ಕಾರವಾರ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ತಿಗಳನ್ನು ಮರು ಸಮೀಕ್ಷೆಗೆ ಭೂ ದಾಖಲೆಗಳ ಇಲಾಖೆ ಸಿದ್ಧತೆ ಕೈಗೊಂಡಿದೆ. ಜಿಲ್ಲೆಗೆ ಸಂಬಂಧಿಸಿ, ನಗರದ ನೂತನ ಮಿನಿ ವಿಧಾನಸೌಧದ ಮೊದಲ ಮಹಡಿಯಲ್ಲಿ ಕಚೇರಿಗೆ ಸ್ಥಳ ಗುರುತಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಕಚೇರಿ ತೆರೆದು, ಎರಡನೇ ವಾರದಿಂದ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಮರು ಸಮೀಕ್ಷೆಯಲ್ಲಿ ರಾಜ್ಯದ ಎಲ್ಲ ಆಸ್ತಿಗಳನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಿ ಡಿಜಿಟಲೀಕರಣ ಮಾಡಲಾಗುತ್ತದೆ. ಆಸ್ತಿಗಳ ಮರು ಸಮೀಕ್ಷೆಗೆ 2019ರಲ್ಲಿ ಭಾರತೀಯ ಸರ್ವೇಕ್ಷಣಾ ಇಲಾಖೆಯೊಂದಿಗೆ ಕಂದಾಯ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು.
ಅದರ ಆಧಾರದಲ್ಲಿ ಸಮೀಕ್ಷೆ ಹಾಗೂ ದಾಖಲೆಗಳ ಡಿಜಿಟಲ್ ನಕ್ಷೆ (ಒ.ಆರ್.ಐ.ಎಸ್) ತಯಾರಿಸಲು ಸಿದ್ಧತೆ ಕೈಗೊಳ್ಳಲು ಭೂ ದಾಖಲೆಗಳ ಇಲಾಖೆ ಆಯುಕ್ತ ಮನೀಶ ಮೌದ್ಗೀಲ್ ನವೆಂಬರ್ ತಿಂಗಳಲ್ಲಿ ಆದೇಶಿಸಿದ್ದರು. ಆರಂಭದಲ್ಲಿ ಪ್ರಾಯೋಗಿಕವಾಗಿ ಉತ್ತರ ಕನ್ನಡ, ತುಮಕೂರು, ಹಾಸನ, ಬೆಳಗಾವಿ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಸರ್ವೆ ಮಾಡಲು ಉದ್ದೇಶಿಸಲಾಗಿತ್ತು. ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇದೇ ಮಾದರಿಯಲ್ಲಿ ಸಮೀಕ್ಷೆ ನಡೆಯಲಿದೆ.
‘ಪ್ರಜಾವಾಣಿ’ ಜೊತೆ ಮಾತನಾಡಿದ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ರುದ್ರಣ್ಣ ಗೌಡ, ‘ಗ್ರಾಮೀಣ ಭಾಗದ ಖಾಸಗಿ ಆಸ್ತಿಗಳನ್ನು ಈಗಾಗಲೇ ಕೇಂದ್ರ ಸರ್ಕಾರದ ‘ಸ್ವಾಮಿತ್ವ’ ಯೋಜನೆಯಡಿ ಡ್ರೋನ್ ಮೂಲಕ ಸರ್ವೆ ಮಾಡಲಾಗುತ್ತಿದೆ. ಆಸ್ತಿ ಸಂಖ್ಯೆಯನ್ನೂ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ನಗರ, ಪಟ್ಟಣಗಳಲ್ಲಿ ಸಮೀಕ್ಷೆ ಮಾಡಿ ಆಸ್ತಿ ಸಂಖ್ಯೆ ಹಾಗೂ ಮಾಲೀತಕ್ವದ ಚೀಟಿಯನ್ನು (ಯು.ಪಿ.ಒ.ಆರ್)ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಇದರ ಮೂಲಕ ಮರು ಸರ್ವೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
‘ಆಯಾ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ನಿಗದಿತ ವಾರ್ಡ್‌ನ ನಕಾಶೆಯನ್ನು ಪಡೆದುಕೊಳ್ಳಲಾಗುತ್ತದೆ. ಬಳಿಕ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನುಆಸ್ತಿ ಮಾಲೀಕರಿಂದ ಪಡೆದು ಪರಿಶೀಲಿಸಲಾಗುತ್ತದೆ. ಆಯಾ ಜಮೀನಿನ ಗಡಿಯಲ್ಲಿ ಗುರುತು ಮಾಡಿ, ಡ್ರೋನ್ ಮೂಲಕ ಆಸ್ತಿಯ ಫೋಟೊ ತೆಗೆಯಲಾಗುತ್ತದೆ. ನಂತರದ ಹಂತದಲ್ಲಿ ಒ.ಆರ್.ಐ.ಎಸ್ ನಕ್ಷೆ ಸಿದ್ಧಪಡಿಸಲಾಗುತ್ತದೆ’ ಎಂದು ವಿವರಿಸಿದರು.
