ಅಂಕೋಲಾ: ತಾಲ್ಲೂಕಿನ ಬೆಳಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಗದ್ದೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮಂಗಲಾ ಸಂತೋಷ ಗೌಡ ಅವರ ಮನೆ ಗೋಡೆಯನ್ನು ಕೆಡವಿರುವ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮವನ್ನು ಪ್ರಾಂತ ರೈತ ಸಂಘ ಖಂಡಿಸಿದೆ.
ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಸಂಘದ ನಿಯೋಗ, ಮನೆ ಗೋಡೆ ಕೆಡವಿ ಹಾಕಿರುವುದನ್ನು ಪರಿಶೀಲನೆ ನಡೆಸಿತು.
ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಯಡಿ ಬಡ ಫಲಾನುಭವಿಗೆ ಮಂಜೂರಾಗಿದ್ದ ಮನೆಯನ್ನು ಕೆಡವಿರುವುದು ಅಮಾನುಷ ಮತ್ತು ಹೇಯ ಕೃತ್ಯ ಎಂದಿದೆ.
‘ಫಲಾನುಭವಿ ಬಡವರಾಗಿದ್ದು, ಅರಣ್ಯ ಇಲಾಖೆ ಗ್ರಾಮ ಪಂಚಾಯಿತಿ ಗಮನಕ್ಕೆ ತರದೇ, ಮನೆ ಮಾಲೀಕರಿಗೆ ನೋಟಿಸ್ ನೀಡದೇ ಮನೆ ಗೋಡೆ ಕೆಡವಿ ಲಕ್ಷಾಂತರ ರೂಪಾಯಿ ಹಾನಿ ಮಾಡಿರುವುದು ದೌರ್ಜನ್ಯ ಎಸಗಿದಂತಾಗಿದೆ’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ ನಾಯಕ ಆರೋಪಿಸಿದರು.
‘ದೌರ್ಜನ್ಯ ಎಸಗಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕುಟುಂಬಕ್ಕೆ ಆಗಿರುವ ಹಾನಿ ತುಂಬಿಸಿ, ಮನೆ ಕಟ್ಟಿಕೊಡಬೇಕು’ ಎಂದು ಆಗ್ರಹಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೌರೀಶ ನಾಯಕ, ರೈತ ಪರ ಹೋರಾಟಗಾರ ಜಿ.ಎಂ.ಶೆಟ್ಟಿ, ರಮಾನಂದ ನಾಯಕ ಅಚವೆ, ಉದಯ ಗುನಗಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.