ್ ಬಂಕ್ ಮಾಲೀಕ ಕೃಷ್ಣ ಕೇಳಸ್ಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.