ಈ ಕಾರ್ಯಕ್ಕೆಂದೇ ತೆರೆಯುವ ಪ್ರತ್ಯೇಕ ಕಚೇರಿಯಲ್ಲಿ ಒಬ್ಬರು ಅಧಿಕಾರಿ, ಮೇಲುಸ್ತುವಾರಿ ಹಾಗೂ ಪರವಾನಗಿ ಹೊಂದಿರುವ ಐವರು ಸರ್ವೇಯರ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ. ಜಿಲ್ಲೆಗೆ ಹೊಸದಾಗಿ 36 ಮಂದಿ ಪರವಾನಗಿ ಸರ್ವೇಯರ್‌ಗಳ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದೆ. ಅವರನ್ನು ಮರು ಸಮೀಕ್ಷೆಗೆ ಬಳಸಿಕೊಳ್ಳಲು ಸಾಧ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶತಮಾನದ ನಂತರ ಸರ್ವೆ!:
ರಾಜ್ಯದಲ್ಲಿ ಆಸ್ತಿಗಳ ಮರು ಸಮೀಕ್ಷೆಯು ಬರೋಬ್ಬರಿ 102 ವರ್ಷಗಳ ನಂತರ ನಡೆಯುತ್ತಿದೆ. 1920ರಲ್ಲಿ ಬ್ರಿಟಿಷ್ ಸರ್ಕಾರವು ದೇಶದ ಎಲ್ಲ ಆಸ್ತಿಗಳ ಸಮೀಕ್ಷೆ ಕೈಗೊಂಡಿತ್ತು. 1928ರಿಂದ 1940ರ ನಡುವೆ ಹಿಸ್ಸಾ ಸರ್ವೆ ಮಾಡಿ ನಕಾಶೆ ಸಿದ್ಧಪಡಿಸಲಾಗಿತ್ತು. 1959ರಿಂದ 1965ರ ಅವಧಿಯಲ್ಲಿ ಆಸ್ತಿಗಳ ಮರು ವರ್ಗೀಕರಣ ಮಾಡಲಾಗಿತ್ತು.
ನಿಯಮದ ಪ್ರಕಾರ, ಎಲ್ಲ ಆಸ್ತಿಗಳನ್ನು ಪ್ರತಿ 30 ವರ್ಷಗಳಿಗೆ ಒಮ್ಮೆ ಮರು ಸಮೀಕ್ಷೆ ಮಾಡಬೇಕು. ಶತಮಾನದ ಹಿಂದೆ ಕೈಗೊಳ್ಳಲಾದ ಸಮೀಕ್ಷೆಯಲ್ಲಿ, ಕೈಯಲ್ಲೇ ಸಿದ್ಧಪಡಿಸಿದ ಆಸ್ತಿ ನಕಾಶೆಗಳು, ದಾಖಲೆಗಳು ಈಗ ಹಾನಿಗೀಡಾಗಿವೆ. ಸಂಬಂಧಿಸಿದ ಇಲಾಖೆಗಳಲ್ಲಿ ಅವುಗಳನ್ನು ಸಂರಕ್ಷಿಸಿ ಇಟ್ಟುಕೊಳ್ಳುವುದು, ಅಗತ್ಯ ಸಂದರ್ಭಗಳಲ್ಲಿ ತೆರೆಯುವುದೇ ಅಧಿಕಾರಿಗಳು, ಸಿಬ್ಬಂದಿಗೆ ಸವಾಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ದಾಖಲೆಗಳಿಗೆ ಆ ಆತಂಕವಿಲ್ಲ ಎಂಬುದು ಅಧಿಕಾರಿಗಳ ವಿಶ್ವಾಸವಾಗಿದೆ.
* ಖಾಸಗಿ ಮತ್ತು ಸರ್ಕಾರಿ ಆಸ್ತಿಗಳ ಮರು ಸರ್ವೆಯಿಂದ ಮಾಲೀಕತ್ವ ಕಾರ್ಡ್ ವಿತರಣೆ, ಆಸ್ತಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.
– ರುದ್ರಣ್ಣ ಗೌಡ, ಉಪ ನಿರ್ದೇಶಕ, ಭೂ ದಾಖಲೆಗಳ ಇಲಾಖೆ
* ಆಧುನಿಕ ತಂತ್ರಜ್ಞಾನ ಬಳಸಿ ಆಸ್ತಿಗಳ ಮರು ಸರ್ವೆ ಮಾಡಲಾಗುತ್ತದೆ. ಇದರಿಂದ ನಿಖರವಾದ ಡಿಜಿಟಲ್ ನಕ್ಷೆ ಸಿದ್ಧವಾಗಿ, ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.
– ರಾಜು ಮೊಗವೀರ, ಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.