ADVERTISEMENT

ಕಾರವಾರ: ತೂಗುಯ್ಯಾಲೆಯಲ್ಲಿ ಕರಾವಳಿ ಉತ್ಸವ

ಸಮೀಪಿಸಿದ ಪರೀಕ್ಷೆ; ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ

ಗಣಪತಿ ಹೆಗಡೆ
Published 24 ಫೆಬ್ರುವರಿ 2023, 19:30 IST
Last Updated 24 ಫೆಬ್ರುವರಿ 2023, 19:30 IST
2018ರಲ್ಲಿ ನಡೆದಿದ್ದ ಕರಾವಳಿ ಉತ್ಸವದಲ್ಲಿ ಬಾಲಿವುಡ್ ಗಾಯಕಿ ನೀತಿ ಮೋಹನ್ ಹಾಡಿಗೆ ಚಿಣ್ಣರು ವೇದಿಕೆಯ ಮೇಲೇರಿ ನರ್ತಿಸಿದ್ದರು
2018ರಲ್ಲಿ ನಡೆದಿದ್ದ ಕರಾವಳಿ ಉತ್ಸವದಲ್ಲಿ ಬಾಲಿವುಡ್ ಗಾಯಕಿ ನೀತಿ ಮೋಹನ್ ಹಾಡಿಗೆ ಚಿಣ್ಣರು ವೇದಿಕೆಯ ಮೇಲೇರಿ ನರ್ತಿಸಿದ್ದರು   

ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ಮುಂಚೆಯೇ ಇಲ್ಲಿನ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಕರಾವಳಿ ಉತ್ಸವ ಆಚರಿಸಲು ಪ್ರಯತ್ನ ನಡೆದಿದೆ. ನಾಲ್ಕು ವರ್ಷಗಳಿಂದ ಉತ್ಸವ ನಡೆಸಿಲ್ಲ ಎಂಬ ಆರೋಪದಿಂದ ಮುಕ್ತಗೊಳ್ಳಲು ಸ್ಥಳೀಯ ಶಾಸಕಿ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ.

ಉತ್ಸವ ಆಯೋಜನೆಗೆ ಅಗತ್ಯ ಟೆಂಡರ್ ಪ್ರಕ್ರಿಯೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಆದರೆ ಈವರೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯ ಭರವಸೆ ಸಿಕ್ಕಿಲ್ಲ. ಇದರಿಂದ ಉತ್ಸವಕ್ಕೆ ಪೂರ್ಣ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಅಲ್ಲದೆ ಮಾರ್ಚ್ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ, ಇತರ ತರಗತಿಗಳ ಪರೀಕ್ಷೆಗಳು ನಡೆಯಲಿದೆ. ಇಂತಹ ಹೊತ್ತಲ್ಲಿ ಉತ್ಸವ ಆಚರಣೆಗೆ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪವೂ ಇದೆ.

ADVERTISEMENT

2018ರ ಡಿಸೆಂಬರ್‌ನಲ್ಲಿ ಉತ್ಸವ ನಡೆದ ಬಳಿಕ ಇಲ್ಲಿ ಕರಾವಳಿ ಉತ್ಸವ ಆಯೋಜನೆಗೊಂಡಿಲ್ಲ. ಅಂದು ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದ ಅವಧಿಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಉತ್ಸವ ನಡೆಸಲು ಮುತುವರ್ಜಿ ವಹಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈವರೆಗೆ ಉತ್ಸವ ನಡೆಸಿಲ್ಲ.

