ADVERTISEMENT

ಚಲಿಸುತ್ತಿದ್ದ ರೈಲಿಗೆ ಸಿಲುಕಿದ ವ್ಯಕ್ತಿಯನ್ನು ಪಾರು ಮಾಡಿದ ರೈಲ್ವೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 13:11 IST
Last Updated 24 ನವೆಂಬರ್ 2023, 13:11 IST
ಚಲಿಸುತ್ತಿದ್ದ ರೈಲಿನಲ್ಲಿ ಸಿಲುಕಿದ ಪ್ರಯಾಣಿಕನನ್ನು ರೈಲ್ವೆ ಸಿಬ್ಬಂದಿ ಯೊಗೇಶ ನಾಯ್ಕ ಪಾರು ಮಾಡಿದರು
ಚಲಿಸುತ್ತಿದ್ದ ರೈಲಿನಲ್ಲಿ ಸಿಲುಕಿದ ಪ್ರಯಾಣಿಕನನ್ನು ರೈಲ್ವೆ ಸಿಬ್ಬಂದಿ ಯೊಗೇಶ ನಾಯ್ಕ ಪಾರು ಮಾಡಿದರು   

ಭಟ್ಕಳ: ಚಲಿಸುತ್ತಿದ್ದ ರೈಲನ್ನು ಏರಲು ಹೋದ ಪ್ರಯಾಣಿಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ರೈಲಿಗೆ ಸಿಲುಕುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೊಂಕಣ ರೈಲ್ವೆ ಸಿಬ್ಬಂದಿ ತಕ್ಷಣವೇ ಅವರನ್ನು ಹಿಡಿದು ಅಪಾಯದಿಂದ ಪಾರು ಮಾಡಿದ್ದಾರೆ.

ಘಟನೆ ನಡೆದಿರುವುದು ಕಳೆದ ಭಾನುವಾರ ರಾತ್ರಿ. ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಭಾನುವಾರ ರಾತ್ರಿ ಗೋವಾದ ಮಡಗಾಂನಿಂದ ಎರ್ನಾಕುಲಂ ಕಡೆಗೆ ಸಾಗುತ್ತಿದ್ದ ರೈಲು (ಸಂಖ್ಯೆ 10215) ಭಟ್ಕಳದಲ್ಲಿ ನಿಲುಗಡೆಯಾಗಿತ್ತು. ರೈಲು ಪುನಃ ಹೊರಡುವಾಗ ಒಬ್ಬ ಪ್ರಯಾಣಿಕ ರೈಲು ಏರುವಾಗ ಎಡವಿದಂತೆ ತೋರಿತು. ಇದನ್ನು ಅರಿತ ಕೊಂಕಣ ರೈಲ್ವೆ ಪಾಯಿಂಟ್ಸ್‌ಮನ್ ಮಣ್ಕುಳಿಯ ಯೊಗೇಶ ನಾಯ್ಕ ಓಡಿಬಂದ ಅವರನ್ನು ರೈಲು ಏರಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ಅವರ ಒಂದು ಕಾಲು ರೈಲಿನಿಂದ ಕೆಳಗೆ ಜಾರಿತು. ಇನ್ನೇನು ರೈಲಿನ ಕೆಳಗೆ ಸಿಲುಕುತ್ತಾರೆ ಎನ್ನುವಾಗ ಯೋಗೇಶ ಸಮಯಪ್ರಜ್ಞೆಯಿಂದ ಅವರನ್ನು ಪ್ಲಾಟ್‌ಫಾರಂ ಕಡೆಗೆ ಎಳೆದು ಜೀವ ಉಳಿಸಿದ್ದಾರೆ. ನಂತರ ರೈಲು ನಿಲುಗಡೆಗೆ ಬ್ಯಾಟರಿಯಿಂದ ಸಿಗ್ನಲ್ ತೋರಿಸಿ ಪ್ರಯಾಣಿಕನನ್ನು ಪುನಃ ರೈಲಿಗೆ ಹತ್ತಿಸಿ ಕಳುಹಿಸಿದ್ದಾರೆ.

ತಮ್ಮನ್ನು ಪಾರು ಮಾಡಿದ ಯೊಗೇಶ ನಾಯ್ಕ ಅವರಿಗೆ ಪ್ರಯಾಣಿಕ ಧನ್ಯವಾದ ಅರ್ಪಿಸಿ ಪ್ರಯಾಣ ಮುಂದುವರಿಸಿದರು. ಸಿಸಿಟಿವಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮಣ್ಕುಳಿಯ ಯೊಗೇಶ ನಾಯ್ಕ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.