ಯಾಣ: ಅರಣ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಪ್ರವಾಸಿಗರು ಅಣಕಿಸಿ, ವ್ಯಂಗ್ಯ ಮಾಡಿದ ಬಗ್ಗೆ 'ಪಶ್ಚಿಮ ಘಟ್ಟಗಳು' ಟ್ವಿಟರ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಪರಿಸರ ಪ್ರಿಯರು ಕಿಡಿಗೇಡಿ ಪ್ರವಾಸಿಗರ ವಿರುದ್ಧ ಆಕ್ರೋಶಗೊಂಡಿದ್ದಾರೆ.
ವಿದ್ಯಾವಂತರಂತೆ ಕಂಡುಬರುತ್ತಿದ್ದ ಪ್ರವಾಸಿಗರು 'ನೋಡಪ್ಪ ಮೋದಿ ಫ್ಯಾನು ಸ್ವಚ್ಛ ಭಾರತ ಮಾಡ್ತಿದ್ದಾರೆ' ಎಂದು ಸಿಬ್ಬಂದಿಯನ್ನು ಅಣಕಿಸಿ, ಅವರ ಮುಂದೆಯೇ ಪ್ಲಾಸ್ಟಿಕ್ ಪೊಟ್ಟಣ ಎಸೆದು ಮುಂದಕ್ಕೆ ಹೋಗಿದ್ದಾಗಿ 'ಪಶ್ಚಿಮ ಘಟ್ಟಗಳು' ಟ್ವೀಟರ್ ಖಾತೆಯಲ್ಲಿ ಪ್ರತ್ಯಕ್ಷ ವರದಿಯನ್ನು ಪ್ರಕಟಿಸಲಾಗಿದೆ.
ಯಾಣ ಗ್ರಾಮ ಅರಣ್ಯ ಸಂಘ ಮತ್ತು ರಾಜ್ಯ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಅರಣ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛತೆ ಕಾರ್ಯಕ್ರಮದ ಭಾಗವಾಗಿ ಶೈಲ ಎಂಬುವವರು ಕಬ್ಬಿಣದ ಸರಳಿನಿಂದ ಪ್ಲಾಸ್ಟಿಕ್ ಸಂಗ್ರಹ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಲಾಗಿದೆ.
ಪಶ್ಚಿಮ ಘಟ್ಟಗಳು ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಮಾಹಿತಿಯಿದು.
ನಾನು ಮೊನ್ನೆ ಯಾಣಕ್ಕೆ ಹೋಗಿದ್ದಾಗ ಅಲ್ಲಿ ಪ್ರವಾಸಿಗರು ಓಡಾಡುವ ದಾರಿಯಲ್ಲಿ ಈ ಮಹಿಳೆ ಊರುಗೋಲಿನಂತಹ ಒಂದು ದೊಡ್ಡ ಕಬ್ಬಿಣದ ಸರಳನ್ನ ಹಿಡಿದುಕೊಂಡು ದಾರಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಅನ್ನು ಆ ಸರಳಿನಿಂದ ಚುಚ್ಚಿ ಸಂಗ್ರಹಿಸುತ್ತಿದ್ದರು. ನಾನು ಇವರು ಮಾಡುತ್ತಿದ್ದ ಕೆಲಸವನ್ನ ನೋಡುತ್ತಾ ಅವರನ್ನೆ ಹಿಂಬಾಲಿಸುತ್ತಿದ್ದೆ.
ವಿದ್ಯಾವಂತರಂತೆ ಕಾಣುತ್ತಿದ್ದ ಒಂದು ಪ್ರವಾಸಿಗರ ಗುಂಪು ಈ ಮಹಿಳೆಯನ್ನ ನೋಡಿ "ನೋಡಪ್ಪ ಮೋದಿ ಫ್ಯಾನು ಸ್ವಚ್ಛ ಭಾರತ ಮಾಡ್ತಿದ್ದಾರೆ" ಅಂತ ಹೇಳಿಕೊಂಡು ಮುಂದೆ ಹೋದರು. ಅದೇ ರೀತಿ ಮತ್ತೊಂದು ಗುಂಪು ಈ ಮಹಿಳೆ ಮುಂದೆಯೇ ಪ್ಲಾಸ್ಟಿಕ್ ಪೊಟ್ಟಣವನ್ನ ಬಿಸಾಡಿ ಹೋದರು. ಆದರೆ ಆಕೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸದಲ್ಲಿ ಮುಳುಗಿಹೋಗಿದ್ದರು.
