ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಸಿದ್ದಾಪುರದ 'ಪಾಂಡುರಂಗ'

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ಪಾಂಡುರಂಗ ಎಂ. ಸ್ವಾಮಿ
ಪಾಂಡುರಂಗ ಎಂ. ಸ್ವಾಮಿ   

ಸಿದ್ದಾಪುರ (ಉತ್ತರ ಕನ್ನಡ): ‘ಲಾಕ್‌ಡೌನ್‌ ಸಮಯದಲ್ಲಿ ಜನರಿಗೆ ನೇರವಾಗಿ ಸಹಾಯ ನೀಡಿದರೆ ಹೆಚ್ಚು ಉಪಯುಕ್ತವಾಗಬಹುದು ಎಂಬ ದೃಷ್ಟಿಯಿಂದ ನನ್ನ ಕೈಲಾದ ಮಟ್ಟಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ’ ಎಂದರು ಪಾಂಡುರಂಗ ಎಂ. ಸ್ವಾಮಿ.

ಅವರು ಪಟ್ಟಣದಲ್ಲಿ 20 ವರ್ಷಗಳಿಂದ ‘ಪಾಂಡು ಆರ್ಟ್ಸ್‌’ ಎಂಬ ಹೆಸರಿನಲ್ಲಿ ಬ್ಯಾನರ್‌, ಬೋರ್ಡ್‌ ಬರೆಯುವ, ಸ್ಟಿಕರ್‌ ತಯಾರಿಕೆಯ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ವಿಶಿಷ್ಟವಾದ ಸೇವೆ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು ಸೇರಿದಂತೆ ‘ಕೊರೊನಾ ಯೋಧ’ರಿಗೆ, ಅವರಿದ್ದ ಸ್ಥಳಕ್ಕೆ ಹೋಗಿ, ನೀರಿನ ಬಾಟಲ್‌ಗಳನ್ನು ಹಾಗೂ ಬಿಸ್ಕಿಟ್‌ ಅನ್ನು ನೀಡಿದ್ದಾರೆ. ರಸ್ತೆ ಬದಿಯಲ್ಲಿ ಕಂಡುಬಂದ ನಿರ್ಗತಿಕರಿಗೆ ಮತ್ತು ಬೇರೆ ಊರಿನಿಂದ ಬಂದು ಊಟವಿಲ್ಲದೇ ಕಷ್ಟಪಡುತ್ತಿದ್ದವರಿಗೆ, ತಮ್ಮ ಮನೆಯಿಂದ ಊಟ ಒಯ್ದು ನೀಡಿದ್ದಾರೆ.

ADVERTISEMENT

ಪಡಿತರ ಅಂಗಡಿಗಳಿಗೆ ಅಥವಾ ಆಸ್ಪತ್ರೆಗಳಿಗೆ ಹೋಗಲು ಕಷ್ಟಪಡುತ್ತಿದ್ದವರನ್ನು ಸ್ವಂತ ಕಾರಿನಲ್ಲಿಯೇ ಕರೆದುಕೊಂಡು ಹೋಗಿದ್ದಾರೆ. ಕೆಲಸವಾದ ನಂತರ ಮನೆಗೂ ತಲುಪಿಸಿ ಬಂದಿದ್ದಾರೆ. ಆರಂಭದಲ್ಲಿ ದಿನಸಿ ಇಲ್ಲವಾಗಿದ್ದ ಕೆಲವರಿಗೆ ದಿನಸಿ ಕಿಟ್‌ ನೀಡಿದ್ದಾರೆ. ಇದನ್ನೆಲ್ಲ ಒಂದಲ್ಲ, ಎರಡಲ್ಲ 58 ದಿನಗಳ ಕಾಲ ಮಾಡಿದ್ದಾರೆ.

ಸಿದ್ದಾಪುರದ ಪಾಂಡುರಂಗ ಎಂ. ಸ್ವಾಮಿ ಅವರು ತಮ್ಮ ‘ಪಾಂಡು ಆರ್ಟ್ಸ್’ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು

‘ಲಾಕ್‌ಡೌನ್‌ ಸಂದರ್ಭದಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಕೊರೊನಾ ಯೋಧರನ್ನು ನೋಡಿ, ಅವರಿಗೆ ಸಹಾಯ ಮಾಡಬೇಕು ಎಂದುಕೊಂಡೆ. ಅದರಂತೆ ಬಡವರು, ನಿರ್ಗತಿಕರು ಕಷ್ಟ ಪಡುತ್ತಿರುವುದನ್ನು, ವಯಸ್ಸಾದವರು ಪಡಿತರ ತರಲು, ಆಸ್ಪತ್ರೆಗಳಿಗೆ ಹೋಗಲು ಪರದಾಡುತ್ತಿದ್ದುದನ್ನು ಗಮನಿಸಿ, ಈ ಕೆಲಸ ಮಾಡಿದೆ’ ಎಂದು ಪಾಂಡುರಂಗ ಸ್ವಾಮಿ ಮುಗುಳ್ನಕ್ಕರು.

‘ನನ್ನ ಕಾರ್ಯವನ್ನು ಸಾರ್ವಜನಿಕರು ಮೆಚ್ಚಿಕೊಂಡರು. ಹಿರಿಯರು ಆಶೀರ್ವದಿಸಿದರು. ಇದಕ್ಕಿಂತ ಹೆಚ್ಚಿನ ತೃಪ್ತಿ ಬೇರೇನಿದೆ’ ಎಂದು ಅವರು ಸಂತಸದಿಂದಲೇ ಪ್ರಶ್ನಿಸಿದರು.

ಕ್ರೀಡಾಪಟು ಕೂಡ ಆಗಿರುವ ಪಾಂಡುರಂಗ ಸ್ವಾಮಿ ಅವರಿಗೆ, ‘ಗೌತಮ ಬುದ್ಧ ಫೆಲೋಶಿಪ್‌ ನ್ಯಾಷನಲ್‌ ಅವಾರ್ಡ್‌’ ಕೂಡ ‍ಪ್ರದಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.