ADVERTISEMENT

ಉತ್ತರ ಕನ್ನಡ | ಹಳ್ಳಿಗಳಲ್ಲಿ ಹೆಚ್ಚಿದ ‘ಪವರ್ ಕಟ್’ ಕಿರಿಕಿರಿ

ಮಳೆಗಾಲದಲ್ಲಿ ಬೆಳಕು ಕಾಣುವುದೇ ಅಪರೂಪ ಎಂಬ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 4:58 IST
Last Updated 8 ಜುಲೈ 2024, 4:58 IST
ಜೊಯಿಡಾ ತಾಲ್ಲೂಕಿನ ಕುಂಬಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈನೊಳ ಗ್ರಾಮದಲ್ಲಿ ವಿದ್ಯಾರ್ಥಿಗಳು ವಿದ್ಯುತ್ ಇಲ್ಲದಿರುವುದರಿಂದ ದೀಪದ ಬೆಳಕಿನಲ್ಲಿ ಬರೆಯುತ್ತಿರುವುದು
ಜೊಯಿಡಾ ತಾಲ್ಲೂಕಿನ ಕುಂಬಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈನೊಳ ಗ್ರಾಮದಲ್ಲಿ ವಿದ್ಯಾರ್ಥಿಗಳು ವಿದ್ಯುತ್ ಇಲ್ಲದಿರುವುದರಿಂದ ದೀಪದ ಬೆಳಕಿನಲ್ಲಿ ಬರೆಯುತ್ತಿರುವುದು   

ಕಾರವಾರ: ರಾಜ್ಯದ ಒಟ್ಟು ಉತ್ಪಾದನೆಯಲ್ಲಿ ಶೇ 34ರಷ್ಟು ಕೊಡುಗೆ ನೀಡುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ‘ಪವರ್ ಕಟ್’ ಸಮಸ್ಯೆ ಹೆಚ್ಚಿರುವ ದೂರು ವ್ಯಾಪಕವಾಗಿದೆ.

ಸಣ್ಣ ಮಳೆ, ಗಾಳಿ ಉಂಟಾದರೂ ತಕ್ಷಣಕ್ಕೆ ವಿದ್ಯುತ್ ಪೂರೈಕೆ ಕಡಿತಗೊಳ್ಳುತ್ತಿದೆ. ಕಾರವಾರ, ಶಿರಸಿ ಸೇರಿದಂತೆ ಕೆಲ ನಗರಗಳಲ್ಲಿಯೂ ತಾಸುಗಟ್ಟಲೆ ವಿದ್ಯುತ್ ವ್ಯತ್ಯಯ ಉಂಟಾದರೆ, ಕುಗ್ರಾಮಗಳಲ್ಲಿ ವಾರಗಟ್ಟಲೆ ವಿದ್ಯುತ್ ಇಲ್ಲದೆ ದಿನ ಕಳೆಯುವ ಸ್ಥಿತಿ ಇದೆ ಎಂಬುದು ಜನರ ದೂರು.

ವಿದ್ಯುತ್ ಪೂರೈಕೆಯಲ್ಲಿ ಎದುರಾಗುವ ಸಮಸ್ಯೆ ಸರಿಪಡಿಸಲು ಅಗತ್ಯವಿರುವ ಲೈನ್‍‍ಮನ್‍ಗಳ ಲಭ್ಯತೆ ಅಗತ್ಯದಷ್ಟು ಇಲ್ಲ. ಗುಡ್ಡಗಾಡು ಪ್ರದೇಶದಲ್ಲೇ ವಿದ್ಯುತ್ ತಂತಿಗಳು ಹೆಚ್ಚು ಹಾದುಹೋಗಿದ್ದು, ಬಿರುಸಿನ ಮಳೆಯಲ್ಲೂ ಅಲ್ಲೆಲ್ಲ ತೆರಳಿ ದುರಸ್ತಿಪಡಿಸುವ ಸವಾಲು ಎದುರಿಸಬೇಕಾಗುತ್ತಿದೆ ಎನ್ನುವುದು ಹೆಸ್ಕಾಂ ಅಧಿಕಾರಿಗಳ ಸಮರ್ಥನೆ.