2019ರಲ್ಲಿ ಉತ್ಸವ ಆಯೋಜನೆಗೆ ಮುಂದಾಗಲಾಗಿತ್ತಾದರೂ ಅದೇ ವರ್ಷ ಜುಲೈ, ಆಗಸ್ಟ್‌ನಲ್ಲಿ ಕದ್ರಾ, ಮಲ್ಲಾಪುರ ಭಾಗದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಆ ವರ್ಷ ಉತ್ಸವ ಆಯೋಜನೆ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು. 2020ರಲ್ಲಿಯೂ ಪುನಃ ನೆರೆ ಹಾವಳಿ ಉಂಟಾಗಿತ್ತು. ಆ ಬಳಿಕ ಸತತ ಎರಡು ವರ್ಷ ಕೋವಿಡ್ ಸ್ಥಿತಿ ಎದುರಾಗಿತ್ತು. ಇವೆಲ್ಲ ಕಾರಣದಿಂದ ಅದ್ಧೂರಿ ಉತ್ಸವ ಆಯೋಜನೆಗೊಂಡಿರಲಿಲ್ಲ.

‘ನಾಲ್ಕು ವರ್ಷಗಳಿಂದ ಉತ್ಸವ ನಡೆಯದಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ. ಈ ಹಿಂದೆ 2008 ರಿಂದ 2013ರವರೆಗೆ ಬಿಜೆಪಿ ಅಧಿಕಾರದಲ್ಲಿದ್ದ ಐದು ವರ್ಷ ಉತ್ಸವ ಆಯೋಜಿಸಿರಲಿಲ್ಲ. ಈಗಲೂ ಅದೇ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಉತ್ಸವ ನಡೆಸುತ್ತಿಲ್ಲ ಎಂಬ ಆರೋಪ ಎದುರಾಗುವುದು ಕಾಕತಾಳೀಯ’ ಎನ್ನುತ್ತಾರೆ ಕೋಡಿಬಾಗ ನಿವಾಸಿ ರಾಜೇಶ ನಾಯ್ಕ.

‘ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಾಗುವ ಹೊತ್ತಲ್ಲಿ ಉತ್ಸವ ನಡೆಸುವುದು ಸರಿಯಲ್ಲ’ ಎನ್ನುತ್ತಾರೆ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ.

ಕದಂಬೋತ್ಸವ ಆಚರಣೆ ಬೆನ್ನಲ್ಲೇ ಉತ್ಸವ: ‘ಮಾ.3ರಿಂದ 6ರವರೆಗೆ ಕರಾವಳಿ ಉತ್ಸವ ಆಚರಿಸಲು ಈ ಮೊದಲು ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಕದಂಬೋತ್ಸವ ದಿನ ಮುಂದೂಡಿಕೆಯಾಗಿದೆ. ಮಾ.1ರಂದು ಅಲ್ಲಿ ಉತ್ಸವ ಮುಗಿದ ಬಳಿಕ ಎರಡನೇ ದಿನದಲ್ಲಿ ಇನ್ನೊಂದು ಉತ್ಸವ ನಡೆಸಬೇಕಾಗುತ್ತದೆ. ಇದು ಸವಾಲಿನ ಕೆಲಸವೂ ಹೌದು. ಜತೆಗೆ ಚುನಾವಣೆಯೂ ಸಮೀಪಿಸಿದ ಕಾರಣ ಉತ್ಸವ ಆಯೋಜನೆಗೆ ತೊಡಕು ಉಂಟಾಗುವುದು ಸಹಜ. ಆದರೂ ಉತ್ಸವಕ್ಕೆ ಬೇಕಿರುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು.

**

ಕರಾವಳಿ ಉತ್ಸವ ಆಚರಣೆಗೆ ನೆರೆ ಹಾವಳಿ, ಕೋವಿಡ್ ಅಡ್ಡಿಯಾಗಿತ್ತು. ಈ ಬಾರಿ ಅವೆಲ್ಲ ತೊಡಕುಗಳ ನಿವಾರಣೆಯಾಗಿದ್ದರಿಂದ ಉತ್ಸವ ಆಚರಿಸಲು ತೀರ್ಮಾನಿಸಲಾಗಿದೆ.
–ರೂಪಾಲಿ ನಾಯ್ಕ, ಕಾರವಾರ ಶಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.