ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಕಾರವಾರದ ಡಾ.ರಾಜು ತಳವಾರ್

ಪತ್ನಿಗೆ ಗರ್ಭಪಾತವಾಗಿದ್ದರೂ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ನಿರತರಾದ ಡಾ.ರಾಜು ತಳವಾರ್

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ಡಾ.ರಾಜು ತಳವಾರ್
ಡಾ.ರಾಜು ತಳವಾರ್   

ಕಾರವಾರ: ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ಈ ಯುವ ಡಾಕ್ಟರ್, ಕೋವಿಡ್ ಪೀಡಿತರ ಚಿಕಿತ್ಸೆಯಲ್ಲಿ ನಿಭಾಯಿಸಿದ ಜವಾಬ್ದಾರಿಯು ಸ್ಮರಣೀಯ. ತಮ್ಮ ವೈಯಕ್ತಿಕ ಸಮಸ್ಯೆಯನ್ನೂ ಬದಿಗೊತ್ತಿ ಸಾಂಕ್ರಾಮಿಕ ಸೋಂಕಿನ ವಿರುದ್ಧ ಹೋರಾಡಿದ್ದರು.

33 ವರ್ಷದ ಡಾ.ರಾಜು ತಳವಾರ್ ಇಂತಹ ಸಾಧಕರು. ಸಂಸ್ಥೆಯಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಕನ್ಸಲ್ಟೆಂಟ್ ಫಿಸಿಷಿಯನ್ ಹಾಗೂ ಸಹಾಯಕ ಪ್ರೊಫೆಸರ್ ಆಗಿ ಒಂದೂವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇ 6ರಿಂದ ಕೋವಿಡ್ 19 ರೋಗಿಗಳ ಚಿಕಿತ್ಸೆಗೆನಿಯುಕ್ತಿಗೊಂಡ ಅವರು, ಕೊರೊನಾದ ಆರಂಭಿಕ ದಿನಗಳಲ್ಲಿ ಇದ್ದ ಗೊಂದಲ, ಆತಂಕಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ.

‘ಸೋಂಕಿತರಲ್ಲಿ ಹಿರಿಯರು, ಮಹಿಳೆಯರು, ಮಕ್ಕಳೂ ಇದ್ದರು. ಕೆಲವರಿಗೆ ಮಧುಮೇಹ, ರಕ್ತದೊತ್ತಡ, ಹೃದಯದ ಸಮಸ್ಯೆಗಳೂ ಇದ್ದವು. ಅವರಿಗೆ ಚಿಕಿತ್ಸೆ ನೀಡುವುದು ಸ್ವಲ್ಪ ಸಂಕೀರ್ಣವಾಗಿತ್ತು. ಆಗ ಕೋವಿಡ್ ಚಿಕಿತ್ಸೆ ಬಗ್ಗೆ ವ್ಯವಸ್ಥಿತ ಮಾರ್ಗಸೂಚಿ ಇರಲಿಲ್ಲ. ಜನರೂ ತುಂಬ ಆತಂಕಕ್ಕೆ ಒಳಗಾಗಿದ್ದರು. ನಮಗೂ ಇದೊಂದು ಹೊಸ ಅನುಭವವಾಗಿತ್ತು. ಹಾಗಾಗಿ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದೆವು’ ಎಂದು ನೆನಪಿಸಿಕೊಂಡರು.

ADVERTISEMENT

‘ಇಂಥ ಸಂದರ್ಭದಲ್ಲೇ ಸೋಂಕಿತರ ಮೊದಲ ತಂಡದ ಚಿಕಿತ್ಸೆಗೆ ನಾನೂ ನಿಯೋಜಿತನಾದೆ. ಸಂಸ್ಥೆಯ ನಿರ್ದೇಶಕರು ನಮಗೆ ಧೈರ್ಯ ತುಂಬಿದ್ದರಿಂದ ಒಪ್ಪಿಕೊಂಡು ಕರ್ತವ್ಯ ನಿಭಾಯಿಸಿದೆ’ ಎಂದರು.

ಡಾ.ರಾಜು ತಳವಾರ್ ಅವರು ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಆರೋಗ್ಯ ತಪಾಸಣೆ ಮಾಡುತ್ತಿರುವುದು

‘ಆತ್ಮಸಂತೃಪ್ತಿ’: ‘ಮೇ 6ರಿಂದ ಸೋಂಕಿತರ ಚಿಕಿತ್ಸೆಗೆ ನಾನು ಸಿದ್ಧನಾಗಬೇಕಿತ್ತು. ಆದರೆ, ಮೇ 8ರಂದು ನನ್ನ ಪತ್ನಿಗೆ ಗರ್ಭಪಾತವಾಯಿತು. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ಅವರಿಗೆ ಈ ಬಗ್ಗೆ ಹೇಳಿದೆ. ಅವರು ಪತ್ನಿಯ ಬಳಿಗೆ ತೆರಳುವಂತೆ ಒತ್ತಾಯಿಸಿದರು. ಆಗ ಕೋವಿಡ್ ಚಿಕಿತ್ಸೆಯ ಬಗ್ಗೆ ಯಾರಿಗೂ ಅಷ್ಟೊಂದು ಮಾಹಿತಿ ಇರದಿದ್ದ ಕಾರಣ ನಾನೇ ನಿರ್ಧಾರ ತೆಗೆದುಕೊಂಡು ವೃತ್ತಿ ಕರ್ತವ್ಯ ಮುಂದುವರಿಸಿದೆ’ ಎಂದು ವಿವರಿಸಿದರು.

‘ಇಲ್ಲಿ ನಾನು ಚಿಕಿತ್ಸೆ ನೀಡಿದ ಸೋಂಕಿತರು ಕೆಲವು ದಿನಗಳಲ್ಲಿ ಗುಣಮುಖರಾದರು. ಅತ್ತ ಪತ್ನಿಯೂ ಸಂಪೂರ್ಣವಾಗಿ ಚೇತರಿಸಿಕೊಂಡರು. ನನ್ನ ವೃತ್ತಿಗೆ ಅವರೂ ಪ್ರೋತ್ಸಾಹಿಸಿದರು. ಇದು ಆತ್ಮಸಂತೃಪ್ತಿ ನೀಡಿತು. ಈಗಲೂ ನಿಗದಿತ ಅವಧಿಯಲ್ಲಿ ಕೋವಿಡ್ ಕರ್ತವ್ಯದಲ್ಲಿ ನನ್ನನ್ನೂ ಒಳಗೊಂಡಂತೆ ವೈದ್ಯರ ತಂಡ ಕೆಲಸ ಮಾಡುತ್ತಿದೆ’ ಎಂದು ವಿಶ್ವಾಸದಿಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.