ADVERTISEMENT

ಶಿರಸಿ ಪ್ರಸಕ್ತ ಸಾಲಿನಲ್ಲಿ ವಿದ್ಯುತ್ ತಂತಿ ಮಾರ್ಗ ಅಸಮರ್ಪಕ ನಿರ್ವಹಣೆ ಕಾರಣಕ್ಕೆ ಗ್ರಾಮೀಣ ಹಾಗೂ ಅರಣ್ಯ ಪ್ರದೇಶದೊಳಗಿನ ಹಲವು ಮನೆಗಳಿಗೆ ವಿದ್ಯುತ್ ಪೂರೈಕೆ ಸವಾಲಾಗಿ ಮಾರ್ಪಟ್ಟಿದೆ. ಈ ಬಾರಿ ಜಂಗಲ್ ಕಟಿಂಗ್ ಸರಿಯಾಗಿ ನಡೆಯದ ಕಾರಣ ಹಲವೆಡೆ ಮರದ ಕೊಂಬೆಗಳು ವಿದ್ಯುತ್ ತಂತಿಗೆ ತಾಗುತ್ತಿವೆ. ಈ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆಯಾಗಿದೆ.

‘ಮಳೆ–ಗಾಳಿಗೆ ಸಮಸ್ಯೆ ಆಗುತ್ತಿದ್ದು, ದೂರುಗಳು ಬಂದ ತಕ್ಷಣ ಸ್ಪಂದಿಸಲಾಗುತ್ತಿದೆ’ ಎನ್ನುತ್ತಾರೆ ಹೆಸ್ಕಾಂ ಎಇಇ ನಾಗರಾಜ ಪಾಟೀಲ.

ಮುಂಡಗೋಡ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಆಗಾಗ ಕೈಕೊಡುವುದು ಮುಂದುವರೆದಿದೆ. ‘ಮಳೆಗಾಲದಲ್ಲಿ ಗಿಡ, ಮರ ಬಿದ್ದು ವಿದ್ಯುತ್ ಕಂಬಗಳು ಹಾನಿಯಾದಾಗ, ಮಾರ್ಗದಲ್ಲಿ ಲೋಪ ಕಂಡುಬಂದಾಗ ವಿದ್ಯುತ್ ವ್ಯತ್ಯಯವಾಗುತ್ತಿದೆ’ ಎಂದು ಹೆಸ್ಕಾಂ ಎಇಇ ವಿನಾಯಕ ಪೇಟ್ಕರ ಹೇಳಿದರು.

ಹಳಿಯಾಳ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ನಿತ್ಯ ಸಂಜೆಯ ವೇಳೆಯಲ್ಲಿಯೇ ವಿದ್ಯುತ್ ವ್ಯತ್ಯಯ ಸಮಸ್ಯೆ ಹೆಚ್ಚಿದೆ ಎಂಬುದು ಜನರ ದೂರು. ವಿದ್ಯುತ್ ಕಡಿತದಿಂದ ವ್ಯಾಸಂಗ ಕೈಗೊಳ್ಳಲು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿ ರಾಹುಲ ನಾಚನೇಕರ ಹೇಳಿದರು.

‘ವಿದ್ಯುತ್ ಪರಿವರ್ತಕ, ತಂತಿ ಜೋಡಣೆಗೆ ತಗಲುವ ಸಲಕರಣೆಗಳ ದಾಸ್ತಾನಿಗೆ ಕೊರತೆ ಇಲ್ಲ. ದೂರುಗಳು ಬಂದಲ್ಲಿ ತಕ್ಷಣ ಸಿಬ್ಬಂದಿ ಸ್ಪಂದಿಸುತ್ತಾರೆ’ ಎಂದು ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ ಹೇಳಿದರು.

ಯಲ್ಲಾಪುರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಪದೇ ಪದೇ ವಿದ್ಯುತ್‌ ಕಡಿತ ಉಂಟಾಗುತ್ತಿದೆ.

ಆನಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವೆಡೆ ಮನೆಯ ಮೇಲ್ಬಾಗದಲ್ಲಿ ವಿದ್ಯುತ್‌ ತಂತಿ ಹಾದು ಹೋದ ಬಗ್ಗೆ ಆಕ್ಷೇಪಗಳಿವೆ. ಕಳಚೆಗೆ ಬೀಗಾರ -ಬಾಗಿನಕಟ್ಟಾ ಮೂಲಕ ಲೈನ್‌ ಎಳೆದಿದ್ದರೂ ಚಾರ್ಜ್ ಮಾಡಲಾಗಿಲ್ಲ.

‘ಸಿಬ್ಬಂದಿ ಕೊರತೆಯ ನಡುವೆಯೂ ಮಾರ್ಗ ಸುಸ್ಥಿತಿಯಲ್ಲಿಡಲು ನಿರಂತರ ಪ್ರಯತ್ನಿಸಲಾಗುತ್ತಿದೆ’ ಎಂದು ಹೆಸ್ಕಾಂ ಎಇಇ ರಮಾಕಾಂತ ನಾಯ್ಕ ತಿಳಿಸಿದರು.

ಗೋಕರ್ಣ ಹೆಸ್ಕಾಂ ವ್ಯಾಪ್ತಿಯಲ್ಲಿ ಸಿಬ್ಬಂದಿ, ಸರಂಜಾಮುಗಳ ಕೊರತೆ ಇದೆ. ವಿದ್ಯುತ್ ಪರಿವರ್ತಕಗಳಲ್ಲಿ ಹೆಚ್ಚಿನ ಸಮಸ್ಯೆ ಕಂಡುಬರುತ್ತಿದೆ. ಪದೇ ಪದೇ ಮರಗಳು ಪರಿವರ್ತಕಗಳ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ವ್ಯತ್ಯಯವಾಗುತ್ತಿದೆ. ಅದನ್ನು ಮರು ಅಳವಡಿಕೆ ಮಾಡುವುದೇ ಸವಾಲಿನ ಕೆಲಸವಾಗಿದೆ.

ಬಿಜ್ಜೂರು, ರುದ್ರಪಾದ ಮುಂತಾದ ಕಡೆ ಗಜನಿ ಭೂಮಿಯಲ್ಲಿ ಹಲವು ಕಂಬಗಳಿಗೆ ಹಾನಿಯಾಗಿದೆ. ಈಗ ನೀರು ತುಂಬಿರುವುದರಿಂದ ಅದನ್ನು ಬದಲಿಸಲು ಸಾಧ್ಯವಾಗಿಲ್ಲ ಎಂದು ಹೆಸ್ಕಾಂ ಅಧಿಕಾರಿ ತಿಳಿಸಿದ್ದಾರೆ.

ಕುಮಟಾ ತಾಲ್ಲೂಕಿನಲ್ಲಿ ಪದೇ ಪದೇ ವಿದ್ಯುತ್ ಕಡಿತ ಉಂಟಾಗುತ್ತಿದೆ. ‘ವಿದ್ಯುತ್ ಲೈನ್ ಹಾದು ಹೋಗಿರುವ ಪ್ರದೇಶದ ಮರದ ಕೊಂಬೆ ಕಡಿಯಲು ಅರಣ್ಯ ಇಲಾಖೆ, ತೋಟದ ಮಾಲೀಕರು ಆಕ್ಷೇಪಿಸುವುದರಿಂದ ವಿದ್ಯುತ್ ಸಮಸ್ಯೆ ನಿವಾರಣೆಯಾಗುತ್ತಿಲ್ಲ’ ಎಂದು ಹೆಸ್ಕಾಂ ಎಇಇ ರಾಜೇಶ ಮಡಿವಾಳ ತಿಳಿಸಿದರು.

