ADVERTISEMENT

ಡೋನೇಷನ್‌ ಹಾವಳಿ ತಡೆಯಲು ಡಿ. ಸ್ಯಾಮ್ಸನ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮೇ 2024, 14:44 IST
Last Updated 29 ಮೇ 2024, 14:44 IST

ದಾಂಡೇಲಿ: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ, ಶೂ-ಸಾಕ್ಸ್, ಟೈ, ಬೆಲ್ಟ್, ಸ್ಮಾರ್ಟ್‌ಕ್ಲಾಸ್, ಭೋದನಾ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳನ್ನು ಹೆಚ್ಚಳ ಮಾಡಿ ಡೊನೇಷನ್ ಸಹಿತ ಹಣ ವಸೂಲಿ ಮಾಡಲು ಮುಂದಾಗಿರುವುದು  ಖಂಡನೀಯ ಎಂದು ಡಿವೈಎಫ್ಐ ಸದಸ್ಯ ಹಾಗೂ ಕರ್ನಾಟಕ ಮುನಿಸಿಪಲ್ ಪೌರಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಡಿ ಸ್ಯಾಮ್ಸನ್ ಹೇಳಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ರಾಜ್ಯದಲ್ಲಿ ಶಾಲೆಗಳು ಈಗಾಗಲೇ ನರ್ಸರಿಯಿಂದ ಎಲ್ಲ ಹಂತದ ತರಗತಿಯ ಪ್ರವೇಶ ಪ್ರಾರಂಭಿಸಿ ಪಾಲಕರಿಂದ ಮನಬಂದಂತೆ ಡೊನೇಷನ್ ವಸೂಲಿಗೆ ಮುಂದಾಗಿವೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಹಣ ವಸೂಲಿಗೆ ಮುಂದಾದರೂ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ಆಯುಕ್ತರು, ಹೆಚ್ಚುವರಿ ಆಯುಕ್ತರು, ವಿವಿಧ ಜಿಲ್ಲೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೌನವಾಗಿರುವುದು ಏಕೆ’ ಎಂದು ಅವರು ಪ್ರಶ್ನಿಸಿದರು.

‘2024-25ನೇ ಶೈಕ್ಷಣಿಕ ವರ್ಷದ ವಾರ್ಷಿಕ ಶುಲ್ಕದಲ್ಲಿ ಕೇವಲ ಬೋಧನಾ ಶುಲ್ಕ ಮಾತ್ರ ತೆಗೆದುಕೊಳ್ಳಲು ಆದೇಶ ಮಾಡಬೇಕು. ಆನ್‌ಲೈನ್ ಶಿಕ್ಷಣ ನೀಡುವುದು ಸರಿಯಾದ ಕ್ರಮವಲ್ಲ. ರೋಸ್ಟರ್ ನಿಯಮ ಜಾರಿ ಮಾಡಿ, ಶುಲ್ಕವನ್ನು ನಿಗದಿಗೊಳಿಸಿ ಶಾಲೆಯ ಮುಂಭಾಗದಲ್ಲಿ ಹಾಕಬೇಕು ಎಂಬ ನಿಯಮ ಇದ್ದರೂ ರಾಜ್ಯದಲ್ಲಿ ಯಾವ ಶಾಲೆಗಳೂ ಸಹ ಈ ನಿಯಮ ಪಾಲಿಸುತ್ತಿಲ್ಲ’ ಎಂದು ದೂರಿದರು.

ADVERTISEMENT

‘ನಿಯಮ ಪಾಲಿಸದ ಶಾಲೆಗಳ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಿ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ನಿಯಂತ್ರಣ ಪ್ರಾಧಿಕಾರ ರಚಿಸಿ ಶಾಲೆಗಳ ಮೇಲೆ ಕ್ರಮ ಜರುಗಿಸಬೇಕು. ಸಂಘಟನೆಯ ಮುಖಂಡರನ್ನು, ಪಾಲಕರನ್ನು ಒಳಗೊಂಡಂತೆ ಜಂಟಿ ಸಭೆ ನಡೆಸಬೇಕು’ ಎಂದು ಒತ್ತಾಯಿಸಿದರು. ಕೆಲವು ಖಾಸಗಿ ಶಾಲೆಗಳು ಆರ್‌ಟಿಇ–2009 ರ ಕಾಯ್ದೆ ಉಲ್ಲಂಘನೆ ಮಾಡಿ ಮಕ್ಕಳಿಗೆ ಪ್ರವೇಶ ಕೊಡಲು ಪ್ರವೇಶ ಪರೀಕ್ಷೆ ಮಾಡುತ್ತಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.

ಸ್ಥಳೀಯವಾಗಿ, ಪ್ರಾದೇಶಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆರ್‌ಟಿಇ ಸಮರ್ಪಕವಾಗಿ ಜಾರಿಮಾಡದ ಮತ್ತು ಶುಲ್ಕ ನಿಯಮಿತವಾಗಿ ಪಡೆಯದೇ ಅನಿಯಮಿತವಾಗಿ ಪಡೆಯುತ್ತಿರುವ ಖಾಸಗಿ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಕ್ಷಣ ಪಾಲಕರು, ಪೋಷಕರ ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ಕರೆದು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನ ಪಾಲಿಸಲು ಆದೇಶಿಸಬೇಕು. ಖಾಸಗಿ ಶಾಲೆಗಳು ತಮಗೆ ಬೇಕಾದ ಹಾಗೆ ಶುಲ್ಕ ವಸೂಲಿ ಮಾಡುತ್ತಿರುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.