ADVERTISEMENT

ತುಳಸಿ ಹಬ್ಬಕ್ಕೆ ಭರದ ಸಿದ್ಧತೆ: ಬೆಲೆ ಏರಿಕೆ ನಡುವೆಯೂ ಖರೀದಿ ಜೋರು

ಕಬ್ಬಿಗೆ ದುಪ್ಪಟ್ಟು ದರ:

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 14:02 IST
Last Updated 8 ನವೆಂಬರ್ 2019, 14:02 IST
ಕಾರವಾರ ನಗರದ ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟ ಕಬ್ಬಿನ ರಾಶಿ
ಕಾರವಾರ ನಗರದ ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟ ಕಬ್ಬಿನ ರಾಶಿ   

ಕಾರವಾರ: ತಾಲ್ಲೂಕಿನಲ್ಲಿ ತುಳಸಿ ಹಬ್ಬದ ತಯಾರಿ ಜೋರಾಗಿದೆ. ಮಾರುಕಟ್ಟೆಯ ರಸ್ತೆ ಬದಿಗಳಲ್ಲಿ ಕಬ್ಬುಗಳು ರಾರಾಜಿಸುತ್ತಿದ್ದು, ಚುರುಕಿನ ವ್ಯಾಪಾರ ನಡೆಯುತ್ತಿದೆ.

ನ.9ರಂದು ಎಲ್ಲೆಡೆ ತುಳಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕಬ್ಬು, ಬಾಳೆಗಿಡ, ನೆಲ್ಲಿಕಾಯಿಗಳಿಂದ ಅಲಂಕೃತ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಇದರ ಪ್ರಯುಕ್ತ ಜನರುಭರದ ಸಿದ್ಧತೆ ನಡೆಸುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆಯು ಶುಕ್ರವಾರ ಜನದಟ್ಟಣೆಯಿಂದ ಕೂಡಿತ್ತು.

ಕಬ್ಬು ದುಬಾರಿ: ತುಳಸಿ ಹಬ್ಬಕ್ಕೆ ಕಬ್ಬು ವಿಶೇಷ ಪ್ರಾಮುಖ್ಯ ಪಡೆದುಕೊಂಡಿದೆ. ಆದರೆ, ಈ ಬಾರಿ ಇದರ ದರ ದುಪ್ಪಟ್ಟು ಹೆಚ್ಚಾಗಿದೆ. ಹಿಂದಿನ ವರ್ಷ ಒಂದು ಕಟ್ಟು ಕಬ್ಬಿಗೆ ₹ 150 ದರದಲ್ಲಿ ಖರೀದಿಸುತ್ತಿದ್ದರು. ಸದ್ಯ ಇದರ ಬೆಲೆ₹ 250ಕ್ಕೆ ಏರಿದೆ. ಇದು ಗ್ರಾಹಕರ ತಲೆಬಿಸಿಗೆ ಕಾರಣವಾಯಿತು. ಕೆಲವರುದುಬಾರಿ ದರವನ್ನುನಿರಾಕರಿಸಿ, ಬೇರೆ ಬೇರೆ ಕಡೆ ಚೌಕಾಸಿ ನಡೆಸಿದ್ದು ಕಂಡು ಬಂತು. ಬೆಲೆ ಏರಿಕೆ ನಡುವೆಯೂ ವ್ಯಾಪಾರ ಭರದಿಂದ ಸಾಗಿತು.

ADVERTISEMENT

ಹೂವಿನ ದರ ಇಳಿಕೆ: ಕಬ್ಬು ಖರೀದಿಯಲ್ಲಿ ನಿರಾಸೆ ಉಂಟಾದರೂ ಹೂವಿನ ದರವು ಗ್ರಾಹಕರಲ್ಲಿಮಂದಹಾಸಮೂಡಿಸಿದೆ. ಹಿಂದಿನ ಬಾರಿ ಒಂದು ಮಾರಿಗೆ₹ 100ರ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ಬರೋಬ್ಬರಿ₹ 70ರಷ್ಟು ಬೆಲೆ ಇಳಿಕೆ ಕಂಡಿದ್ದು, ಪ್ರತಿ ಮಾರಿಗೆ ₹ 30ರಲ್ಲಿ ಮಾರಾಟವಾಗುತ್ತಿದೆ. ಇದರಿಂದ ಒಂದೋ ಎರಡೋ ಮಾರು ಹೂವನ್ನು ಶಾಸ್ತ್ರಕ್ಕೆಂಬಂತೆ ಖರೀದಿಸುವವರು, ನಾಲ್ಕೈದು ಮಾರು ಹೂವನ್ನು ತೆಗೆದುಕೊಂಡಿದ್ದು ಕಂಡು ಬಂದಿತು.

ಅಲ್ಲೊಂದು ದರ.. ಇಲ್ಲೊಂದು ದರ!:ನಗರದ ವಿವಿಧ ಭಾಗಗಳಲ್ಲಿ ಕಬ್ಬಿನ ವ್ಯಾಪಾರ ಜೋರಾಗಿದೆ. ಆದರೆ ಇದರ ದರದಲ್ಲಿ ಮಾತ್ರ ಭಾರೀ ವ್ಯತ್ಯಾಸಗಳು ಕಂಡುಬರುತ್ತಿದೆ. ಕೋಡಿಬಾಗದಲ್ಲಿ ಒಂದು ಕಟ್ಟಿಗೆ₹ 250 ಇದ್ದರೆ, ನಗರ ಭಾಗಗಳಲ್ಲಿ ಕೆಲವೆಡೆ₹ 200ರಲ್ಲಿ ಬಿಕರಿಯಾಗುತ್ತಿದೆ. ಆದರೆ, ಹಳೆ ಗ್ರಾಮೀಣ ಬ್ಯಾಂಕಿನ ಬಳಿ ₹ 430ರವರೆಗೆ ದರ ನಿಗದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.