ಹೊನ್ನಾವರ ಹೆಚ್ಚಿನ ಪ್ರಮಾಣದಲ್ಲಿ ಗುಡ್ಡಗಾಡು ಪ್ರದೇಶಗಳನ್ನು ಹೊಂದಿರುವ ತಾಲ್ಲೂಕಿನ ದಟ್ಟಡವಿಯಲ್ಲೂ ಬಹು ದೂರದವರೆಗೆ ವಿದ್ಯುತ್ ತಂತಿಗಳನ್ನು ಎಳೆಯಲಾಗಿದ್ದು ಮರ ಮುರಿದು ಬಿದ್ದು ತಂತಿಗಳು ತುಂಡಾಗಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಸಾಮಾನ್ಯ ಸಂಗತಿಯಾಗಿದೆ. ಒಂದು ಕಡೆಯಲ್ಲಿ ಸಮಸ್ಯೆಯಿದ್ದರೆ ಇಡೀ ಮಾರ್ಗದ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.

‘120 ಪವರ್‌ಮ್ಯಾನ್ ಹುದ್ದೆಗಳಿದ್ದು, ಪ್ರಸ್ತುತ 57 ಪವರ್‌ಮ್ಯಾನ್‍ಗಳು ಮಾತ್ರ ಲಭ್ಯರಿದ್ದಾರೆ. ಅವರಲ್ಲಿಯೂ ಕೆಲವರಿಗೆ ದೈಹಿಕ ಸಾಮರ್ಥ್ಯದ ಕೊರತೆಯಿದೆ’ ಎಂದು ಹೆಸ್ಕಾಂ ಎಇಇ ರಾಮಕೃಷ್ಣ ಭಟ್ಟ ತಿಳಿಸಿದರು.

ಸಿದ್ದಾಪುರ ತಾಲ್ಲೂಕಿನ ಹೆಚ್ಚಿನ ಭಾಗದಲ್ಲಿ ವಿದ್ಯುತ್ ತಂತಿಗಳು ಮರಗಳ ಮಧ್ಯ ಹಾದು ಹೋಗಿವೆ. ಮರಗಳ ರೆಂಬೆಗಳನ್ನು ಕತ್ತರಿಸಿದರೂ ಮಳೆಗಾಲದ ಅರಂಭದಲ್ಲಿ ಮರಗಳು ಸಡಿಲಗೊಂಡು ವಿದ್ಯುತ್ ಕಂಬಗಳ ಮೇಲೆ ಬೀಳುತ್ತವೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.

‘ಮಳೆಗಾಲ ಆರಂಭವಾದ ಮೇಲೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಪ್ರತಿ 5 ಕಿ.ಮೀ ಗೆ ಒಂದರಂತೆ ಡಿವೈಲ್ ಅಳವಡಿಸಿದರೆ ಸಮಸ್ಯೆ ಆದ ಪ್ರದೇಶಕ್ಕೆ ಮಾತ್ರ ವಿದ್ಯುತ್ ನಿಲುಗಡೆಗೊಳಿಸಿ ಉಳಿದ ಕಡೆ ವಿದ್ಯುತ್ ನೀಡಬಹುದು. ಈ ಕುರಿತು ಅಧಿಕಾರಿಗಳು ಕ್ರಮ ವಹಿಸಬೇಕು’ ಎನ್ನುತ್ತಾರೆ ಜಯಪ್ರಕಾಶ ಭಟ್.

ದಾಂಡೇಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆ, ಗಾಳಿ ಇದ್ದಾಗ ಮಾತ್ರವೇ ಅಥವಾ ಮರ ಬಿದ್ದು ಸಮಸ್ಯೆ ಉಂಟಾದರೆ ಮಾತ್ರವೇ ವಿದ್ಯುತ್ ವ್ಯತ್ಯಯ ಮಾಡುತ್ತೇವೆ ಎಂದು ಹೆಸ್ಕಾಂ ಅಧಿಕಾರಿಗಳು ಹೇಳಿದರೆ, ಮಳೆ ಗಾಳಿ ಇರದಿದ್ದರೂ ಒಮ್ಮೊಮ್ಮೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಬೀರಂಪಾಲಿ ಗ್ರಾಮದ ನಿವಾಸಿ ಟಾಕು ಜಾನು ದೂರುತ್ತಾರೆ.

