ADVERTISEMENT

ಕಾರವಾರ: ‘ಕಪ್ಪೆ ಬೊಂಡಾಸ್’ ಬೇಟೆಗೆ ಪ್ಲಾಸ್ಟಿಕ್ ದಾಸ್ತಾನು

ಸಮುದ್ರ ಮಾಲಿನ್ಯ ತಡೆ ಸಚಿವರ ಹೇಳಿಕೆಗೆ ಸೀಮಿತ: ಮುಂದುವರಿದ ಅವೈಜ್ಞಾನಿಕ ಪದ್ಧತಿ

ಗಣಪತಿ ಹೆಗಡೆ
Published 31 ಅಕ್ಟೋಬರ್ 2024, 6:15 IST
Last Updated 31 ಅಕ್ಟೋಬರ್ 2024, 6:15 IST
ಕಾರವಾರದ ಲಂಡನ್ ಸೇತುವೆ ಸಮೀಪ ಅವೈಜ್ಞಾನಿಕ ಪದ್ಧತಿಯಲ್ಲಿ ಮೀನುಗಾರಿಕೆ ನಡೆಸಲು ಚೀಲಗಳಲ್ಲಿ ಪ್ಲಾಸ್ಟಿಕ್ ಬಾಟಲಿ ರಾಶಿ ತುಂಬಿರುವುದು
ಕಾರವಾರದ ಲಂಡನ್ ಸೇತುವೆ ಸಮೀಪ ಅವೈಜ್ಞಾನಿಕ ಪದ್ಧತಿಯಲ್ಲಿ ಮೀನುಗಾರಿಕೆ ನಡೆಸಲು ಚೀಲಗಳಲ್ಲಿ ಪ್ಲಾಸ್ಟಿಕ್ ಬಾಟಲಿ ರಾಶಿ ತುಂಬಿರುವುದು   

ಕಾರವಾರ: ಅರಬ್ಬಿ ಸಮುದ್ರದಲ್ಲಿ ಕೃತಕ ಗುಡ್ಡ ನಿರ್ಮಿಸಿ ‘ಕಪ್ಪೆ ಬೊಂಡಾಸ್’ ಬೇಟೆಯಾಡುವ ತಮಿಳುನಾಡು ಮೂಲದ ಮೀನುಗಾರರ ತಂಡ ಜಿಲ್ಲೆಗೆ ಆಗಮಿಸಿದೆ. ಹೀಗಾಗಿ ಕಡಲತೀರದಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲಿಗಳ ರಾಶಿ ದಾಸ್ತಾನು ಆಗುತ್ತಿದೆ.

‘ಸಮುದ್ರ ಮಾಲಿನ್ಯ ತಡೆಗಟ್ಟಲು ಕೋಟ್ಯಂತರ ಮೊತ್ತದ ಯೋಜನೆ ರೂಪಿಸಲಾಗುತ್ತಿದೆ. ಕಡಲತೀರ ಸ್ವಚ್ಛಗೊಳಿಸುವ ಜತೆಗೆ ಸಮುದ್ರಕ್ಕೆ ಪ್ಲಾಸ್ಟಿಕ್ ಸೇರುವುದನ್ನು ತಡೆಗಟ್ಟಲಾಗುವುದು’ ಎಂದು ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯ ಹೇಳುತ್ತಿದ್ದಾರೆ. ಅವರದೇ ಜಿಲ್ಲೆಯಲ್ಲೇ ಸಮುದ್ರಕ್ಕೆ ಕ್ವಿಂಟಲ್‍ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸುರಿಯಲಾಗುತ್ತಿದ್ದರೂ ಕ್ರಮವಾಗುತ್ತಿಲ್ಲ ಎಂದು ಸ್ಥಳೀಯ ಮೀನುಗಾರರೇ ದೂರುತ್ತಿದ್ದಾರೆ.

ಇಲ್ಲಿನ ಲಂಡನ್ ಸೇತುವೆ ಸಮೀಪದಲ್ಲಿನ ಕಡಲತೀರ, ಅಲಿಗದ್ದಾ ಕಡಲತೀರದಲ್ಲಿ ಕಳೆದ ಕೆಲವು ದಿನಗಳಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ದಾಸ್ತಾನು ಮಾಡುವ ಕೆಲಸ ನಡೆದಿದೆ. ಹೀಗೆ ದಾಸ್ತಾನು ಮಾಡಿದ್ದ ಬಾಟಲಿಗಳನ್ನು ನಸುಕಿನ ಜಾವ ದೋಣಿಯಲ್ಲಿ ಕೊಂಡೊಯ್ಯುವ ತಮಿಳುನಾಡಿನಿಂದ ಬಂದ ಮೀನುಗಾರರು ಆಳಸಮುದ್ರದಲ್ಲಿ ಕೃತಕ ಗುಡ್ಡ ಸೃಷ್ಟಿಗೆ ಬಳಸುತ್ತಿದ್ದಾರೆ. ಅವರಿಗೆ ಕೆಲ ಸ್ಥಳೀಯ ಮೀನುಗಾರರು ಬೆಂಗಾವಲಾಗಿ ನಿಂತಿದ್ದಾರೆ ಎಂಬುದು ಸ್ಥಳೀಯ ಮೀನುಗಾರರ ಆರೋಪ.

