ADVERTISEMENT

ಕೇರಳ ಒತ್ತಡಕ್ಕೆ ಮಣಿದವರಿಗೆ ಸ್ಥಳೀಯರ ಕಾಳಜಿ ಇಲ್ಲ: ಪ್ರಣವಾನಂದ ಸ್ವಾಮೀಜಿ ಆರೋಪ

ರಾಷ್ಟ್ರೀಯ ಈಡಿಗ ಮಹಾಮಂಡಳದ ಪ್ರಣವಾನಂದ ಶ್ರೀ ಆರೋಪ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 15:43 IST
Last Updated 10 ಅಕ್ಟೋಬರ್ 2024, 15:43 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಅಂಕೋಲಾ: ‘ಕೇರಳ ಸರ್ಕಾರದ ಒತ್ತಡಕ್ಕೆ ಮಣಿದು ಶಿರೂರು ದುರ್ಘಟನೆಯಲ್ಲಿ ಮೃತಪಟ್ಟ ಚಾಲಕ ಅರ್ಜುನ್ ಅವರ ಮೃತದೇಹ ಪತ್ತೆ ಮಾಡಿ, ಹಸ್ತಾಂತರಿಸಲಾಗಿದೆ. ಕಣ್ಮರೆಯಾದ ಸ್ಥಳೀಯರ ಹುಡುಕಾಟಕ್ಕೆ ಜಿಲ್ಲಾಡಳಿತ ಆಸಕ್ತಿ ತೋರಿಸಿಲ್ಲ’ ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಅರ್ಜುನ್ ಮೃತದೇಹ ದೊರಕಿದ ನಂತರ ಶಾಸಕ ಸತೀಶ ಸೈಲ್ ಕೇರಳಕ್ಕೆ ತೆರಳಿ ಪರಿಹಾರ ನೀಡಿ ಬಂದಿದ್ದಾರೆ. ಆದರೆ, ದುರಂತ ನಡೆದು ಮೂರು ತಿಂಗಳು ಸಮೀಪಿಸುತ್ತ ಬಂದರೂ ಸ್ಥಳೀಯ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಅವರ ಮನೆಗೆ ಒಮ್ಮೆಯೂ ಭೇಟಿ ನೀಡಿಲ್ಲ. ಉಳುವರೆಯಲ್ಲಿ ಮನೆ ಕಳೆದುಕೊಂಡ ಜನರಿಗೆ ಬೇರೆ ಜಾಗ ಮನೆ ನೀಡುವ ಭರವಸೆ ನೀಡಿದರೂ ಕ್ರಮವಾಗಿಲ್ಲ. ಕಾರ್ಯಾಚರಣೆ ಹೆಸರಲ್ಲಿ ಪ್ರಚಾರಗಿಟ್ಟಿಸಿಕೊಳ್ಳುವ ಕೆಲಸ ನಡೆದಿದೆಯೇ ವಿನಃ, ಸ್ಥಳೀಯರ ಮೇಲೆ ಕಾಳಜಿ ಇಲ್ಲ’ ಎಂದು ದೂರಿದರು.

‘ನಿಯಮಗಳನ್ನು ಪಾಲಿಸದೆ ಹೆದ್ದಾರಿ ಕಾಮಗಾರಿ ಕೈಗೊಂಡ ಪರಿಣಾಮ ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ತಪ್ಪಿತಸ್ಥರ ಮೇಲೆ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಅಂಕೋಲಾ ಜೆಎಂಎಫ್‍ಸಿ ನ್ಯಾಯಾಲಯ ಆದೇಶಿಸಿದೆ. ಕಂಪನಿಯ ಅಧಿಕಾರಿಗಳ ಮೇಲೆ ದೂರು ಸಲ್ಲಿಸಿದರೂ ಅವರ ಮೇಲೆ ಎಫ್.ಐ.ಆರ್ ದಾಖಲಾಗಿರಲಿಲ್ಲ. ನ್ಯಾಯಾಲಯ ತನಿಖೆಗೆ ಆದೇಶ ನೀಡಿರುವುದರಿಂದ ಎಫ್. ಐ.ಆರ್ ದಾಖಲಾಗಲಿದೆ’ ಎಂದರು.

ADVERTISEMENT

ಮಂಡಳದ ರಾಜೇಶ ನಾಯ್ಕ, ದಾಮೋದರ ನಾಯ್ಕ, ರಮೇಶ ನಾಯ್ಕ, ನಾಗರಾಜ ಮಂಜಗುಣಿ, ರಮೇಶ ನಾಯ್ಕ, ಶ್ರೀಪಾದ ನಾಯ್ಕ ಇದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಐ.ಆರ್.ಬಿ ಕಂಪನಿಯ ಮೇಲೆ ಕ್ರಮಕ್ಕೆ ಮುಂದಾಗಿಲ್ಲ
ಪ್ರಣವಾನಂದ ಸ್ವಾಮೀಜಿ ರಾಷ್ಟ್ರೀಯ ಈಡಿಗ ಮಹಾ ಮಂಡಳದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.