ಅಂಕೋಲಾ ತಾಲ್ಲೂಕಿನಲ್ಲಿ ಮಳೆಗಾಲ ಆರಂಭವಾದ ದಿನದಿಂದ ವಿದ್ಯುತ್ ಸಮಸ್ಯೆ ಹೆಚ್ಚಿದೆ. ವಿದ್ಯುತ್ ಪದೇ ಪದೇ ಕೈ ಕೊಡುವುದರಿಂದ ಹೋಟೆಲ್ ನಡೆಸಲಾಗದಷ್ಟು ಸಮಸ್ಯೆ ಉಂಟಾಗುತ್ತಿದೆ ಎಂದು ಉದ್ಯಮಿ ಬಾಳಾ ಹೇಳುತ್ತಾರೆ.

‘ಅಂಕೋಲಾದ ಗ್ರಿಡ್‍ನಲ್ಲಿ ಕಳೆದ ವಿದ್ಯುತ್ ಪರಿವರ್ತಕ ಕೆಟ್ಟು ಹೋಗಿದ್ದರಿಂದ ನಿರಂತರ ವಿದ್ಯುತ್ ಸರಬರಾಜು ಮಾಡಲು ತೊಂದರೆ ಉಂಟಾಗುತ್ತಿದೆ’ ಎಂದು ಹೆಸ್ಕಾಂ ಅಧಿಕಾರಿ ಪ್ರವೀಣ ನಾಯ್ಕ ತಿಳಿಸಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಮೋಹನ ನಾಯ್ಕ, ಪ್ರವೀಣಕುಮಾರ ಸುಲಾಖೆ, ಜ್ಞಾನೇಶ್ವರ ದೇಸಾಯಿ, ವಿಶ್ವೇಶ್ವರ ಗಾಂವ್ಕರ, ಸುಜಯ ಭಟ್, ಮೋಹನ ದುರ್ಗೇಕರ.

ಸಿದ್ದಾಪುರ ತಾಲ್ಲೂಕಿನ ಶಿರಳಗಿ ಫೀಡರ್ ವ್ಯಾಪ್ತಿಯ ಹಿರೇಮಕ್ಕಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದು

ಹಳಿಯಾಳ ತಾಲ್ಲೂಕಿನ ಅರ್ಲವಾಡ ಗ್ರಾಮದಲ್ಲಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್‌ ತಂತಿ ಹಾಗೂ ಪರಿವರ್ತಕ ದುರಸ್ತಿ ಮಾಡುತ್ತಿರುವುದು

ದಾಂಡೇಲಿ ಭಾಗದಲ್ಲಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್‌ ಮಾರ್ಗದ ದುರಸ್ತಿ ಕಾರ್ಯ ಮಾಡುತ್ತಿರುವುದು

ಅರ್ಜಿ ಸಲ್ಲಿಸಲು ಪರದಾಟ

ಜೊಯಿಡಾ ತಾಲ್ಲೂಕಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ ತಾಲ್ಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ಹಲವು ಭಾಗಗಳಲ್ಲಿ ಸುಮಾರು ಎರಡು ವಾರಗಳವರೆಗೆ ಕತ್ತಲೆಯಲ್ಲಿ ಜೀವನ ಸಾಗಿಸುವ ಅನಿವಾರ್ಯತೆ ಉಂಟಾಗುತ್ತದೆ. ಉಳವಿ ನಂದಿಗದ್ದಾ ಬಜಾರಕುಣಂಗಅಣಶಿ ಆಖೇತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವ ದೂರುಗಳಿವೆ.

‘ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದರಿಂದ ಕುಂಬಾರವಾಡ ಅಣಶಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ನೆಟ್‍ವರ್ಕ್ ಸಮಸ್ಯೆ ಎದುರಾಗುತ್ತಿದೆ. ವಿದ್ಯಾರ್ಥಿಗಳು ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಬರುವ ಗ್ರಾಮೀಣ ಭಾಗದ ಜನರು ಪದೇ ಪದೇ ಕಚೇರಿಗಳಿಗೆ ಅಲೆಯುವಂತಾಗಿದೆ’ ಎನ್ನುತ್ತಾರೆ ಅಲ್ಕೇಶ ದೇಸಾಯಿ.