ಈ ಮಹಿಳೆ ಹೆಸರು ಶೈಲ, ಯಾಣ ಗ್ರಾಮ ಅರಣ್ಯ ಸಂಘ ಮತ್ತು ರಾಜ್ಯ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಅರಣ್ಯದಲ್ಲಿ ಪ್ಲಾಸ್ಟಿಕ್ ಕ್ಲಿನಿಂಗ್ ಮಾಡುವ ಕಾರ್ಯಕ್ರಮದಲ್ಲಿ ಕಳೆದ ಸುಮಾರು ವರ್ಷಗಳಿಂದ ಆರು ಏಳು ಜನರ ಒಂದು ತಂಡದ ಜೊತೆ ಸೇರಿ ಪ್ರತಿದಿನ ಪ್ರವಾಸಿಗರು ಓಡಾಡುವ ಅರ್ಧ ಕಿ.ಮೀ ಉದ್ದದ ಈ ದಾರಿಯಲ್ಲಿ ಪ್ಲಾಸ್ಟಿಕ್ ಸಂಗ್ರಹ ಮಾಡುವ ಕೆಲಸ ಮಾಡುತ್ತಿದ್ದಾರೆ. ವಾರಂತ್ಯಗಳಲ್ಲಿ ಈ ಅರ್ಧ ಕಿ.ಮೀ ರಸ್ತೆಯಲ್ಲೇ ಆರು ದೊಡ್ಡ ಮೂಟೆಗಳಷ್ಟು ಪ್ಲಾಸ್ಟಿಕ್ ಸಂಗ್ರಹವಾಗುತ್ತದೆ ಎಂದರೆ ನಾವು ಯಾವ ಮಟ್ಟಿಗೆ ಕಾಡನ್ನ ನಾಶ ಮಾಡುತ್ತಿದ್ದೇವೆ ಯೋಚಿಸಿ.
ಓದು ಬರಹ ಬಾರದ ಯಾಣ ಗ್ರಾಮಸ್ಥರ ಈ ತಂಡದ ಜನರೆಲ್ಲಾ ಸೇರಿ ಕಾಡನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದರೆ ವಿದ್ಯಾವಂತರು ಎನಿಸಿಕೊಂಡ ನಾವು ಕಾಡನ್ನ ಕೊಳ್ಳೆ ಹೊಡೆದದ್ದು ಸಾಲದೆ ಸಂಪೂರ್ಣ ನಾಶ ಮಾಡುವತ್ತ ಸಾಗುತ್ತಿರುವುದನ್ನ ನೋಡಿದರೆ ಬೇಸರವಾಗುತ್ತದೆ.
ಚಿತ್ರ: ಗಿರೀಶ್ ಕುಮಾರ್
ಇದು 2017ರಲ್ಲಿ ಗಿರೀಶ್ ಕುಮಾರ್ ಎಂಬುವವರು ಪೋಸ್ಟ್ ಮಾಡಿದ್ದರು. ಇದೀಗ ಸಾಮಾಜಿಕ ತಾಣಗಳಲ್ಲಿ ಹಳೆಯ ಪೋಸ್ಟ್ ಮತ್ತೊಮ್ಮೆ ವೈರಲ್ ಆಗಿದೆ.
ವರ್ಷಗಳ ಹಿಂದೆಯೇಯಾಣ ಗ್ರಾಮ ಅರಣ್ಯ ಸಂಘ ಮತ್ತು ರಾಜ್ಯ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಅರಣ್ಯದಲ್ಲಿ ಪ್ಲಾಸ್ಟಿಕ್ ಕ್ಲಿನಿಂಗ್ ಮಾಡುವ ಕಾರ್ಯಕ್ರಮದ ಬಗ್ಗೆ 'ಪ್ರಜಾವಾಣಿ' ವರದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.