ADVERTISEMENT

ಕಾರವಾರ | ಮೊದಲ ಸಾಗರಜೀವಿ ಪುನರ್ವಸತಿ ಕೇಂದ್ರ? ವಿಶ್ವ ಬ್ಯಾಂಕ್‍ಗೆ ಪ್ರಸ್ತಾವ

ಕೆ–ಶೋರ್ ಯೋಜನೆಯಡಿ ಸ್ಥಾಪನೆಗೆ ಬೇಡಿಕೆ

ಗಣಪತಿ ಹೆಗಡೆ
Published 23 ಅಕ್ಟೋಬರ್ 2024, 5:24 IST
Last Updated 23 ಅಕ್ಟೋಬರ್ 2024, 5:24 IST
ಕಾರವಾರದ ಕೋಡಿಬಾಗದಲ್ಲಿರುವ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ಉದ್ಯಾನದ ಪ್ರವೇಶದ್ವಾರ
ಕಾರವಾರದ ಕೋಡಿಬಾಗದಲ್ಲಿರುವ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ಉದ್ಯಾನದ ಪ್ರವೇಶದ್ವಾರ   

ಕಾರವಾರ: ಅಪಾಯಕ್ಕೆ ತುತ್ತಾದ ಅಳಿವಿನ ಅಂಚಿನಲ್ಲಿರುವ ಸಾಗರ ಜೀವಿಗಳಿಗೆ ಚಿಕಿತ್ಸೆ ಒದಗಿಸುವ ಮತ್ತು ಅವುಗಳ ಜೀವನ ಕ್ರಮವನ್ನು ಅಭ್ಯಸಿಸಲು ಅನುಕೂಲವಾಗುವ ಸಂಶೋಧನಾ ಕೇಂದ್ರ ಒಳಗೊಂಡ ರಾಜ್ಯದ ಮೊದಲ ಸಾಗರ ಜೀವಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವನ್ನು (ಮರೈನ್ ಮೆಗಾ ಫೌನಾ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಶನ್ ಸೆಂಟರ್) ಸ್ಥಾಪಿಸಲು ಕಾರವಾರ ಅರಣ್ಯ ಉಪವಿಭಾಗ ಪ್ರಯತ್ನ ಕೈಗೊಂಡಿದೆ.

ಇಲ್ಲಿನ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿಯೇ ಕೇಂದ್ರವನ್ನು ಸ್ಥಾಪಿಸಲು ಅಂದಾಜು ₹4.5 ಕೋಟಿ ವೆಚ್ಚದ ಕ್ರಿಯಾಯೋಜನೆ ಒಳಗೊಂಡ ಪ್ರಸ್ತಾವವನ್ನು ಅರಣ್ಯ ಇಲಾಖೆಯ ಮೂಲಕ ವಿಶ್ವಬ್ಯಾಂಕ್‍ಗೆ ಸಲ್ಲಿಸಲಾಗಿದೆ.

