ಕಾರವಾರ: ಒಂದೆಡೆ ಪ್ಲಾಸ್ಟಿಕ್ ನಿಷೇಧದ ಚರ್ಚೆಯಾಗುತ್ತಿದ್ದರೆ, ಮತ್ತೊಂದೆಡೆ ಅದರ ಬಳಕೆ ಹೆಚ್ಚುತ್ತಿದೆ. ಇದರ ಪರಿಣಾಮ ನದಿ ತೀರಗಳಲ್ಲಿ, ಸಮುದ್ರ ದಂಡೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಅಪಾರ ಪ್ರಮಾಣದಲ್ಲಿ ಕಂಡುಬರುತ್ತಿದೆ. ಕುಮಟಾ ತಾಲ್ಲೂಕಿನಲ್ಲಿ ಅಘನಾಶಿನಿ ನದಿಯು ಅರಬ್ಬಿ ಸಮುದ್ರ ಸೇರುವ ಜಾಗದಲ್ಲೂ ಈ ಸಮಸ್ಯೆಯಿದೆ.
ಅಘನಾಶಿನಿಯ ಸುತ್ತಮುತ್ತ ಇರುವ ಹಲವು ಗ್ರಾಮಗಳಲ್ಲಿ ತ್ಯಾಜ್ಯವನ್ನು ನೆಲಭರ್ತಿ ಮಾಡಲು (ಲ್ಯಾಂಡ್ ಫಿಲ್ಲಿಂಗ್) ಸೂಕ್ತವಾದ ಸ್ಥಳವಿಲ್ಲ. ಹಾಗಾಗಿ ಊರಿನಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಕಲ್ಲುಕ್ವಾರಿ ಮತ್ತು ನೈಸರ್ಗಿಕ ಹೊಂಡಗಳಲ್ಲಿ ಸುರಿಯಲಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
‘ಕಾಗಾಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಂಡವೊಂದರಲ್ಲಿ ಬೇಸಿಗೆ ಕಾಲದಲ್ಲಿ ಪ್ಲಾಸ್ಟಿಕ್ ಬಾಟಲಿ,ಹಲವು ಅಂಗಡಿಗಳ ತ್ಯಾಜ್ಯ, ಪ್ಲಾಸ್ಟಿಕ್ ಕೈಚೀಲಗಳು, ಪೊಟ್ಟಣಗಳು ಮುಂತಾದ ತ್ಯಾಜ್ಯಗಳನ್ನು ಭರ್ತಿ ಮಾಡಲಾಗುತ್ತದೆ. ಅದರ ಸಮೀಪದಲ್ಲೇ ಹಳ್ಳವೊಂದು ಹರಿಯುತ್ತದೆ. ಮಳೆಗಾಲದಲ್ಲಿ ಅದರ ನೀರಿನೊಂದಿಗೆ ತ್ಯಾಜ್ಯವೂ ಸೇರಿಕೊಂಡು ಅಘನಾಶಿನಿಗೆ ಹರಿದು ಸಮುದ್ರಕ್ಕೆ ಸೇರುತ್ತದೆ. ಸಮುದ್ರದ ಅಲೆಗಳಲ್ಲಿ ಅವು ಮತ್ತೆ ಕಿನಾರೆಗೆ ಬಂದು ಬೀಳುತ್ತವೆ’ ಎಂದು ಗ್ರಾಮಸ್ಥರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
‘ಮದ್ಯದ ಖಾಲಿ ಪ್ಯಾಕೆಟ್‌ಗಳು ಕೂಡ ಇದರಲ್ಲಿ ಸೇರಿರುತ್ತವೆ. ಇವುಗಳ ವಿಲೇವಾರಿ ಬಗ್ಗೆ ಅಬಕಾರಿ ಇಲಾಖೆಯವರು ಗಮನ ಹರಿಸುವುದೇ ಇಲ್ಲ. ಈ ಸಮಸ್ಯೆ ಇಡೀ ಜಿಲ್ಲೆಯಲ್ಲಿದೆ. ಕಾಗಾಲ್, ಬಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇಂತಹ 10ಕ್ಕೂ ಅಧಿಕ ತ್ಯಾಜ್ಯದ ರಾಶಿಗಳಿವೆ’ ಎಂದು ಅವರು ದೂರುತ್ತಾರೆ.
‘ಅತ್ಯಂತ ಅಪಾಯಕಾರಿ’:
ಸಮುದ್ರದಲ್ಲಿ ಎಲ್ಲೋ ಎಸೆದ ತ್ಯಾಜ್ಯ ಮತ್ತೆಲ್ಲೋ ದಡಕ್ಕೆ ಬಂದು ಬೀಳುತ್ತದೆ. ಇದರೊಂದಿಗೆ ಪ್ಲಾಸ್ಟಿಕ್ ನೊರೆಯೂ ಸೇರಿಕೊಳ್ಳುತ್ತದೆ. ಅತಿ ಸೂಕ್ಷ್ಮ ಕಣಗಳು (ಮೈಕ್ರೊ ಕಣ) ನೀರು, ಮಣ್ಣಿನೊಂದಿಗೆ ಸೇರಿಕೊಳ್ಳುತ್ತವೆ. ಇದು ಅತ್ಯಂತ ಅಪಾಯಕಾರಿ ಎನ್ನುತ್ತಾರೆ ಕುಮಟಾದ ಪರಿಸರ ವಿಜ್ಞಾನಿ ಡಾ.ಪ್ರಕಾಶ ಮೇಸ್ತ.
ಮೀನಿನ ಬಲೆಗಳು, ಪ್ಲಾಸ್ಟಿಕ್ ಉತ್ಪನ್ನಗಳ ವಿಲೇವಾರಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಬೇಕು. ಇಲ್ಲದಿದ್ದರೆ ಆಹಾರ, ಪರಿಸರ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಆಗುತ್ತದೆ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.