‘ತಾಲ್ಲೂಕಿನಾದ್ಯಂತ ಸುಮಾರು 100 ಕಂಬಗಳನ್ನು ಹೊಸದಾಗಿ ಹಾಕಲಾಗಿದೆ. 200 ಕಂಬಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ಭಾಗಗಳಲ್ಲಿ ಸಂಗ್ರಹಿಸಿಡಲಾಗಿದೆ’ ಎಂದು ಹೆಸ್ಕಾಂ ಎಇಇ ದೀಪಕ ನಾಯಕ ತಿಳಿಸಿದರು.

ದಿನವಿಡೀ ವ್ಯತ್ಯಯ

ಭಟ್ಕಳ ತಾಲ್ಲೂಕಿನಲ್ಲಿ ಮಳೆ ಗಾಳಿ ಜೋರಾದ ಸಂದರ್ಭದಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ಸಾಮಾನ್ಯವಾಗಿದೆ. ಭಟ್ಕಳ–ಹೊನ್ನಾವರ ಏಕೈಕ ಮಾರ್ಗದಿಂದ ವಿದ್ಯುತ್ ಪೂರೈಕೆಯಾಗುತ್ತಿದ್ದು ಮಳೆಗಾಲದಲ್ಲಿ ಟ್ರಾನ್ಸಫಾರಂ ಕೈಕೊಟ್ಟಾಗ ಕಂಬ ತಂತಿ ಮುರಿದು ಬಿದ್ದಾಗ ದಿನವಿಡೀ ವಿದ್ಯುತ್ ಪೂರೈಕೆ ಇಲ್ಲದೇ ತಾಲ್ಲೂಕಿನ ಜನರು ತೊಂದರೆ ಅನುಭವಿಸುವ ಪರಿಸ್ಥಿತಿ ಇದೆ.

‘ಗ್ರಾಮೀಣ ಭಾಗದಲ್ಲಿ ಹಳೆ ವಿದ್ಯುತ್ ಲೈನ್ ಹಾಗೂ ಕಂಬಗಳ ಬದಲಾವಣೆ ಆಗಬೇಕಾಗಿದ್ದು ಕ್ರೀಯಾಯೋಜನೆ ಮಾಡಿ ಅನುಮೋದನೆಗೆ ಕಳುಹಿಸಲಾಗಿದೆ’ ಎಂದು ಹೆಸ್ಕಾಂ ಎಇಇ ಶಿವಾನಂದ ನಾಯ್ಕ ತಿಳಿಸಿದ್ದಾರೆ.         

ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತೀವ್ರ ಸಮಸ್ಯೆ ಆಗುತ್ತದೆ.
ರಾಮಾ ನಾಯ್ಕ, ಕೆಸಿನಮನೆ ಗ್ರಾಮಸ್ಥ (ಶಿರಸಿ)
ಪಾಳಾ ಹೋಬಳಿ ವ್ಯಾಪ್ತಿಯಲ್ಲಿ ಅನಿಯಮಿತ ವಿದ್ಯುತ್ ನಿಲುಗಡೆ ಆಗುತ್ತಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಮುಂದುವರೆದಿದೆ.
ಶಿವಕುಮಾರ ಪಾಟೀಲ, ಪ್ರಗತಿಪರ ಕೃಷಿಕ (ಮುಂಡಗೋಡ)
ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ತಂತಿಗಳನ್ನು ಪ್ರತ್ಯೇಕಿಸುವ ಪರಿಕರ ಅಳವಡಿಸಿ ವಿದ್ಯುತ್ ವ್ಯತ್ಯಯ ತಪ್ಪಿಸಬಹುದಾಗಿದ್ದು ನಮ್ಮ ಊರಿನಲ್ಲಿ ಅಂಥದ್ದೊಂದು ಪರಿಕರ ಅಳವಡಿಸಿ ಎಂದು ಬೇಡಿಕೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ನಾಗೇಶ ನಾಯ್ಕ, ಬೀಳ್ಮಕ್ಕಿ ಗ್ರಾಮಸ್ಥ (ಹೊನ್ನಾವರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.