ADVERTISEMENT

ಕಾರವಾರ | ಮುರಿದು ಬಿದ್ದಿರುವ ಆಟಿಕೆ ದುರಸ್ತಿಪಡಿಸಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 14:33 IST
Last Updated 6 ಡಿಸೆಂಬರ್ 2023, 14:33 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿರುವ ಮಕ್ಕಳ ಉದ್ಯಾನದಲ್ಲಿನ ಆಟಿಕೆ ಮುರಿದು ಬಿದ್ದಿರುವುದು
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿರುವ ಮಕ್ಕಳ ಉದ್ಯಾನದಲ್ಲಿನ ಆಟಿಕೆ ಮುರಿದು ಬಿದ್ದಿರುವುದು   

ಕಾರವಾರ: ನಗರದ ಟ್ಯಾಗೋರ್ ಕಡಲತೀರದಲ್ಲಿರುವ ಮಕ್ಕಳ ಉದ್ಯಾನದಲ್ಲಿ ಅಳವಡಿಸಲಾಗಿರುವ ಆಟಿಕೆ ಸಾಮಗ್ರಿಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ತುಕ್ಕು ಹಿಡಿದ ಆಸನಗಳು, ಮುರಿದು ಬಿದ್ದಿರುವ ಜಾರುಬಂಡಿಯಲ್ಲಿ ಮಕ್ಕಳು ಆಡುವ ಅನಿವಾರ್ಯತೆ ಉಂಟಾಗಿದೆ.

ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಕ್ಕಳಿಗೆ ಮನರಂಜನೆ ಒದಗಿಸುತ್ತಿದ್ದ ತಾಣದಲ್ಲಿ ಈಗ ಅಪಾಯ ಎದುರಾಗುವ ಭಯ ಹುಟ್ಟುವಂತಾಗಿದೆ. ಮಕ್ಕಳಿಗೆ ಈ ಮೊದಲು ನಿರಾಯಾಸವಾಗಿ ಆಟಕ್ಕೆ ಬಿಡಲು ಪಾಲಕರು ಸಮ್ಮತಿಸುತ್ತಿದ್ದರು. ಆದರೆ, ಈಗ ಪ್ರತಿ ಆಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಆಟಕ್ಕೆ ಬಿಡಬೇಕಾಗುತ್ತಿದೆ.

ಕೆಲವು ದಿನದ ಹಿಂದೆ ಮಕ್ಕಳು ಇಲ್ಲಿನ ಮುರಿದು ಬಿದ್ದ ಆಟಿಕೆಗಳಲ್ಲಿ ಆಡಲು ಹೋಗಿ ಗಾಯಗೊಂಡ ಘಟನೆ ನಡೆದಿದೆ. ಮಕ್ಕಳಿಗೆ ಮೀಸಲಿಟ್ಟಿರುವ ಆಟಿಕೆಗಳಲ್ಲಿ ಪಾಲಕರು ಆಡಲು ಮುಂದಾಗಿ ತುಕ್ಕು ಹಿಡಿದ ಕಬ್ಬಿಣದ ತುಣುಕಿನಿಂದ ಗಾಯಗೊಂಡ ಘಟನೆಯೂ ನಡೆದಿದೆ.

ADVERTISEMENT

ಸ್ಥಾಪನೆಗೊಂಡು ಹಲವು ವರ್ಷಗಳಾಗಿರುವ ಉದ್ಯಾನ ಸೂಕ್ತ ನಿರ್ವಹಣೆ ಇಲ್ಲದೆ ಇಂತಹ ದುಸ್ಥಿತಿ ಬಂದಿದೆ. ಆಟಿಕೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ನಿರ್ವಹಣೆ ಮಾಡಿದರೆ ಅನುಕೂಲವಾಗುತ್ತದೆ.

– ಕೃಷ್ಣಾನಂದ ಪೆಡ್ನೇಕರ್, ಕಾರವಾರ

ನಿರ್ವಹಣೆ ಇಲ್ಲದೆ ಸೊರಗಿರುವ ಜಿಲ್ಲಾ ಕ್ರೀಡಾಂಗಣ

ಶಿರಸಿ: ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣವು ಸೂಕ್ತ ನಿರ್ವಹಣೆಯ ಕೊರತೆಯ ಸಮಸ್ಯೆ ಎದುರಿಸುತ್ತಿದ್ದು, ಪ್ರೇಕ್ಷಕರ ಗ್ಯಾಲರಿಯ ಶೆಡ್‍ಗಳು ತುಕ್ಕು ಹಿಡಿದು ಹಾಳಾಗುತ್ತಿವೆ.

ನೂರಾರು ಕ್ರೀಡಾಪಟುಗಳಿಗೆ, ಕ್ರೀಡಾಸಕ್ತರಿಗೆ ಅನುಕೂಲಕರವಾಗಿರುವ ಮೈದಾನದಲ್ಲಿ ಓಟದ ಪಥ ಸರಿಪಡಿಸಿದ್ದು ಬಿಟ್ಟರೆ ಉಳಿದ ಅಭಿವೃದ್ಧಿ ಚಟುವಟಿಕೆ ಶೂನ್ಯವಾಗಿದೆ. ಮಳೆಗಾಲ ಮುಗಿದ ಬಳಿಕ ಓಟದ ಪಥವೂ ಅಸ್ತವ್ಯಸ್ತವಾದಂತಿದೆ. ಆಟಕ್ಕೆ ಸೂಕ್ತ ರೀತಿಯಲ್ಲಿ ಮೈದಾನವನ್ನು ಇನ್ನಷ್ಟು ವ್ಯವಸ್ಥಿತಗೊಳಿಸುವ ಅವಕಾಶವಿದ್ದರೂ ಅದನ್ನು ಮಾಡಿಲ್ಲ.

ಮೈದಾನದ ಸುತ್ತವಿರುವ ಪ್ರೇಕ್ಷಕರ ಗ್ಯಾಲರಿಯ ಮೇಲಿನ ಭಾಗ ವಾಕಿಂಗ್ ಪಾತ್ ಆಗಿಯೂ ಬಳಕೆಯಾಗುತ್ತಿದೆ. ಇಲ್ಲಿ ಪ್ರತಿನಿತ್ಯ ಬೆಳಿಗ್ಗೆ, ಸಂಜೆ ವಾಯುವಿಹಾರಕ್ಕೆ ನೂರಾರು ಜನರು ಭೇಟಿ ನೀಡುತ್ತಾರೆ. ಆದರೆ ಕಾಂಕ್ರೀಟ್ ಪಾತ್ ಅಲ್ಲಲ್ಲಿ ಕಿತ್ತಿದೆ. ಇದರಿಂದ ವಾಕಿಂಗ್ ಮಾಡುವವರಿಗೂ ನಡೆದಾಡಲು ಕಷ್ಟವಾಗುತ್ತಿದೆ. ಪಂದ್ಯಾವಳಿಗಳು ನಡೆಯುವಾಗ ಪ್ರೇಕ್ಷಕರಿಗೆ ನೆರಳಿನ ವ್ಯವಸ್ಥೆ ಇಲ್ಲದೆ ಬಿಸಿಲಿನಲ್ಲಿ ಕುಳಿತು ನೋಡಬೇಕಾಗುತ್ತದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಆದ್ಯತೆ ನೀಡಿದರೆ ಅನುಕೂಲ.

– ಪಿ.ಎಸ್.ಹೆಗಡೆ, ಶಿರಸಿ

ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯ ಶೆಡ್ ತುಕ್ಕು ಹಿಡಿದು ಹಾಳಾಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.