ಕಾರವಾರ: ‘ವಕ್ಫ್ ಹೆಸರಿನಲ್ಲಿ ದೇಶದಾದ್ಯಂತ ಜಾಗ ಲೂಟಿ ಮಾಡಲು ಪ್ರಯತ್ನ ನಡೆದಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆರೋಪಿಸಿದರು.
‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭೂಮಿ ಲೂಟಿ ನಿಯಂತ್ರಣಕ್ಕೆ ಮುಂದಾಗಿದೆ. ಅದಕ್ಕಾಗಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ರಾಜ್ಯದಲ್ಲಿ ಜಮೀರ್ ಅಹ್ಮದ್ ಅವರಂಥ ಸಚಿವರು ಒತ್ತಡ ಸೃಷ್ಟಿಸಿ ಪಹಣಿ ಬದಲಿಸಲು ಮುಂದಾಗಿದ್ದಾರೆ. ಸಚಿವ ಸ್ಥಾನದಂತ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಅವರ ಹಿಂದೆ ಮುಖ್ಯಮಂತ್ರಿ ಬೆಂಬಲವಾಗಿರಬಹುದು ಎಂಬ ಶಂಕೆ ಇದೆ’ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ, ‘ವಕ್ಫ್ ಕಾಯ್ದೆ ವಿರೋಧಿಸಿ ನ.4 ರಂದು ಜಿಲ್ಲೆಯಾದ್ಯಂತ ‘ಪಹಣಿ ತೆಗೆಸಿ ಜಮೀನು ಉಳಿಸಿ’ ಘೋಷಣೆಯಡಿ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ. ವಕ್ಪ್ ಮಸೂದೆ ತಿದ್ದುಪಡಿಗೆ ಮೋದಿ ಸರ್ಕಾರ ಸಂಸತ್ ನಲ್ಲಿ ಚರ್ಚೆ ನಡೆಸಿದಾಗ ವಿರೋಧ ಪಕ್ಷದ ನಾಯಕರು ವಿರೋಧಿಸಿದ್ದರು. ರಾಜ್ಯದಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗುತ್ತಿದೆ. ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ತಾವು ಮುಖ್ಯಮಂತ್ರಿ ಸೂಚನೆ ಮೇರೆಗೆ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಿರುವುದಾಗಿ ತಿಳಿಸಿದ್ದಾರೆ. ಒಂದೋ ಮುಖ್ಯಮಂತ್ರಿ ಈ ಬಗ್ಗೆ ಸ್ಪಷ್ಟನೆ ನೀಡಲಿ ಇಲ್ಲವೆ ಕೇಂದ್ರ ಸರ್ಕಾರ ಮಸೂದೆಗೆ ತಿದ್ದುಪಡಿ ತರಲು ಹೊರಟಿದ್ದಕ್ಕೆ ಬೆಂಬಲಿಸಲಿ’ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ್, ಸಂಜಯ ಸಾಳುಂಕೆ, ನಾಗರಾಜ ನಾಯಕ, ಸುಭಾಶ ಗುನಗಿ, ಕಿಶನ್ ಕಾಂಬ್ಳೆ, ಸುಜಾತಾ ಬಾಂದೇಕರ್, ಪೂಜಾ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.