ಕಾರವಾರ: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ 29ನೇ ಚಾತುರ್ಮಾಸ್ಯದ ಅಂಗವಾಗಿ ಗೋಕರ್ಣದ ಅಶೋಕೆಯಲ್ಲಿ ಮಂಗಳವಾರ, ಪುರಪ್ರವೇಶ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ಚಾತುರ್ಮಾಸ್ಯವು ಜುಲೈ 13ರಂದು ಆರಂಭವಾಗಲಿದೆ.
ಮಧ್ಯಾಹ್ನ 2.30ಕ್ಕೆ ನಡೆಯುವ ಧರ್ಮಸಭೆಯಲ್ಲಿ ಸ್ವಾಮೀಜಿ ಚಾತುರ್ಮಾಸ್ಯ ಸಂದೇಶ ನೀಡುವರು. ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸುವರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆರಂಭಕ್ಕೆ ಪೂರ್ವಭಾವಿಯಾಗಿ, ಎರಡು ವರ್ಷಗಳಿಂದ ಗುರುಕುಲಗಳು ಕಾರ್ಯಾರಂಭ ಮಾಡಿವೆ. ಸಮಾಜಕ್ಕೆ ಅವುಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಚಾತುರ್ಮಾಸ್ಯವನ್ನು, ‘ಗುರುಕುಲ ಚಾತುರ್ಮಾಸ್ಯ’ವಾಗಿ ಹಮ್ಮಿಕೊಳ್ಳಲಾಗಿದೆ.
ಜುಲೈ 16ರಂದು ಶ್ರೀ ವರ್ಧಂತಿ, ಆ.19ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಆ.31ರಂದು ಗಣೇಶ ಚತುರ್ಥಿಯಂಥ ವಿಶೇಷ ಕಾರ್ಯಕ್ರಮಗಳು ಚಾತುರ್ಮಾಸ್ಯದ ಅವಧಿಯಲ್ಲಿ ನಡೆಯಲಿವೆ. ಸೆ.10ರಂದು ‘ಚಾತುರ್ಮಾಸ್ಯ ಪ್ರಶಸ್ತಿ’ ಪ್ರದಾನ ಹಾಗೂ ಸೀಮೋಲ್ಲಂಘನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.