ADVERTISEMENT

ಕಾರವಾರ | ಪ್ರವೀಣ್ ಕೊಲೆ ಪ್ರಕರಣ: ಯುವ ಮೋರ್ಚಾ ಪದಾಧಿಕಾರಿಗಳ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 8:35 IST
Last Updated 28 ಜುಲೈ 2022, 8:35 IST
ಕೊಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಕಾರವಾರದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ಕೊಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಕಾರವಾರದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು   

ಕಾರವಾರ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಬಿ.ಜೆ.ಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವು, ಉತ್ತರ ಕನ್ನಡದಲ್ಲೂ ಪಕ್ಷದ ಯುವ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ. ಪಕ್ಷದ ಕಾರ್ಯಕರ್ತರಿಗೇ ರಕ್ಷಣೆ ಕೊಡಲು ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾರವಾರ ನಗರ ಮತ್ತು ಗ್ರಾಮೀಣ ಯುವ ಮೋರ್ಚಾದ ತಲಾ 21 ಪದಾಧಿಕಾರಿಗಳು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಕೊಲೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರುಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಹಿರಿಯ ಮುಖಂಡರು ಬಾರದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಯುವ ಮೋರ್ಚಾ ಅಧ್ಯಕ್ಷ ಶುಭಂ ಕಳಸ, ‘ಯುವಕರನ್ನು ಬಳಸಿಕೊಂಡು ನಾಯಕರು ಅಧಿಕಾರಕ್ಕೇರುತ್ತಾರೆ. ಆದರೆ, ನಮ್ಮ ನಾಯಕರು ಈಗ ಎಲ್ಲಿದ್ದಾರೆ? ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಎಲ್ಲಿದ್ದಾರೆ? ಹಿರಿಯ ಮುಖಂಡರು ಎಲ್ಲಿದ್ದಾರೆ? ಕೇವಲ ಟ್ವೀಟ್ ಮಾಡಿ ಸುಮ್ಮನಾಗಬೇಡಿ' ಎಂದರು.

ADVERTISEMENT

'ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಬಳಸಿಕೊಳ್ತಾರೆ. ನಂತರ ನಾವು ಕಷ್ಟದಲ್ಲಿದ್ದಾಗ ನಮ್ಮ ಜೊತೆ ಯಾರಿದ‌್ದಾರೆ ನೋಡಿ. ಹಿಂದುತ್ವದ ಹೆಸರಲ್ಲಿ ಮುಂದೆ ಬಂದವರು ಡೋಂಗಿ ನಾಯಕರು' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಬಿಜೆಪಿ ಸರ್ಕಾರದ ಅವಧಿಯಲ್ಲೇ ಹಲವು ಮಂದಿ ಹಿಂದೂ ಪರ ಸಂಘಟನೆಗಳ ಯುವಕರ ಕೊಲೆಯಾಯಿತು. ನಮಗೆ ಮುಖ್ಯಮಂತ್ರಿ, ಗೃಹ ಸಚಿವರು ಇಂಥವರು ಬೇಡ. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಅಭ್ಯರ್ಥಿಗಳು ಯಾರೆಂದು ತಿಳಿಸಿ. ನಿಮ್ಮ ನಿರ್ಧಾರವನ್ನು ನೋಡಿಕೊಂಡು ಬೆಂಬಲಿಸ್ತೇವೆ' ಎಂದು ಪಕ್ಷದ ಹಿರಿಯ ಮುಖಂಡರನ್ನು ಉದ್ದೇಶಿಸಿ ಹೇಳಿದರು.

'ಕೊಲೆ ಆರೋಪಿಗಳನ್ನು ಬೇಗ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಿ. ಕೊಟ್ಟಿರುವ ಭರವಸೆ ಉಳಿಸಿ. ಇಲ್ಲದಿದ್ದರೆ ಮುಖ್ಯಮಂತ್ರಿ ಬರುವಾಗ ಕಾರವಾರ ಬಂದ್ ಮಾಡುತ್ತೇವೆ' ಎಂದು ಎಚ್ಚರಿಕೆ ಕೊಟ್ಟರು.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, 'ಪಕ್ಷದ ಕಾರ್ಯಕರ್ತನ ಹತ್ಯೆಯಿಂದ ಬಹಳ ನೋವಾಗಿದೆ. ಸರ್ಕಾರ ಕೇವಲ ಭರವಸೆ ಕೊಡುತ್ತಿರುವುದು ಸರಿಯಲ್ಲ. ಆರೋಪಿಗಳನ್ನು ಕೂಡಲೇ ಬಂಧಿಸಿ. ಪ್ರಕರಣವನ್ನು ಹಗುರವಾಗಿ ಪರಿಗಣಿಸಬೇಡಿ' ಎಂದು ಒತ್ತಾಯಿಸಿದರು.

ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ.ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪಕ್ಷದ ಗ್ರಾಮೀಣ ಘಟಕದ ನಾಗೇಶ ಕುರ್ಡೇಕರ್ ಸೇರಿದಂತೆ ಕೆಲವು ಪ್ರಮುಖರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.