ADVERTISEMENT

ಕಾರವಾರ: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸಿದ್ಧತೆ

‘ಲ್ಯಾಂಡ್ ಬೀಟ್’ ಆ್ಯಪ್ ಮೂಲಕ ಶೇ 80ರಷ್ಟು ಸಮೀಕ್ಷೆ ಪೂರ್ಣ

ಗಣಪತಿ ಹೆಗಡೆ
Published 18 ಆಗಸ್ಟ್ 2024, 5:19 IST
Last Updated 18 ಆಗಸ್ಟ್ 2024, 5:19 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಕಾರವಾರ: ಸರ್ಕಾರಿ ಭೂಮಿ ಇದ್ದರೂ ಒತ್ತುವರಿಯಾಗುತ್ತಿರುವ ಪರಿಣಾಮ ಸರ್ಕಾರದ ಯೋಜನೆಗಳಿಗೆ ಜಾಗ ಸಿಗುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ವೇಗ ನೀಡಲು ಕಂದಾಯ ಇಲಾಖೆ ಮುಂದಾಗಿದ್ದು, ಜಿಲ್ಲೆಯಲ್ಲಿ ಸರ್ವೆ ಕಾರ್ಯ ಚುರುಕುಗೊಂಡಿದೆ.

ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಮಾಹಿತಿ ಕ್ರೂಢೀಕರಣಕ್ಕೆ ‘ಲ್ಯಾಂಡ್ ಬೀಟ್’ ಎಂಬ ಮೊಬೈಲ್ ಆ್ಯಪ್‍ನ್ನು ಆರು ತಿಂಗಳ ಹಿಂದಷ್ಟೆ ಇಲಾಖೆ ಪರಿಚಯಿಸಿದೆ. ಅದರ ಮೂಲಕ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಸಮೀಕ್ಷೆ ಕೈಗೊಳ್ಳಲಾಗಿದೆ.

ADVERTISEMENT

ಜಿಲ್ಲೆಯಲ್ಲಿರುವ 36,926 ಎಕರೆ ಸರ್ಕಾರಿ ಭೂಮಿ ಪೈಕಿ 4,011 ಎಕರೆಯಷ್ಟು ಒತ್ತುವರಿಯಾಗಿವೆ. ಈ ಪೈಕಿ ಅಕ್ರಮ–ಸಕ್ರಮ ಯೋಜನೆ ಅಡಿ 2,800 ಎಕರೆಗೂ ಹೆಚ್ಚು ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಕೆಯಾಗಿದೆ. ಕೆಲ ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಅವುಗಳ ಹೊರತಾಗಿಯೂ 370.12 ಎಕರೆಯಷ್ಟು ಭೂಮಿಯ ಒತ್ತುವರಿಯಾಗಿರುವುದು ಲ್ಯಾಂಡ್ ಬೀಟ್ ಆ್ಯಪ್ ಸಮೀಕ್ಷೆ ಮೂಲಕ ಖಚಿತವಾಗಿದೆ.

‘ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮವಾರು ಸಮೀಕ್ಷೆ ನಡೆಸಿದ್ದಾರೆ. ಒತ್ತುವರಿಯಾದ ಸ್ಮಶಾನ, ಕೆರೆ ಮತ್ತು ಸರ್ಕಾರಿ ಪಡಾ ಸಮೀಕ್ಷೆಗೆ ಆದ್ಯತೆ ನೀಡಲಾಗಿದೆ. ರಸ್ತೆ, ಶಾಲೆ, ಸರ್ಕಾರಿ ಇಲಾಖೆಗಳಿಗೆ ನೀಡಲಾದ ಜಾಗಗಳನ್ನು ಸಮೀಕ್ಷೆ ಪಟ್ಟಿಯಿಂದ ಕೈಬಿಡಲಾಗಿದೆ. ಒತ್ತುವರಿಯಾಗಿರುವ ಜಾಗದ ಕುರಿತು ಡಿಜಿಟಲ್ ಮಾಹಿತಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ’ ಎಂದು ತಹಶೀಲ್ದಾರ ಒಬ್ಬರು ತಿಳಿಸಿದರು.

‘ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಮಾಹಿತಿಯನ್ನು ಕಲೆಹಾಕಲಾಗಿದೆ. ಕಂದಾಯ ಇಲಾಖೆ ಪರಿಚಯಿಸಿರುವ ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಸಮೀಕ್ಷೆ ನಡೆಸಿದ್ದರಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ. ಈಗಾಗಲೆ ಶೇ.80 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಇಲಾಖೆಯ ಮಾರ್ಗಸಚಿ ಆಧರಿಸಿ ಒತ್ತುರಿಯಾದ ಜಾಗ ತೆರವುಗೊಳಿಸಲು ಕ್ರಮವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.

ಅಂಕಿ–ಅಂಶ

ಒತ್ತುವರಿಯಾದ ಸರ್ಕಾರಿ ಭೂಮಿ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ. ತೆರವುಗೊಳಿಸಲು ಇಲಾಖೆಯ ಮಾರ್ಗಸೂಚಿಗೆ ಕಾಯಲಾಗುತ್ತಿದೆ
ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.