ADVERTISEMENT

ಕಾರವಾರ | ಹೆದ್ದಾರಿಗಳ ಹೊಂಡ ಮುಚ್ಚಲು 15 ದಿನ ಗಡುವು: ಭಾಸ್ಕರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 14:17 IST
Last Updated 30 ಸೆಪ್ಟೆಂಬರ್ 2024, 14:17 IST

ಕಾರವಾರ: ‘ಜಿಲ್ಲೆಯಾದ್ಯಂತ ಹೆದ್ದಾರಿ, ಗ್ರಾಮೀಣ ರಸ್ತೆಗಳಲ್ಲಿ ಬಿದ್ದಿರುವ ಹೊಂಡಗಳನ್ನು 15 ದಿನದೊಳಗೆ ಮುಚ್ಚಿ ಸರಿಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ವಿಸ್ತೀರ್ಣ ಹೊಂದಿರುವ ಜಿಲ್ಲೆಯಾಗಿದ್ದು ಗುಡ್ಡಗಾಡು ಪ್ರದೇಶದಲ್ಲಿ ಜನವಸತಿ ಹೆಚ್ಚಿದೆ. ಅತಿಯಾದ ಮಳೆಗೆ ಗ್ರಾಮೀಣ ಪ್ರದೇಶದ ರಸ್ತೆಗಳ ದುಸ್ಥಿತಿಗೆ ತಲುಪಿವೆ. ಜನರು ಓಡಾಟ ನಡೆಸಲು ಪರದಾಡಬೇಕಾದ ಸ್ಥಿತಿ ಇದೆ’ ಎಂದರು.

‘ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೊಂಡಗಳು ಬಿದ್ದು ವಾಹನ ಸವಾರರು ನಿರಾತಂಕವಾಗಿ ಸಾಗಲಾಗದಂತಾಗಿವೆ. ಇವು ಅಪಘಾತಗಳಿಗೂ ಎಡೆಮಾಡಿಕೊಡುತ್ತಿವೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾರವಾರ–ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಸರಿಯಾಗಿ ನಿರ್ವಹಣೆ ಇಲ್ಲದೆ ಸವಾರರು ಪರದಾಡುತ್ತಿದ್ದಾರೆ. ಇದಕ್ಕೆಲ್ಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐ.ಆರ್.ಬಿ ಕಂಪನಿಯ ನಿರ್ಲಕ್ಷ್ಯ ಕಾರಣ’ ಎಂದರು.

ADVERTISEMENT

‘ಸಂಬಂಧಪಟ್ಟ ಇಲಾಖೆಗಳು ಹೊಂಡಗಳನ್ನು ಮುಚ್ಚುವ ಜತೆಗೆ ಸಮರ್ಪಕ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲು ಮುಂದಾಗಬೇಕು’ ಎಂದೂ ಆಗ್ರಹಿಸಿದರು.

ನರೇಂದ್ರ ತಳೇಕರ, ರಾಜಾ ನಾಯ್ಕ, ಶಶಾಂತ ನಾಯಕ, ಗಣಪತಿ ನಾಯ್ಕ, ತಿಮ್ಮಪ್ಪ ನಾಯ್ಕ, ರಂಜನ್ ದೇವಾಡಿಗ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.