‘ಕೆ–ಶೋರ್ (ಕರ್ನಾಟಕ–ಸಾಗರ ಸಂಪನ್ಮೂಲಗಳ ಮೇಲ್ಮೈ ಸುಸ್ಥಿರ ಹಾರ್ವೆಸ್ಟ್) ಯೋಜನೆಯಡಿ ಅಪರೂಪದ ಸಾಗರಜೀವಿಗಳನ್ನು ಸಂರಕ್ಷಿಸಲು, ಕಡಲತೀರ ಪ್ರದೇಶದಲ್ಲಿ ಸ್ವಚ್ಛತೆ ಸೇರಿದಂತೆ ಸಂರಕ್ಷಣೆ ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರವು ವಿಶ್ವಬ್ಯಾಂಕ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇದೇ ಯೋಜನೆಯ ಭಾಗವಾಗಿ ಸಂರಕ್ಷಣೆ ಮತ್ತು ಜಲಚರಗಳ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಮನವಿ ಮಾಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಪರಿಸರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಬರುವ ಅಳಿವಿಂಚಿನ ಆಲಿವ್ ರಿಡ್ಲೆ ಸೇರಿದಂತೆ ಪಶ್ಚಿಮ ಕರಾವಳಿಯಲ್ಲಿ ಕಾಣಸಿಗುವ ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್, ತಿಮಿಂಗಲಗಳು, ಇನ್ನಿತರ ಬಗೆಯ ಸಾಗರ ಜೀವಿಗಳ ಸಂರಕ್ಷಣೆ ಮಾಡುವ ಜತೆಗೆ ಅವು ಗಾಯಗೊಂಡು ಕಡಲತೀರಕ್ಕೆ ಬಂದು ಬಿದ್ದರೆ ಚಿಕಿತ್ಸೆ ಒದಗಿಸುವ ಆರೈಕೆ ಕೇಂದ್ರ, ಮೃತಪಟ್ಟ ಜಲಚರಗಳ ಮರಣೋತ್ತರ ಪರೀಕ್ಷೆ ನಡೆಸುವ ಕೇಂದ್ರ ಒಳಗೊಂಡ ಯೋಜನೆ ಇದಾಗಿರಲಿದೆ’ ಎಂದು ಕಾರವಾರ ಡಿಸಿಎಫ್ ಸಿ.ರವಿಶಂಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇವಲ ಸಂರಕ್ಷಣೆ ತಾಣವಾಗಿಯಷ್ಟೇ ಸೀಮಿತವಾಗಿರದೆ ಆಲಿವ್ ರಿಡ್ಲೆಯಂತಹ ಅಪರೂಪದ ಜೀವಿಗಳ ಜೀವನ ಕ್ರಮ ವಿವರಿಸುವ ವ್ಯವಸ್ಥೆ, ಅವುಗಳ ಮೊಟ್ಟೆ ಸಂರಕ್ಷಣೆಗೆ ವ್ಯವಸ್ಥೆ, ಅವುಗಳ ಜೀವನ ಕ್ರಮದ ಅಧ್ಯಯನಕ್ಕೆ ಪ್ರತ್ಯೇಕ ವಿಭಾಗ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಯೋಜನೆ ಒಳಗೊಂಡಿದೆ. ಕಟ್ಟಡ ಸ್ಥಾಪನೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಉದ್ಯಾನದಲ್ಲಿನ ಸಿ.ಆರ್.ಝಡ್ ವ್ಯಾಪ್ತಿಯ ಹೊರತಾದ ಪ್ರದೇಶ ಗುರುತಿಸಿದ್ದೇವೆ’ ಎಂದರು.

‘ಸಾಗರ ಜೀವಿಗಳಿಗೆ ಚಿಕಿತ್ಸೆ ಒದಗಿಸಲು, ಮರಣೋತ್ತರ ಪರೀಕ್ಷೆ ನಡೆಸಲು ನುರಿತ ವೈದ್ಯರು, ಸಂಶೋಧನೆಗೆ ಮತ್ತು ತರಬೇತಿ ಒದಗಿಸಲು ನುರಿತ ತಜ್ಞರ ನೇಮಕಾತಿಗೆ ಪ್ರಸ್ತಾವದಲ್ಲಿ ಬೇಡಿಕೆ ಇಡಲಾಗಿದೆ’ ಎಂದು ತಿಳಿಸಿದರು.

ಕೆ–ಶೋರ್ ಯೋಜನೆಯಡಿ ಸಾಗರ ಜೀವಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಸ್ಥಾಪನೆಯಾದರೆ ಅಳಿವಿನಂಚಿನ ಜೀವಿಗಳ ಸಂರಕ್ಷಣೆ ಮತ್ತು ಅವುಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ.
-ಸಿ.ರವಿಶಂಕರ್, ಕಾರವಾರ ಡಿಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.