ADVERTISEMENT

‘ಅಕ್ಟೋಬರ್ ಬಳಿಕ ಕಾರವಾರ ಸೇರಿದಂತೆ ಜಿಲ್ಲೆಯ ವಿವಿಧ ಮೀನುಗಾರಿಕೆ ಚಟುವಟಿಕೆ ನಡೆಯುವ ಪ್ರದೇಶಕ್ಕೆ ಬರುವ ತಮಿಳುನಾಡು ರಾಜ್ಯದ ವಿವಿಧೆಡೆಯ ಮೀನುಗಾರರು ಗುಜರಿಯವರಿಂದ ರಾಶಿಗಟ್ಟಲೆ ಪ್ಲಾಸ್ಟಿಕ್ ಬಾಟಲಿ ಖರೀದಿಸುತ್ತಾರೆ. ಅವುಗಳನ್ನು ಬಲೆ ಅಥವಾ ಬೀಲಗಳಲ್ಲಿ ಕಟ್ಟಿ, ಸಮುದ್ರ ತೀರದಿಂದ 10 ರಿಂದ 15 ನಾಟಿಕಲ್ ಮೈಲು ದೂರದಲ್ಲಿ ಅವುಗಳಿಂದ ಕೃತಕ ಗುಡ್ಡ ರಚಿಸುತ್ತಾರೆ. ಹೀಗೆ ಗುಡ್ಡ ರಚಿಸಲು ಲೇಡೀಸ್ ಬೀಚ್‍ನಿಂದ ನೂರಾರು ಚೀಲ ಮರಳನ್ನೂ ಸಾಗಿಸುತ್ತಾರೆ. ಗಾಳಿಮರದ ಟೊಂಗೆಯನ್ನೂ ಈ ಕೃತ್ಯಕ್ಕೆ ಹೊತ್ತೊಯ್ಯುತ್ತಾರೆ’ ಎನ್ನುತ್ತಾರೆ ಮೀನುಗಾರರೊಬ್ಬರು.

‘ಸೃಷ್ಟಿಸಿದ ಕೃತಕ ಗುಡ್ಡದ ಬಳಿ ಜಿಪಿಎಸ್ ಕೇಂದ್ರ ಗುರುತಿಸಿಟ್ಟು ದಡಕ್ಕೆ ಮರಳುವ ಅವರು, ‘10–15 ದಿನದ ಬಳಿಕ ಗುಡ್ಡ ಸೃಷ್ಟಿಯಾದ ಜಾಗಕ್ಕೆ ತೆರಳಿ ರೇಡಿಯಂ ಗಾಳದ ಮೂಲಕ ಕಪ್ಪೆ ಬೊಂಡಾಸ್ ಹಿಡಿದು ತರುತ್ತಾರೆ. ಒಂದೇ ಬಾರಿಗೆ ಹೇರಳ ಪ್ರಮಾಣದಲ್ಲಿ ಕಪ್ಪೆ ಬೊಂಡಾಸ್ ಸಿಗುತ್ತದೆ’ ಎಂದೂ ವಿವರಿಸಿದರು.

ಕೃತಕ ಗುಡ್ಡ ಸೃಷ್ಟಿಸುವ ಸಲುವಾಗಿ ಕಡಲತೀರಗಳಲ್ಲಿ ಪ್ಲಾಸ್ಟಿಕ್ ಬಾಟಲಿ ದಾಸ್ತಾನು ಮಾಡಿರುವ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುತ್ತೇವೆ
ಪ್ರತೀಕ್ ಶೆಟ್ಟಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ

ಸಮುದ್ರ ಮಾಲಿನ್ಯಕ್ಕೆ ಕಾರಣ

‘ಸಮುದ್ರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಡುವುದರಿಂದ ಜಲಚರಗಳ ಉಸಿರಾಟಕ್ಕೆ ಸಮಸ್ಯೆ ಆಗುತ್ತದೆ. ನೀರು ಮಾಲಿನ್ಯಕ್ಕೂ ಕಾರಣವಾಗುತ್ತದೆ. ಕೃತಕ ಗುಡ್ಡ ಸೃಷ್ಟಿಗೆ ಬಳಸಿದ್ದ ಬಾಟಿಯನ್ನು ಕಡಿಮೆ ಅವಧಿಯಲ್ಲಿ ದಡಕ್ಕೆ ವಾಪಸ್ ತಂದರೆ ಅಷ್ಟೇನೂ ಹಾನಿ ಆಗದು. ಆದರೆ ಅದನ್ನು ದಡಕ್ಕೆ ತರದೆ ಅಲ್ಲಿಯೇ ಬಿಟ್ಟು ಬರಲಾಗುತ್ತದೆ. ಇದು ಸಮುದ್ರ ಮಾಲಿನ್ಯಕ್ಕೆ ಗಂಭೀರ ಕಾರಣವಾಗುತ್ತಿದೆ. ಕೃತಕ ಗುಡ್ಡ ಸೃಷ್ಟಿಸಿ ಕಪ್ಪೆ ಬೊಂಡಾಸ್ ಹಿಡಿಯುವುದರಿಂದ ಅವುಗಳ ಸಂತತಿಯ ಮೇಲೂ ಅಡ್ಡ ಪರಿಣಾಮ ಬೀರಬಹುದು’ ಎಂದು ಕಡಲಜೀವಶಾಸ್ತ್ರಜ್ಞರೊಬ್ಬರು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.