ಭಟ್ಕಳ: ‘ಅಭಿವೃದ್ಧಿ ಮಾಡಲು ಅಡ್ಡಿಗಾಲು ಹಾಕದೇ ಸಹಕರಿಸಿ, ಸಾಮಾನ್ಯ ಜನರಿಗೆ, ಮೀನುಗಾರರಿಗೆ ಅನುಕೂಲವಾಗುವ ಕೆಲಸ ಮಾಡಲು ಜನ ನನ್ನನ್ನು ಆಯ್ಕೆ ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮಾಜಿ ಶಾಸಕ ಸುನೀಲ ನಾಯ್ಕ ಅವರಿಗೆ ಟಾಂಗ್ ನೀಡಿದರು.
ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಆಯೋಜಿಸಿದ್ದ ರಾಜ್ಯ ಮಟ್ಟದ ಮತ್ಸ್ಯ ಮೇಳವನ್ನು ಮಾಜಿ ಶಾಸಕ ಸುನೀಲ ಅವರು ಮೂದಲಿಸಿ, ‘ಅಭಿವೃದ್ಧಿ ಮಾಡುವುದನ್ನು ಬಿಟ್ಟು ಮೇಳವನ್ನು ಆಯೋಜಿಸಿದ್ದಾರೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟಿದ್ದರು.
ಇದಕ್ಕೆ ಉತ್ತರಿಸಿದ ಸಚಿವ, ‘ಸುನಾಮಿ ಬಂದಾಗ ಹಲವು ಮೀನುಗಾರರು ತಮ್ಮ ಬೋಟ್, ಎಂಜಿನ್, ಬಲೆ, ಹಲವು ಪರಿಕರಗಳನ್ನು ಕಳೆದುಕೊಂಡಿದ್ದರು. ಅಂದಿನ ಬಿಜೆಪಿ ಸರ್ಕಾರ ಪರಿಹಾರ ನೀಡಿಲ್ಲ. ನಾನು ಬಂದ ಮೇಲೆ ₹1ಲಕ್ಷ ದಂತೆೆ ಪರಿಹಾರ ನೀಡಿದ್ದೇನೆ. ಈಗ ಅದನ್ನು ₹10 ಲಕ್ಷಕ್ಕೆ ಏರಿಸಿರುವೆ. ಮುರುಡೇಶ್ವರದಲ್ಲಿ ₹100 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣವಾಗುತ್ತಿದೆ. ಅದರಿಂದ ಮೀನುಗಾರರಿಗೆ ಮಾತ್ರವಲ್ಲದೆ ಪ್ರವಾಸೋದ್ಯಮವೂ ಬೆಳೆಯಲಿದೆ. ಹೌಸ್ ಬೋಟ್, ಬೋಟಿಂಗ್ ಸೇರಿದಂತೆ ವಿಧದ ಸಾಮಾಗ್ರಿಗಳನ್ನು ನೋಡಲು ನಮ್ಮ ಜನ ಕೇರಳ ಅಥವಾ ಗೋವಾಕ್ಕೆ ತೆರಳಬೇಕಿತ್ತು. ಮುಂದಿನ ದಿನಗಳಲ್ಲಿ ಅದೆಲ್ಲವೂ ಇಲ್ಲೆ ಆಗಲಿದೆ. ₹200 ಕೋಟಿ ಮೊತ್ತದಲ್ಲಿ ಕಾಮಗಾರಿಗಳು ಆಗುತ್ತಿವೆ. ಇದೆಲ್ಲವೂ ಅಭಿವೃದ್ಧಿ ಅಲ್ಲವೇ’ ಎಂದು ಪ್ರಶ್ನಿಸಿದರು.
‘ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನನ್ನ ಬಳಿ ಹೇಳಿ, ಸರ್ಕಾರದಿಂದ ವಿಳಂಬವಾದರೆ ನಾನೇ ವೈಯಕ್ತಿಕವಾಗಿ ಮಾಡುವೆ. ಜನ ಒಂದು ಬಾರಿ ಹೀನಾಯವಾಗಿ ಸೋಲಿಸಿ ನಿಮಗೆ ಬುದ್ದಿ ಕಲಿಸಿದ್ದಾರೆ. ರಾಮಾಯಣ, ಮಹಾಭಾರತ ಎಲ್ಲದರಲ್ಲೂ ಸುಳ್ಳು ಹೇಳಿದವರು ಹೇಳ ಹೆಸರಿಲ್ಲದಂತಾಗಿದ್ದಾರೆ. ಇನ್ನಾದರು ಸುಳ್ಳು ಹೇಳುವುದನ್ನು ಬಿಡಿ, ಇಲ್ಲವಾದರೆ ಮತ್ತೆ ಜನರೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಈಗಾಗಲೇ ವಿಧಾನಸಭೆಯ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನರು ನಿಮಗೆ ಬುದ್ದಿ ಕಲಿಸಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.
ವಕ್ಪ್ ಒತ್ತುವರಿಗೆ ಬಿಡಲ್ಲ: ‘ನನ್ನ ಜಿಲ್ಲೆಯಲ್ಲಿ ಒಂದು ಇಂಚು ಜಾಗವೂ ವಕ್ಫ್‌ಗೆ ಸೇರ್ಪಡೆಯಾಗಲು ಬಿಡುವುದಿಲ್ಲ. ಅಂತಹ ಯಾವುದಾದರೂ ಪ್ರಕರಣ ಇದ್ದರೆ ಬಿಜೆಪಿಗರು ನನ್ನ ಬಳಿ ತರಬಹುದು. ಸುಮ್ಮನೆ ಬೊಬ್ಬಿರಿಯುವುದನ್ನು ಬಿಟ್ಟು ಕೃತಿಯಲ್ಲಿ ಮಾಡಿ ತೋರಿಸಿ’ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.